ADVERTISEMENT

ಮೂವರು ಡಿಸಿಎಂ | ಅಮಿತ್‌ ಶಾ ತಿಳಿವಳಿಕೆ ಪ್ರಶ್ನಿಸಲಾಗದು: ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2019, 11:40 IST
Last Updated 31 ಆಗಸ್ಟ್ 2019, 11:40 IST
ಮಾಧುಸ್ವಾಮಿ
ಮಾಧುಸ್ವಾಮಿ   

ಮಂಡ್ಯ: ‘ಬಿಜೆಪಿ ಹೈಕಮಾಂಡ್‌ ಯಾವ ಕಾರಣಕ್ಕೆ ಮೂವರು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸಿದೆಯೋ ಗೊತ್ತಿಲ್ಲ. ಅದು ಅಮಿತ್‌ ಶಾ ಅವರ ತಿಳಿವಳಿಕೆಯಾಗಿದ್ದು ಅದನ್ನು ನಾವು ಪ್ರಶ್ನಿಸಲು ಸಾಧ್ಯವಿಲ್ಲ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಮಾಧುಸ್ವಾಮಿ ಶನಿವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಮೇಲಿನವರು ಕೈಗೊಂಡ ತೀರ್ಮಾನದಿಂದ ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದು ನಾನು ನಂಬಿದ್ದೇನೆ. ಅವರಿಗೆ ನಮಗಿಂತಲೂ ಹೆಚ್ಚಿನ ತಿಳಿವಳಿಕೆ ಇದೆ. ಮೂವರಿಗೆ ಡಿಸಿಎಂ ಸ್ಥಾನ ನೀಡಿರುವುದನ್ನು ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ವಿರೋಧಿಸಿದ್ದರೆ ಅದು ಅವರ ವೈಯಕ್ತಿಕ ಅಭಿಪ್ರಾಯ. ಒಬ್ಬೊಬ್ಬರದು ಒಂದೊಂದು ಅಭಿಪ್ರಾಯವಿರುತ್ತದೆ’ ಎಂದು ಹೇಳಿದರು.

‘ಸಚಿವ ಸ್ಥಾನ ಸಿಗದಿದ್ದಾಗ ಭಿನ್ನಮತಗಳು ಸಾಮಾನ್ಯ. ಗ್ರಾಮ ಪಂಚಾಯಿತಿ ಸದಸ್ಯನಾದಾಗ ಅಧ್ಯಕ್ಷನಾಗಬೇಕು ಎಂಬ ಆಸೆ ಇರುತ್ತದೆ. ಅದೇ ರೀತಿ ಎಂಎಲ್‌ಎ ಆದಾಗ ಸಚಿವನಾಗಬೇಕು ಎಂಬ ಆಕಾಂಕ್ಷೆ ಇರುವುದು ಸಾಮಾನ್ಯ’ ಎಂದರು.

ADVERTISEMENT

‘ಪ್ರವಾಹದಿಂದಾಗಿ ₹ 32 ಸಾವಿರ ಕೋಟಿ ನಷ್ಟವಾಗಿರುವ ಬಗ್ಗೆ ಸಮೀಕ್ಷೆ ಮಾಡಲಾಗಿದೆ. ತುರ್ತಾಗಿ ಮಾಡಬೇಕಾಗಿದ್ದನ್ನು ರಾಜ್ಯ ಸರ್ಕಾರ ನಿರ್ವಹಣೆ ಮಾಡಿದೆ. ಸೆ.7ರಂದು ಪ್ರಧಾನ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದು ಅವರಿಗೆ ನಷ್ಟದ ವಿಚಾರವಾಗಿ ಪ್ರಸ್ತಾಪ ಸಲ್ಲಿಸಲಾಗುವುದು. ಕೇಂದ್ರ ಸರ್ಕಾರ ಅಗತ್ಯ ನೆರವು ನೀಡುವ ಭರವಸೆ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.