ADVERTISEMENT

ಅಧಿಕಾರ ಕೊಟ್ಟಾಗ ಅಭಿವೃದ್ಧಿ ಮಾಡದ ಜೆಡಿಎಸ್‌: ಅಶ್ವತ್ಥ ನಾರಾಯಣ

ಬಿಜೆಪಿ ವಿಜಯ ಸಂಕಲ್ಪ ಯಾತ್ರೆ; ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 16:05 IST
Last Updated 28 ಜನವರಿ 2023, 16:05 IST
ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರು ಶನಿವಾರ ಮಂಡ್ಯದ ಗಾಂಧಿನಗರಕ್ಕೆ ಭೇಟಿ ನೀಡಿ ಮನೆಮನೆಗೆ ಬಿಜೆಪಿ ಸರ್ಕಾರದ ಸಾಧನೆಗಳ ಕರಪತ್ರ ವಿತರಣೆ ಮಾಡಿದರು. ಅಶೋಕ್‌ ಜಯರಾಂ, ಎಂ.ಪಿ.ಅರುಣ್‌ ಕುಮಾರ್‌, ಮಂಜುನಾಥ್‌ ಇದ್ದರು
ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರು ಶನಿವಾರ ಮಂಡ್ಯದ ಗಾಂಧಿನಗರಕ್ಕೆ ಭೇಟಿ ನೀಡಿ ಮನೆಮನೆಗೆ ಬಿಜೆಪಿ ಸರ್ಕಾರದ ಸಾಧನೆಗಳ ಕರಪತ್ರ ವಿತರಣೆ ಮಾಡಿದರು. ಅಶೋಕ್‌ ಜಯರಾಂ, ಎಂ.ಪಿ.ಅರುಣ್‌ ಕುಮಾರ್‌, ಮಂಜುನಾಥ್‌ ಇದ್ದರು   

ಮಂಡ್ಯ: ‘ಜೆಡಿಎಸ್ ಮಂಡ್ಯ ಜಿಲ್ಲೆಯನ್ನು ತನ್ನ ಭದ್ರಕೋಟೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಅವರಿಗೆ ಅಧಿಕಾರ ಕೊಟ್ಟಾಗ ಮೈಷುಗರ್ ಕಾರ್ಖಾನೆಯನ್ನಾಗಲಿ, ಪಿಎಸ್‌ಎಸ್‌ಕೆಯನ್ನಾಗಲಿ ಆರಂಭ ಮಾಡಲಿಲ್ಲ. ಎರಡೂ ಕಾರ್ಖಾನೆ ಆರಂಭಕ್ಕಾಗಿ ಬಿಜೆಪಿಯೇ ಬರಬೇಕಾಯಿತು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಹೇಳಿದರು.

ಶ್ರೀರಂಗಪಟ್ಟಣ ವಿಧಾನಸಭಾ ವ್ಯಾಪ್ತಿಯ ಸುಂಡಹಳ್ಳಿ ಹಾಗೂ ಮಂಡ್ಯ, ಗಾಂಧಿನಗರದಲ್ಲಿ ಶನಿವಾರ ನಡೆದ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮುಖಂಡರ ಬಣ್ಣದ ಮಾತುಗಳಿಗೆ ಜನರು ಮರುಳಾಗಬಾರದು. ಜಿಲ್ಲೆ ಎಲ್ಲಾ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ದಾಖಲಿಸಬೇಕು ಎನ್ನುವುದು ಪಕ್ಷದ ಗುರಿಯಾಗಿದೆ. ಈ ನಿಟ್ಟಿನಲ್ಲಿ ಮನೆಮನೆಗೆ ರಾಜ್ಯ ಸರ್ಕಾರದ ಸಾಧನೆ, ನರೇಂದ್ರ ಮೋದಿ ಅವರ ಸಾಧನೆಗಳನ್ನು ತಲುಪಿಸಲಾಗುತ್ತಿದೆ’ ಎಂದರು.

‘ರಾಜ್ಯದಲ್ಲಿ ಪಕ್ಷಕ್ಕೆ ಹೊಸದಾಗಿ 1 ಕೋಟಿ ಜನರನ್ನು ಸದಸ್ಯರನ್ನಾಗಿ ಮಾಡಿಕೊಳ್ಳುವುದೇ ವಿಜಯ ಸಂಕಲ್ಪ ಅಭಿಯಾನದ ಗುರಿಯಾಗಿದೆ. ಈ ನಿಟ್ಟಿನಲ್ಲಿ ಅಭಿಯಾನವನ್ನು ಫೆ.5ರವರೆಗೂ ವಿಸ್ತರಿಸಲಾಗಿದೆ. ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ನಮ್ಮ ಸರ್ಕಾರ ನೀಡಿರುವ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಉತ್ತಮ ಅಭಿಪ್ರಾಯವಿದೆ’ ಎಂದರು.

ADVERTISEMENT

‘ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರತಿ ದಿನವೂ ಬಿಜೆಪಿ ವಿರುದ್ಧ ಆರೋಪ ಮಾಡಿಕೊಂಡು ಓಡಾಡುತ್ತಿದ್ದಾರೆ. ಆದರೆ ಅವರ ಕಾಲದಲ್ಲಿ ಅರ್ಜಿ ಹಾಕದಿದ್ದ ವ್ಯಕ್ತಿಗೂ ಶಿಕ್ಷಕ ಹುದ್ದೆ ಕೊಟ್ಟಿದ್ದರು. ಪಿಎಸ್ಐ ನೇಮಕಾತಿ ಹಗರಣ ಕೂಡ ಅವರ ಕಾಲದ ಕರ್ಮಕಾಂಡವಾಗಿದೆ. ಇವೆಲ್ಲವನ್ನೂ ಬಿಜೆಪಿ ಸರ್ಕಾರ ಬಯಲಿಗೆ ಎಳೆದಿದೆ. ಅವರ ಅಧಿಕಾರದ ಅವಧಿಯಲ್ಲಿ ಹಲವು ಅಕ್ರಮಗಳನ್ನು ಅವರು ಎಸಗಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯೇ ಅವರಿಗಿಲ್ಲ’ ಎಂದು ಆರೋಪಿಸಿದರು.

ಬಿಜೆಪಿ ಮುಖಂಡ ಅಶೋಕ್ ಜಯರಾಮ್ ಮಾತನಾಡಿ ‘ವಿಜಯ ಸಂಕಲ್ಪ ಅಭಿಯಾನದ ರಾಜ್ಯ ಸಂಚಾಲಕರಾಗಿರುವ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್‌ ಅವರು ಮಂಡ್ಯಕ್ಕೆ ಬಂದಿರುವುದು ನಮ್ಮ ಕಾರ್ಯಕರ್ತರಿಗೆ ಹೊಸ ಹುರುಪು ನೀಡಿದಂತಾಗಿದೆ’ ಎಂದರು.

‘ಪ್ರತಿಯೊಬ್ಬ ನಾಗರಿಕರಿಗೂ ಬಿಜೆಪಿ ಕೇಂದ್ರ ಮತ್ತು ರಾಜ್ಯಸರ್ಕಾರಗಳ ಯೋಜನೆಗಳು ತಲುಪುತ್ತಿದ್ದು ಎಲ್ಲರೂ ಫಲಾನುಭವಿಗಳೇ ಆಗಿದ್ದಾರೆ. ಪ್ರತಿ ವಾರ್ಡ್‌ನ ಬಿಜೆಪಿ ಕಾರ್ಯಕರ್ತರ ಮನೆ ಮೇಲೆ ಬಿಜೆಪಿ ಧ್ವಜ ಹಾರಿಸಲಾಗುವುದು. ಮನೆ ಮಾಲೀಕರ ಅನುಮತಿ ಪಡೆದು ಬಿಜೆಪಿ ಚಿನ್ಹೆ, ಭರವಸೆಯ ಬಿಜೆಪಿ ಕರಪತ್ರ ಅಂಟಿಸವ ಕಾರ್ಯ ಈಗಾಗಲೇ ನಡೆಯುತ್ತಿದೆ. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ’ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಮುಖಂಡರಾದ ಚಂದಗಾಲು ಶಿವಣ್ಣ, ಡಾ.ಇಂದ್ರೇಶ್, ನಗರಸಭೆ ಸದಸ್ಯ ಎಂ.ಪಿ.ಅರುಣ್‌ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.