ADVERTISEMENT

ಸಿಗದ ನಿರೀಕ್ಷಿತ ಅನುದಾನ; ಅಭಿವೃದ್ಧಿಗೆ ತೊಡಕು- ಜೆಡಿಎಸ್‌ ಶಾಸಕ ಮಂಜು ಬೇಸರ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 12:57 IST
Last Updated 6 ಫೆಬ್ರುವರಿ 2026, 12:57 IST
   

ಮಂಡ್ಯ: ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆ.ಆರ್. ಪೇಟೆ ಕ್ಷೇತ್ರದ ಅಭಿವೃದ್ಧಿಗೆ ನೀಡಿದ್ದ ಸುಮಾರು ₹100 ಕೋಟಿ ಅನುದಾನವನ್ನು ಇಂದಿನ ಕಾಂಗ್ರೆಸ್ ಸರ್ಕಾರ ಯಾವುದೇ ಕಾರಣ ನೀಡದೆ ವಾಪಸ್ ಪಡೆದುಕೊಂಡಿದೆ. ಅನುದಾನ ಕೊರತೆಯಿಂದ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಆಗುತ್ತಿಲ್ಲ’ ಎಂದು ಕೆ.ಆರ್‌. ಪೇಟೆ ಶಾಸಕ ಎಚ್‌.ಟಿ. ಮಂಜು ಅಸಮಾಧಾನ ವ್ಯಕ್ತಪಡಿಸಿದರು. 

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಣ್ಣ ನೀರಾವರಿ ಮತ್ತು ಜಲಸಂಪನ್ಮೂಲ ಯೋಜನೆಗಳಿಗೆ ಸಂಬಂಧಿಸಿದ ₹60 ಕೋಟಿ, ಲೋಕೋಪಯೋಗಿ ಯೋಜನೆಗಳಿಗೆ ಸಂಬಂಧಿಸಿದ ಅನುದಾನಗಳನ್ನು ತಾಂತ್ರಿಕ ಮತ್ತು ಇತರೆ ಕಾರಣ ನೀಡಿ, ವಾಪಸ್‌ ಪಡೆಯಲಾಗಿದೆ. ಹೀಗಾಗಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡರು ಪದೇ ಪದೇ ಅನುದಾನ ತಂದೆ ಎಂಬ ಮಾತುಗಳನ್ನು ಆಡಬಾರದು ಎಂದು ಹೇಳಿದರು. 

‘ನನ್ನ ಅವಧಿಯಲ್ಲಿ ಕೆ.ಆರ್‌. ಪೇಟೆ ಕ್ಷೇತ್ರಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಕೆ.ಆರ್. ಪೇಟೆ ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಹಣ ನೀಡುವಂತೆ ಮನವಿ ಮಾಡಿದ್ದರಿಂದ ₹100 ಕೋಟಿ ನೀಡಿದ್ದಾರೆ. ಲೋಕೋಪಯೋಗಿ ಇಲಾಖೆಗೆ ₹10 ಕೋಟಿ ಹಾಗೂ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ₹25 ಕೋಟಿ ಅನುದಾನ ಬಂದಿದೆ. ಆದರೆ ಕಾಂಗ್ರೆಸ್‌ ಶಾಸಕರ ಕ್ಷೇತ್ರಕ್ಕಿಂತ ಕಡಿಮೆ ಅನುದಾನ ಸಿಕ್ಕಿದೆ’ ಎಂದು ಹೇಳುವ ಮೂಲಕ ಅನುದಾನ ಬಿಡುಗಡೆಯಲ್ಲಿ ತಾರತಮ್ಯವಾಗಿರುವುದನ್ನು ಪರೋಕ್ಷವಾಗಿ ಹೇಳಿದರು. 

ADVERTISEMENT

ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿಲ್ಲ:

ಬಿಜೆಪಿಯ ಯಾವೊಬ್ಬ ಕಾರ್ಯಕರ್ತರಿಗೆ ಜೆಡಿಎಸ್‌ ಶಾಲು ಹೊದಿಸಿ ಪಕ್ಷಕ್ಕೆ ಆಹ್ವಾನಿಸಿಲ್ಲ. ಪುರಸಭೆ ಮಾಜಿ ಸದಸ್ಯ ನಂದೀಶ್ ಅವರು ಹುಟ್ಟುಹಬ್ಬದ ದಿನದಂದು ನನ್ನ ಮನೆಗೆ ಬಂದಾಗ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದ್ದೇನೆಯೇ ಹೊರತು ಜೆಡಿಎಸ್‌ಗೆ ಸೇರ್ಪಡೆ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್‌, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಲದೇವ್, ಜಿಲ್ಲಾ ಯುವ ಜೆಡಿಎಸ್‌ ಘಟಕದ ಅಧ್ಯಕ್ಷ ಕಂಸಾಗರ ರವಿ, ತಾ.ಪಂ. ಮಾಜಿ ಸದಸ್ಯ ಮೋಹನ್, ಮಹದೇವ ಹಾಜರಿದ್ದರು.

‘ಸಂಘರ್ಷದ ಹೇಳಿಕೆ ಸಲ್ಲದು’

ಕೆ.ಆರ್.ಪೇಟೆಗೆ ನಿಖಿಲ್‌ ಕುಮಾರಸ್ವಾಮಿ ಬಂದ ಸಂದರ್ಭದಲ್ಲಿ 2028ಕ್ಕೂ ಮುನ್ನ ಸ್ಥಳೀಯ ಸಂಸ್ಥೆ ಚುನಾವಣೆ ಬರಲಿವೆ. ಹಾಗಾಗಿ ಅಭ್ಯರ್ಥಿ ಆಯ್ಕೆಗೂ ಮುನ್ನ ಚುನಾವಣೆಯತ್ತ ಗಮನಹರಿಸಿ ಎಂದ ಕಾರ್ಯಕರ್ತರಿಗೆ ಹೇಳಿದ್ದಾರೆಯೇ ಹೊರತು ನನ್ನನ್ನೇ ಮುಂದಿನ ಅಭ್ಯರ್ಥಿ ಎಂದು ಘೋಷಿಸಿಲ್ಲ ಎಂದು ಶಾಸಕ ಎಚ್‌.ಟಿ.ಮಂಜು ಸ್ಪಷ್ಟಪಡಿಸಿದರು.

ಪಕ್ಷ ಸಂಘಟನೆ ದೃಷ್ಟಿಯಿಂದ ನಿಖಿಲ್‌ ಹೇಳಿರುವ ಮಾತಿಗೆ ಅಪಾರ್ಥ ಕಲ್ಪಿಸುವುದು ಬೇಡ. ಮುಂದಿನ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯನ್ನು ಜೆಡಿಎಸ್‌- ಬಿಜೆಪಿಯ ವರಿಷ್ಠರು ತೀರ್ಮಾನಿಸಲಿದ್ದಾರೆ. ಮಾಜಿ ಸಚಿವ ಕೆ.ಸಿ. ನಾರಾಯಣಗೌಡ ಅವರ ಬಗ್ಗೆ ಅಪಾರ ಗೌರವವಿದೆ. ಅವರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಸಂಘರ್ಷಕ್ಕೆ ಎಡೆಮಾಡಿ ಕೊಡಬಾರದು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.