ADVERTISEMENT

ಜೆಡಿಎಸ್ ಸಾಮರ್ಥ್ಯ ಮೂರ್ನಾಲ್ಕು ಜಿಲ್ಲೆಗೆ: ಸಿ.ಡಿ.ಗಂಗಾಧರ್

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 2:55 IST
Last Updated 8 ಜುಲೈ 2025, 2:55 IST
ಸಿ.ಡಿ.ಗಂಗಾಧರ್
ಸಿ.ಡಿ.ಗಂಗಾಧರ್   

ಕೆ.ಆರ್.ಪೇಟೆ: ಜೆಡಿಎಸ್ ಪಕ್ಷವು ಮೂರ್ನಾಲ್ಕು ಜಿಲ್ಲೆಗೆ ಸೀಮಿತವಾದ ಪಕ್ಷವಾಗಿದ್ದು ರಾಜ್ಯದಾದ್ಯಂತ ಅಭ್ಯರ್ಥಿ ಹಾಕುವ ಶಕ್ತಿ ಇಲ್ಲದ ಪಕ್ಷವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಟೀಕಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಜೆಡಿಎಸ್ ಪಕ್ಷ ಮುಳುಗುವ ಹಡಗಾಗಿದೆ. ಹಾಗಾಗಿಯೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿ ಗೆದ್ದರೂ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 7ಕ್ಕೆ 7 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ’ ಎಂದು ಭವಿಷ್ಯ ನುಡಿದರು.

ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಟೀಕೆ ಮಾಡುವ ನೈತಿಕತೆ ನಿಖಿಲ್ ಗೆ ಇಲ್ಲ. ಪಕ್ಷ ಕಟ್ಟಿದ ಹಲವು ನಾಯಕರು ಹೊರ ಬಂದ ಮೇಲೆ ಪಕ್ಷ ದಯನೀಯ ಸ್ಥಿತಿಗೆ ಹೋಯಿತೆಂಬುದನ್ನು ಮರೆಯದಿರಲಿ’ ಎಂದು ವ್ಯಂಗ್ಯವಾಡಿದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ.ಡಿ.ಕೃಷ್ಣಮೂರ್ತಿ, ಸಿ.ಆರ್.ರಮೇಶ್, ಅಗ್ರಹಾರಬಾಚಹಳ್ಳಿ ಕುಮಾರ್, ಬಸ್ತಿ ರಂಗಪ್ಪ, ಟಿ.ಎನ್.ದಿವಾಕರ್, ರಾಜಯ್ಯ ಇದ್ದರು.

ಜೆಡಿಎಸ್‌ನಿಂದ ಬೆಳೆದವರಿಂದಲೇ ಕಾಂಗ್ರೆಸ್ ಸರ್ಕಾರ: ತಿರುಗೇಟು

ಕೆ.ಆರ್.ಪೇಟೆ: ‘ಜನತಾಪರಿವಾದಿಂದ ಬೆಳೆದು ನಾಯಕರಾಗಿ ಜೆಡಿಎಸ್ ಪಕ್ಷಕ್ಕೆ ದ್ರೋಹ ಮಾಡಿ ಹೋದವರ ಬಲದಿಂದಲೇ ಕಾಂಗ್ರೆಸ್ ಪಕ್ಷ ಇಂದು ರಾಜ್ಯದಲ್ಲಿ ಅಧಿಕಾರದಲ್ಲಿದೆಯೇ ಹೊರತು ಮೂಲ ಕಾಂಗ್ರೆಸ್ಸಿಗರ ಶಕ್ತಿಯಿಂದಲ್ಲ’ ಎಂದು ತಾಲ್ಲುಕು ರೈತ ಮೋರ್ಚಾ ಘಟಕದ ಅಧ್ಯಕ್ಷ ಬೂಕನಕೆರೆ ಹುಲ್ಲೇಗೌಡ ತಿರುಗೇಟು ನೀಡಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಮುಖಂಡರು, ‘ಈ ದಿನ ಮಾನದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಮುನ್ನಡೆಸುತ್ತಿರುವ ಬಹುತೇಕರು ಜನತಾಪರಿವಾರದಿಂದ ಬಂದವರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎನ್. ಚಲುವರಾಯಸ್ವಾಮಿ,ಜಮೀರ್ ಅಹಮದ್, ಸೇರಿದಂತೆ ಹಲವರು ತಾವು ಜೆಡಿಎಸ್ ಮತ್ತು ಜನತಾಪರಿವಾರದಿಂದ ಬಂದಿಲ್ಲ ಎಂದು ಎದೆತಟ್ಟಿ ಹೇಳಲಿ’ ಎಂದು ಸವಾಲು ಹಾಕಿದರು.

ಜೆಡಿಎಸ್ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಿ ಎಂದು ಮುಖಂಡರು ಎಚ್ಚರಿಕೆ ನೀಡಿದರು.

ಜೆಡಿಎಸ್ ಪ್ರಮುಖರಾದ ಮಲ್ಲೇನಹಳ್ಳಿ ಮೋಹನ್, ಅಲೋಕ್ ಚಂದ್ರವಡ್ಡರಹಳ್ಳಿ ಮಹದೇವೇಗೌಡ, ಎಚ್.ಡಿ.ಅಶೋಕ್, ಬಲದೇವ್, ಬೋರ್ ವೆಲ್ ಮಹೇಶ್, ಬಸವಲಿಂಗಪ್ಪ, ರವಿಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.