ADVERTISEMENT

JDS ಕಾರ್ಯಕರ್ತರ ಪಕ್ಷ; ಬೂತ್ ಮಟ್ಟದಿಂದ ಸದೃಢಗೊಳಿಸುವುದೇ ನನ್ನ ಗುರಿ: ನಿಖಿಲ್

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 13:56 IST
Last Updated 1 ಜುಲೈ 2025, 13:56 IST
ಕೆ.ಆರ್.ಪೇಟೆ  ಪಟ್ಟಣದ  ಟಿ.ಎ.ಪಿಸಿಎಂಎಸ್ ಆವರಣದಲ್ಲಿ  ಆಯೋಜಿಸಿದ್ದ ಜನರೊಂದಿಗೆ ಜನತಾದಳ  ಕಾರ್ಯಕ್ರಮಕ್ಕೆಎ ಆಗಮಿಸಿದ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ  ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಕರೆದೊಯ್ಯಲಾಯಿತು.
ಕೆ.ಆರ್.ಪೇಟೆ  ಪಟ್ಟಣದ  ಟಿ.ಎ.ಪಿಸಿಎಂಎಸ್ ಆವರಣದಲ್ಲಿ  ಆಯೋಜಿಸಿದ್ದ ಜನರೊಂದಿಗೆ ಜನತಾದಳ  ಕಾರ್ಯಕ್ರಮಕ್ಕೆಎ ಆಗಮಿಸಿದ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ  ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಕರೆದೊಯ್ಯಲಾಯಿತು.   

ಕೆ.ಆರ್.ಪೇಟೆ: ಜೆಡಿಎಸ್‌ ಕಾರ್ಯಕರ್ತರ ಪಕ್ಷವಾಗಿದೆ. ಅದನ್ನು ಯಾರಿಂದಲೂ ನಾಶಪಡಿಸಲು ಸಾಧ್ಯವಿಲ್ಲವೆಂದು ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಜೆಡಿಎಸ್‌ ಆಯೋಜಿಸಿದ್ದ ‘ಜನರೊಂದಿಗೆ ಜನತಾದಳ’ ಕಾರ್ಯಕ್ರಮದಲ್ಲಿ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಕಾರ್ಯಕರ್ತರೇ ನಮ್ಮ ಪಕ್ಷದ ಬೇರುಗಳಾಗಿದ್ದಾರೆ. ನಾಯಕರು ಬರುತ್ತಾರೆ, ಹೋಗುತ್ತಾರೆ. ಆದರೆ ಕಾರ್ಯಕರ್ತರ ಜೀವದಿಂದ ಪಕ್ಷ ಉಳಿದಿದೆ. ಹಾಗಾಗಿ ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸಬೇಕು, ಸದಸ್ಯತ್ವ ನೋಂದಣಿಯನ್ನು ಸಕ್ರಿಯವಾಗಿ ಮಾಡುವಂತೆ ಬ್ಲಾಕ್ ಮಟ್ಟದಲ್ಲಿ ಮುಖಂಡರನ್ನು ತಯಾರಿಗೊಳಿಸಬೇಕೆಂಬ ಉದ್ದೇಶದಿಂದ ಈ ಪ್ರವಾಸ ಮಾಡುತ್ತಿರುವೆ’ ಎಂದರು.

ADVERTISEMENT

‘ಸಂಕಷ್ಟದ ಸಮಯದಲ್ಲಿ ಜಿಲ್ಲೆ ನಮ್ಮ ಪಕ್ಷವನ್ನು ಕೈಹಿಡಿದಿದೆ. ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಸಿ.ಎಂ ಆಗಲು, ಕೇಂದ್ರದಲ್ಲಿ ಸಚಿವರಾಗಲು ಮಂಡ್ಯ ಜಿಲ್ಲೆಯ ಕೊಡುಗೆ ಇದೆ. ಇದನ್ನು ಪಕ್ಷ ಯಾವತ್ತೂ ಮರೆಯುವುದಿಲ್ಲ. ಎಚ್‌ಡಿಕೆ ಮತ್ತೆ ಸಿ.ಎಂ ಆದರೆ ರಾಜ್ಯದ ಮತ್ತು ಜಿಲ್ಲೆಯ ರೈತರ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲಿದ್ದಾರೆ. ಜೆಡಿಎಸ್‌ ಕುಟುಂಬದ ಪಕ್ಷ, ದೇವೇಗೌಡರು ಯಾರನ್ನು ಬೆಳೆಸಿಲ್ಲ ಎಂದು ಆರೋಪಿಸುವವರು ಜೆಡಿಎಸ್‌ನಲ್ಲಿ ಇದ್ದು, ಬೇರೆ ಪಕ್ಷಕ್ಕೆ ಹೋದವರ ಪಟ್ಟಿ ನೋಡಲಿ’ ಎಂದರು.

ಶಾಸಕ ಎಚ್.ಟಿ.ಮಂಜು ಮಾತನಾಡಿ, ‘ನಾನು‌ ಕೆಟ್ಟ ಪರಿಸ್ಥಿತಿಯಲ್ಲಿ ಶಾಸಕನಾಗಿದ್ದೇನೆ. ಕೊಟ್ಟ ಭರವಸೆಗಳನ್ನು ಈಡೇರಿಸಲು ಸರ್ಕಾರದಿಂದ ನನಗೆ ಸಹಕಾರ ಸಿಗುತ್ತಿಲ್ಲ‌. ಕೆರೆ,ಕಟ್ಟೆಗಳು ಒಡೆದಿದ್ದು ಅದರ ದುರಸ್ತಿಗೆ ಅನುದಾನ ಕೇಳಿದರು ಇನ್ನೂ ನೀಡಿಲ್ಲ. ವಿಧಾನಸಭೆ ಅಧಿವೇಶನದಲ್ಲೂ ಮಾತನಾಡಿದ್ದೇನೆ. ಮುಖ್ಯಮಂತ್ರಿ ಅವರಿಗೂ ಮನವಿ ಮಾಡಿದ್ದೇನೆ. ಬರುವ ಅನುದಾನವನ್ನು ಪ್ರಾಮಾಣಿಕವಾಗಿ ಹಂಚಿಕೆ ಮಾಡುತಿದ್ದೇನೆ. ಜೆಡಿಎಸ್ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಕಾರ್ಯಕರ್ತರೊಂದಿಗೆ ಸದಾ ಮುಂದಿರುವೆ’ ಎಂದರು.

ಜೆಡಿಎಸ್ ಪಕ್ಷದ ಜಿಲ್ಲಾ ಮತ್ತು ತಾಲ್ಲೂಕು ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಮತ್ತು ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ಪಕ್ಷದ ಕಾರ್ಯಕರ್ತರು ನಿಖಿಲ್ ಅವರಿಗೆ ಬೆಳ್ಳಿ ಗದೆ ಕಾಣಿಕೆ ನೀಡಿದರು. ಸಹಕಾರಿ ಧುರೀಣರನ್ನು ಸನ್ಮಾನಿಸಲಾಯಿತು.

‘ಸರ್ಕಾರದ ವಿರುದ್ಧ ಕಾಂಗ್ರೆಸ್‌ ಶಾಸಕರೇ ತಿರುಗಿಬಿದ್ದಿದ್ದಾರೆ’

ಕಾಂಗ್ರೆಸ್ ಪಕ್ಷದ ಶಾಸಕರೇ ಅನುದಾನದ ಕೊರತೆಯಿಂದ ಬೀದಿಗಿಳಿದು ಸರ್ಕಾರದ ವಿರುದ್ದ ಮಾತನಾಡುತಿದ್ದಾರೆ. ಅವರ ಪಕ್ಷದ ಹಿರಿಯರಾದ ಬಿ.ಆರ್.ಪಾಟೀಲರು ಬಹಿರಂಗ ಅಸಮದಾನ ವ್ಯಕ್ತಪಡಿಸಿ ಕನಿಷ್ಠ ಮೂಲ ಸೌಲಭ್ಯಕ್ಕೂ ಹಣ ಕೊಡ್ತಿಲ್ಲ ಎಂದಿದ್ದಾರೆ’ ಎಂದು ನಿಖಿಲ್‌ ಕುಮಾರಸ್ವಾಮಿ ಟೀಕಿಸಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು ‘ಕಾಂಗ್ರೆಸ್ ಶಾಸಕರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂದು ರೀತಿ ಲಾಟರಿ ಸಿ.ಎಂ ಎಂದು ಬಿರುದುಕೊಟ್ಟಿದ್ದಾರೆ’ ಎಂದು ಲೇವಡಿ ಮಾಡಿದರು. ಜೆಡಿಎಸ್ ಪಕ್ಷ ಶಕ್ತಿಹೀನವಾಗಿದೆ ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ ‘ನಮ್ಮ ಪಕ್ಷ ಯಾವಗಲೂ ಪವರ್ ಫುಲ್ ಆಗಿದೆ. ಸಿದ್ದರಾಮಯ್ಯ ಅವರು ತಮ್ಮ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸ ಮಾಡಲಿ. ನಮ್ಮ್ಮ ಪಕ್ಷದ ಬಗ್ಗೆ ಮಾತನಾಡುವುದು ಬೇಡ. ನೀವು ಇವತ್ತು ಸಿ.ಎಂ ಆಗಿರುವುದಕ್ಕೆ ಜೆಡಿಎಸ್ ಪಕ್ಷವು ನಿಮ್ಮನ್ನು ರಾಜ್ಯಮಟ್ಟದ ನಾಯಕನನ್ನಾಗಿ ಗುರುತಿಸಿ ಬೆಳೆಸಿದ್ದೇ ಕಾರಣ. ಆದರೆ ತಾವು ಜೆಡಿಎಸ್ ಪಕ್ಷಕ್ಕೆ ಏನು ಕೊಟ್ಟಿರಿ ಮಾತೃ ಸಮಾನವಾದ ಜೆಡಿಎಸ್‌ ಪಕ್ಷ ಬಿಟ್ಟು ಹೋದಿರಿ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.