ADVERTISEMENT

ಕಾಳೇನಹಳ್ಳಿಯಲ್ಲಿ ಗಮನ ಸೆಳೆದ ಮಕ್ಕಳ ಸಂತೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 6:40 IST
Last Updated 13 ಫೆಬ್ರುವರಿ 2026, 6:40 IST
ಕಿಕ್ಕೇರಿ ಹೋಬಳಿಯ ತುಳಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಮಕ್ಕಳ ಸಂತೆ ನಡೆಯಿತು 
ಕಿಕ್ಕೇರಿ ಹೋಬಳಿಯ ತುಳಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಮಕ್ಕಳ ಸಂತೆ ನಡೆಯಿತು    

ಕಿಕ್ಕೇರಿ: ಮಕ್ಕಳಿಗೆ ಪಠ್ಯದಷ್ಟೆ ಪಠ್ಯೇತರ ಚಟುವಟಿಕೆಗಳು ಮುಖ್ಯ ಎಂದು ಶಿಕ್ಷಣ ಸಂಯೋಜಕ ನವೀನ್‌ಕುಮಾರ್ ಹೇಳಿದರು.

ಹೋಬಳಿಯ ಕಾಳೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳಿಗೆ ಮಕ್ಕಳ ಸಂತೆ ಉತ್ತಮವಾದ ಕಾರ್ಯಕ್ರಮ. ಮಕ್ಕಳಿಗೆ ಜ್ಞಾನಕ್ಕೆ ಪೂರಕವಾಗಿ ಇಂತಹ ಕಾರ್ಯಕ್ರಮಗಳು ನಡೆಯುವುದರಿಂದ ಸರ್ವಾಂಗೀಣವಾಗಿ ವಿಕಸನವಾಗಲಿದ್ದಾರೆ. ಮಕ್ಕಳಿಗೆ ಅಂಕ ಗಳಿಕೆಗೆ ಜ್ಞಾನ ನೀಡುವ ವ್ಯವಹಾರಿಕ ಕಲಿಕೆ ಇದಾಗಿದೆ. ಬಾಲ್ಯದಿಂದಲೇ ಬದುಕಿನ ಕಲೆಗಾಗಿ ಕನಿಷ್ಠ ವ್ಯವಹಾರ ಜ್ಞಾನವನ್ನಾದರೂ ಕಲಿಯಬೇಕು. ಸುತ್ತಮುತ್ತಲ ದೈನಂದಿನ ಬದುಕಿಗೆ ಬೇಕಿರುವ ಸಾಮಾನು, ಸರಂಜಾಮು ಖರೀದಿಸುವ ಜ್ಞಾನ ಕೊಡುವ ಜೊತೆಗೆ ಹಣಕಾಸಿನ ವ್ಯವಹಾರವೂ ಇದರಿಂದ ತಿಳಿಯಲಿದೆ ಎಂದರು.

ADVERTISEMENT

ಇಂತಹ ಮೇಳಗಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಆತ್ಮಸ್ಥೈರ್ಯ ಕಲಿಸಲಿವೆ. ಹಣದ ಬೆಲೆಯನ್ನು ತಿಳಿಯಬಹುದಾಗಿದೆ. ವ್ಯಾವಹಾರಿಕ ಜ್ಞಾನ, ಅಳತೆ, ತೂಕ ಪ್ರಮಾಣಗಳ ಅರಿವು, ಬಂಡವಾಳ ಹೂಡಿಕೆ, ಲಾಭ– ನಷ್ಟಗಳ ಅರಿವು, ಸಂವಹನ ಕೌಶಲ ವೃದ್ಧಿಸಲಿದೆ. ವಸ್ತುಗಳ ಬೆಲೆ ನಿರ್ಧಾರ, ಶ್ರಮದ ಬದುಕಿನ ಅರಿವು, ಗಣಿತದ ಮೂಲ ಕ್ರಿಯೆಗಳ ಬಳಕೆ, ನಿತ್ಯ ಜೀವನದಲ್ಲಿ ಗಣಿತ ಬಳಕೆ ಕಲಿಯುವುದರ ಜೊತೆಗೆ ಸುಲಭವಾಗಿ ಕೂಡುವಿಕೆ, ಕಳೆಯುವಿಕೆ, ಗುಣಾಕಾರ, ಭಾಗಾಕಾರವನ್ನು ಖುಷಿಯಿಂದ ಮಕ್ಕಳು ಕಲಿಯಬಹುದಾಗಿದೆ ಎಂದರು.

ಮುಖ್ಯ ಶಿಕ್ಷಕ ಜಯರಾಂ ಮಾತನಾಡಿ, ಗ್ರಾಹಕ– ವ್ಯಾಪಾರಿಗಳ ನಡುವಿನ ಸಂವಹನ ಕೌಶಲ, ಗ್ರಾಹಕರನ್ನು ಸೆಳೆಯುವ ಕಲೆ ಸುಲಭವಾಗಿ ಕರಗತ ಮಾಡಿಕೊಳ್ಳಬಹುದಾಗಿದ್ದು, ಪೋಷಕರು ಮಕ್ಕಳಿಗೆ ಇದೇ ರೀತಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಮಕ್ಕಳು ಮನೆಯಿಂದಲೇ ಪೋಷಕರಿಂದ ತಯಾರಿಸಿಕೊಂಡು ತಂದಿದ್ದ ಗೋಬಿ ಮಂಚೂರಿ, ವಡೆ, ಚುರುಮುರಿ, ಸೊಪ್ಪು, ತರಕಾರಿಯನ್ನು ಖುಷಿಯಿಂದ ಮಾರಾಟ ಮಾಡಿದರು.

ಮಕ್ಕಳು ಸಂತೆಯಲ್ಲಿ ಖುಷಿಯಿಂದ ಜೋಡಿಸಿಟ್ಟಿದ್ದ ವಸ್ತುಗಳನ್ನು ಪೋಷಕರು ಚೌಕಾಸಿ ಮಾಡಿ ಖರೀದಿಸಿ ಉತ್ತೇಜಿಸಿದರು.
ಎಸ್‌ಡಿ‌ಎಂಸಿ ಸದಸ್ಯರು, ಗ್ರಾಪಂ. ಸದಸ್ಯರು, ಗ್ರಾಮ ಮುಖಂಡರು, ಪೋಷಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.