ADVERTISEMENT

ಕನ್ನಡ ಜಾಗೃತಿ ಸಮಾವೇಶ: ಸಚಿವ ಸ್ಥಾನಮಾನ ಹಿಂಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಮೇ 2025, 13:17 IST
Last Updated 17 ಮೇ 2025, 13:17 IST
ಕನ್ನಡ ನಾಡುನುಡಿ ಜಾಗೃತಿ ಸಮಿತಿ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಕನ್ನಡ ಜಾಗೃತಿ ಸಮಾವೇಶ’ದ ಅಂಗವಾಗಿ ಮಂಡ್ಯದ ರೈತ ಸಭಾಂಗಣದ ಮುಂಭಾಗ ಸಾಹಿತಿಗಳು, ಪ್ರಗತಿಪರ ಮತ್ತು ಕನ್ನಡಪರ ಹೋರಾಟಗಾರರು ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು
ಕನ್ನಡ ನಾಡುನುಡಿ ಜಾಗೃತಿ ಸಮಿತಿ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಕನ್ನಡ ಜಾಗೃತಿ ಸಮಾವೇಶ’ದ ಅಂಗವಾಗಿ ಮಂಡ್ಯದ ರೈತ ಸಭಾಂಗಣದ ಮುಂಭಾಗ ಸಾಹಿತಿಗಳು, ಪ್ರಗತಿಪರ ಮತ್ತು ಕನ್ನಡಪರ ಹೋರಾಟಗಾರರು ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು   

ಮಂಡ್ಯ: ‘ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ತನಕ ಈ ಚಳವಳಿಯ ಕಾವು ಕಡಿಮೆಯಾಗಬಾರದು. ಮಂಡ್ಯದಲ್ಲಿ ಮಾತ್ರವಲ್ಲ, ಅವರು ರಾಜ್ಯದ ಯಾವ ಕಡೆ ಹೋದರೂ ಕಪ್ಪು ಬಾವುಟ ತೋರಿಸಿ, ಘೇರಾವ್‌ ಹಾಕಬೇಕು’ ಎಂದು ಚಿಂತಕ ಜಾಣಗೆರೆ ವೆಂಕಟರಾಮಯ್ಯ ಹೇಳಿದರು. 

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರದಲ್ಲಿ ಕನ್ನಡ ನಾಡುನುಡಿ ಜಾಗೃತಿ ಸಮಿತಿ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಕನ್ನಡ ಜಾಗೃತಿ ಸಮಾವೇಶ’ದಲ್ಲಿ ಅವರು ಮಾತನಾಡಿದರು. ಸಾಹಿತ್ಯ ಪರಿಷತ್ತಿಗೆ ಜೋಶಿಯವರು ಕಾಗೆಯಂತೆ ಬಂದು ಕುಳಿತಿದ್ದಾರೆ. ಅವರನ್ನು ಓಡಿಸುವ ತನಕ ಹೋರಾಟ ನಿಲ್ಲಬಾರದು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದ ದರವನ್ನು ₹10 ಸಾವಿರದಿಂದ ₹20 ಸಾವಿರಕ್ಕೆ ಏರಿಸಿದ್ದಾರೆ. ಇದರಿಂದ ಗಣನೀಯವಾಗಿ ಕಾರ್ಯಕ್ರಮಗಳು ಕಡಿಮೆಯಾಗಿವೆ. ಈಗ ಅಲ್ಲಿ ಸ್ಮಶಾನ ಮೌನ ಆವರಿಸಿದೆ. ಯಾವ ಹಿರಿಯ ಸಾಹಿತಿಗಳು ಅತ್ತ ಸುಳಿಯುತ್ತಿಲ್ಲ ಎಂದರು. 

ADVERTISEMENT

ಸಚಿವ ಸ್ಥಾನಮಾನವನ್ನು ಹಿಂತೆಗೆದುಕೊಂಡರೆ ಜೋಶಿಯವರ ಅಹಂಕಾರ ಅರ್ಧ ಇಳಿಯುತ್ತದೆ. ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡರ ವಿರುದ್ಧ ಕ್ರಮ ತೆಗೆದುಕೊಳ್ಳಲು ಈತನಿಗೆ ಯಾವ ಅಧಿಕಾರವಿದೆ. ಈತನನ್ನು ಗೆಲ್ಲಿಸಿದ್ದೇ ದೊಡ್ಡ ದುರಂತ. ಜಿಲ್ಲಾ ಘಟಕದ ಅಧ್ಯಕ್ಷರಿಗೆ ಬೆದರಿಕೆ ಹಾಕಿ, ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ. ಸಮಾನ ಮನಸ್ಕರ ವೇದಿಕೆ ವಿರುದ್ಧ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರಿಂದ ‘ಕನ್ನಡ ನಾಡುನುಡಿ ಜಾಗೃತಿ ಸಮಿತಿ’ ಎಂದು ಹೆಸರು ಬದಲಿಸಬೇಕಾಯಿತು ಎಂದು ಹೇಳಿದರು. 

ಪ್ರಗತಿಪರ ಚಿಂತಕಿ ಕೆ.ಸ್‌.ವಿಮಲಾ ಮಾತನಾಡಿ, ಅಪಸವ್ಯದ ಸ್ವರ ಕೇಳಿಬರುತ್ತಿರುವಾಗ ಪರಿಷತ್ತಿನ ಉಳಿವಿಗೆ ಈ ಹೋರಾಟ ಅನಿವಾರ್ಯವಾಗಿದೆ. ಜೋಶಿ ಅವರೊಬ್ಬ ಅಧಿಕಾರಿಯೇ ಹೊರತು ಸಾಹಿತಿಯಲ್ಲ. ಅಧಿಕಾರಶಾಹಿತನವನ್ನು ಈಗಲೂ ಮುಂದುವರಿಸಿದ್ಧಾರೆ. ‘ಮನುಜ ಕುಲಂ ತಾನೊಂದೆ ವಲಂ’ ಎಂದು ಹೇಳಿದ ಪಂಪನ ಸಂತಾನ ನಾವು. ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಕುವೆಂಪು ವಾಣಿಯ ಪರಿಪಾಲಕರು. ಕೂಡು ಸಂಸ್ಕೃತಿಯನ್ನು ಹಾಳುಗೆಡವಿ, ಏಕ ಸಂಸ್ಕೃತಿ ಹೇರಲು ಹೊರಟಿದ್ದಾರೆ ಎಂದು ಟೀಕಿಸಿದರು. 

ಪ್ರಾಸ್ತಾವಿಕ ಮಾತುಗಳನ್ನಾಡಿದ ಸುನಂದಾ ಜಯರಾಂ, ಇದು ವ್ಯಕ್ತಿಯ ವಿರುದ್ಧದ ಹೋರಾಟವಲ್ಲ. ಕಸಾಪ ಉಳಿಸಲು ಕೈಗೊಂಡಿರುವ ಜಾಗೃತಿ ಸಮಾವೇಶ. ಪರಮಾಧಿಕಾರಕ್ಕಾಗಿ ಬೈಲಾ ತಿದ್ದುಪಡಿ, ₹2.50 ಕೋಟಿ ಲೆಕ್ಕ ಕೊಡದಿರುವುದು, ಅನ್ನ, ನೀರು, ಆತಿಥ್ಯ ನೀಡಿದ ಮಂಡ್ಯ ಜನರಿಗೆ ಕೃತಜ್ಞತೆ ಸಲ್ಲಿಸದಿರುವುದು ಮುಂತಾದ ಕಾರಣಗಳಿಂದ ನಾವು ಜೋಶಿಯವರನ್ನು ಪ್ರಶ್ನಿಸುತ್ತಿದ್ದೇವೆ. ನಾಲ್ಕು ತಿಂಗಳಾದರೂ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆಯಾಗಿಲ್ಲ. ಪರಿಷತ್ತಿನ ಘನತೆಯನ್ನು ಕಾಪಾಡಲು ನಾವು ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು. 

ಸಮಾವೇಶಕ್ಕೂ ಮುನ್ನ ಸಂಜಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಜೋಶಿ ಅಮಾನತುಗೊಳಿಸಿ, ಕಸಾಪ ಉಳಿಸಿ ಎಂದು ಘೋಷಣೆಗಳನ್ನು ಮೊಳಗಿಸಲಾಯಿತು. ರೈತ ಸಂಭಾಗಣದ ಮುಂಭಾಗ ಕೆ.ವಿ.ಶಂಕರಗೌಡ, ಕುವೆಂಪು ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಯಿತು. 

ಸಮಾವೇಶದಲ್ಲಿ ಸಾಹಿತಿಗಳು ಮತ್ತು ಪ್ರಗತಿಪರ ಚಿಂತಕರಾದ ಕಾಳೇಗೌಡ ನಾಗವಾರ, ಎಸ್‌.ಜಿ.ಸಿದ್ದರಾಮಯ್ಯ, ಹಿ.ಶಿ.ರಾಮಚಂದ್ರೇಗೌಡ, ಪ್ರೊ.ಬಿ.ಜಯಪ್ರಕಾಶಗೌಡ, ಎಚ್‌.ಎಲ್‌.ಪುಷ್ಪಾ, ವಸುಂಧರಾ ಭೂಪತಿ, ಪದ್ಮಾ ಶೇಖರ್‌, ಮೀರಾ ಶಿವಲಿಂಗಯ್ಯ, ಸಿ.ಕುಮಾರಿ, ಪ್ರೊ.ನಂಜರಾಜೇ ಅರಸ್‌, ರಾಮೇಗೌಡ, ಎಂ.ವಿ.ಧರಣೇಂದ್ರಯ್ಯ, ಪ್ರೊ.ಜಿ.ಟಿ.ವೀರಪ್ಪ, ಡಿ.ಪಿ.ಸ್ವಾಮಿ, ಲೋಕೇಶ್ ಚಂದಗಾಲು, ಕಾರಸವಾಡಿ ಮಹದೇವು, ಹರ್ಷ ಪಣ್ಣೇದೊಡ್ಡಿ, ರಂಗಸ್ವಾಮಿ ಮುಂತಾದವರು ಪಾಲ್ಗೊಂಡಿದ್ದರು. 

ಭಟ್ಟರಿಗೂ ಜೋಶಿಗೂ ಎಲ್ಲಿಯ ಸಂಬಂಧ?

ಸಾಹಿತಿ ಆರ್‌.ಜಿ.ಹಳ್ಳಿ ನಾಗರಾಜ್‌ ಮಾತನಾಡಿ ಮಹೇಶ ಜೋಶಿಯವರು ನಾನು ಗುರುಗೋವಿಂದ ಭಟ್ಟರ ಮರಿ ಮೊಮ್ಮಗ ಎಂದು ಹೇಳಿಕೊಳ್ಳುತ್ತಾರೆ. ಆ ಭಟ್ಟರಿಗೂ ಈ ಜೋಶಿಗೂ ಎಲ್ಲಿಯ ಸಂಬಂಧ. ಇಂಥ ಸುಳ್ಳನ್ನು ನಾವು ನಂಬಬೇಕಾ? ಬಳ್ಳಾರಿಯಲ್ಲಿ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಭೆಯನ್ನು ರದ್ದು ಮಾಡಿರುವುದು ನಮ್ಮ ಮೊದಲ ಗೆಲುವು ಎಂದರು. 

‘ದೇಣಿಗೆ ಎತ್ತಿರುವ ಲೆಕ್ಕ ಕೊಡಿ’

ಮಂಡ್ಯದಲ್ಲಿ ನಡೆದ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ₹2.50 ಕೋಟಿ ಅನುದಾನ ಮತ್ತು ಅನಿವಾಸಿ ಭಾರತೀಯರು ಸಂಘ ಸಂಸ್ಥೆಗಳಿಂದ ಎತ್ತಿರುವ ದೇಣಿಗೆಯ ಲೆಕ್ಕವನ್ನು ಕೋಡಿ ಜೋಶಿಯವರೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಒತ್ತಾಯಿಸಿದರು.  ನಾನು ಮೊದಲು ಉಪನ್ಯಾಸಕ ಜನಪರ ಹೋರಾಟಗಾರ ನಂತರ ರಾಜಕಾರಣಿ. ನನ್ನ ಹತ್ತಾರು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಲೆಕ್ಕ ಕೊಡಿ ಅಂದ್ರೆ ಸದಸ್ಯತ್ವ ರದ್ದು ಮಾಡಿದ್ದು ಏಕೆ ಎಂದು ಪ್ರಶ್ನೆ ಮಾಡಿದರೆ ಜಯಪ್ರಕಾಶಗೌಡ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನೋಟಿಸ್‌ ಕಳುಹಿಸುತ್ತೀರಾ? ಇದಕ್ಕೆನಾ ನೀವು ಕಸಾಪ ಅಧ್ಯಕ್ಷರಾಗಿರುವುದು ಎಂದು ಜರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.