
ಶ್ರೀರಂಗಪಟ್ಟಣ: ‘ಕನ್ನಡ ಜಗತ್ತಿನ ಶ್ರೇಷ್ಠ ಮತ್ತು ಮಧುರವಾದ ಭಾಷೆ’ ಎಂದು ಚಂದ್ರವನ ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಬಣ್ಣಿಸಿದರು.
ಪಟ್ಟಣ ಸಮೀಪದ ಚಂದ್ರವನ ಆಶ್ರಮದಲ್ಲಿ ಕದಂಬ ಸೈನ್ಯ ಕನ್ನಡ ಸಂಘಟನೆ ಬುಧವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಕವಿಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿರುವುದು ಕನ್ನಡ ಭಾಷೆಯ ಹಿರಿಮೆಗೆ ಸಾಕ್ಷಿಯಾಗಿದೆ. ಕನ್ನಡ ಭಾಷೆ ಸಂಸ್ಕೃತಿ ಮತ್ತು ಪರಂಪರೆಯ ವಾಹಕವೂ ಹೌದು. ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ನಮ್ಮ ಸಂಸ್ಕೃತಿಯನ್ನು ದಾಟಿಸುತ್ತಾ ಬಂದಿದೆ. ಮಾತಾಡಲು, ಬರೆಯಲು ಮತ್ತು ಓದಲು ಕನ್ನಡದಷ್ಟು ಸುಲಲಿತ ಭಾಷೆ ಮತ್ತೊಂದಿಲ್ಲ. ಈ ಭಾಷೆಯ ಅಸ್ಮಿತೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು’ ಎಂದರು.
ಚಲನಚಿತ್ರ ನಿರ್ಮಾಪಕ ಎನ್.ನರಸಿಂಹಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ‘ಕನ್ನಡಿಗರು ಯಾವುದೇ ದೇಶಕ್ಕೆ ಹೋದರೂ ಕನ್ನಡದಲ್ಲೇ ಮಾತನಾಡಬೇಕು. ಕನ್ನಡ ಶಾಲೆಗಳು ಉಳಿಯಬೇಕು. ಕನ್ನಡ ಚಲನಚಿತ್ರಗಳನ್ನು ವೀಕ್ಷಿಸುವ ಮೂಲಕ ಕಲೆಯನ್ನು ಪೋಷಿಸಬೇಕು’ ಎಂದು ಮನವಿ ಮಾಡಿದರು.
ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ, ‘ಕದಂಬ ಸೈನ್ಯ ಸಂಘಟನೆ ಎರಡು ದಶಕಗಳಿಂದ ಕನ್ನಡ ಮತ್ತು ಕರ್ನಾಟಕದ ಘನತೆ ಎತ್ತಿ ಹಿಡಿಯುವ ಕಾರ್ಯಕ್ರಮಗಳನ್ನು ನಡೆಸುತ್ತಿದೆ’ ಎಂದರು. ಮೈಸೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಈ.ಸಿ.ನಿಂಗರಾಜ್‌ಗೌಡ, ‘ಇದೇ ಜಿಲ್ಲೆಯ ಪು.ತಿ.ನ, ಕೆ.ಎಸ್. ನರಸಿಂಹಸ್ವಾಮಿ ಇತರ ಕವಿ ಪುಂಗವರು ಕನ್ನಡ ಸಾಹಿತ್ಯವನ್ನು ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ’ ಎಂದರು.
ಕದಂಬ ಸೈನ್ಯ ಕನ್ನಡ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಬೇಕ್ರಿ ರಮೇಶ್ ಪ್ರಾಸ್ತಾವಿಕ ಮಾತುಗಳಾಡಿದರು.
ಕದಂಬ ಸೈನ್ಯ ಸಂಘಟನೆಯ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ್ ರಾಂಪುರ, ರಂಗನಾಯಕಿ ಸ್ತ್ರೀ ಸಮಾಜದ ಮಾಜಿ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ, ಕಸಾಪ ನಗರ ಘಟಕದ ಅಧ್ಯಕ್ಷೆ ಎನ್. ಸರಸ್ವತಿ, ಉಮ್ಮಡಹಳ್ಳಿ ನಾಗೇಶ್ ಇದ್ದರು. ರಾಜ್ಯದ ವಿವಿಧ ಜಿಲ್ಲೆಗಳ 30ಕ್ಕೂ ಹೆಚ್ಚು ಮಂದಿ ಕವಿತೆ ವಾಚಿಸಿದರು.
ಪ್ರಶಸ್ತಿ ಪ್ರದಾನ ಶಿಕ್ಷಣ
ಸಂಯೋಜಕಿ ಬಿ.ಕೆ. ಪ್ರತಿಮಾ ಅವರಿಗೆ ‘ವೀರ ರಾಣಿ ಚನ್ನಭೈರಾದೇವಿ ಪ್ರಶಸ್ತಿ’ ಪರ್ವತರೆಡ್ಡಿ ವೈ.ಎನ್. ಮಹೇಶ್ ಡಿ.ಕೆ. ಅಂಕಯ್ಯ ಇರ್ಫಾನ್ ಎಸ್. ಅಳಗಿ ವಿಶಾಲಾಕ್ಷಿ ಪದ್ಮನಾಭ ಸವಿತಾ ನರಸಿಂಹಮೂರ್ತಿ ಬಿ.ಎಂ. ರಮೇಶ್ ಶಿವಾನಂದ ಮೂಲಿಮನಿ ಅವರಿಗೆ ‘ಕದಂಬ ಸೇವಾ ರತ್ನ ಪ್ರಶಸ್ತಿ ಹಾಗೂ ಎಂ.ಪಿ. ಮುಳಗುಂದ ಅಪ್ಪಣ್ಣ ಹುಂಡೇಕಾರ ಗಂಗಾಧರ ಕೊಳಗಿ ಕೆ.ಆರ್. ಶಶಿಧರ್ ತಾವರೆಗೆರೆ ಬೋರೇಗೌಡ ಮತ್ತು ನವೀನಕುಮಾರ್ ಅವರಿಗೆ ‘ಕದಂಬ ಚಾಲುಕ್ಯ ರತ್ನ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.