
ಮಂಡ್ಯ: ‘ವಿದೇಶಗಳಲ್ಲಿ ಹಿಂದಿ ಭಾಷೆ ಬೆಳೆಸಲು ಕೊಡುತ್ತಿರುವಷ್ಟೇ ಅನುದಾನವನ್ನು ಕನ್ನಡ ಭಾಷೆ ಬೆಳೆಸಲು ಕೂಡ ನೀಡಬೇಕು. ಇಲ್ಲದಿದ್ದರೆ ಮಂಡ್ಯ ಜಿಲ್ಲೆಗೆ ಆಗಮಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮುತ್ತಿಗೆ ಹಾಕಲಾಗುವುದು’ ಎಂದು ನಾವು ದ್ರಾವಿಡ ಕನ್ನಡಿಗರು ಚಳವಳಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಮನವಿ ಸಲ್ಲಿಸಿದರು.
ವಿದೇಶಗಳಲ್ಲಿ ಕನ್ನಡ ಬೆಳೆಸಲು ಆದ್ಯತೆ ನೀಡಬೇಕು. ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿಗೆ ಫೆಬ್ರುವರಿಯಲ್ಲಿ ಭೇಟಿ ನೀಡುವ ಸಂದರ್ಭದಲ್ಲಿ ಪ್ರಧಾನ ಮಂತ್ರಿಗೆ ಮುತ್ತಿಗೆ ಹಾಕುತ್ತೇವೆ. ಇದನ್ನು ಕರ್ನಾಟಕ ಸಂವಿಧಾನ ಸೇನೆ, ಕರವೇ ಪದಾಧಿಕಾರಿಗಳು ಬೆಂಬಲಿಸಿದ್ದು, ವಿದ್ಯಾರ್ಥಿಗಳು ಎತ್ತಿರುವ ಬೇಡಿಕೆ ಸರಿ ಇರುವುದರಿಂದ ಈ ಕೂಡಲೇ ಇದಕ್ಕೆ ಪ್ರತಿಕ್ರಿಯೆ ಕೊಡದೆ ಹೋದರೆ ಕೇಂದ್ರ ಸರ್ಕಾರ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಡಿಸೆಂಬರ್ 28, 2025ರಂದು ‘ಮನ್ ಕಿ ಬಾತ್’ನ 129ನೇ ಸಂಚಿಕೆಯಲ್ಲಿ ನೀವು ದುಬೈನಲ್ಲಿ ಕನ್ನಡಿಗರು ತಮ್ಮ ಸ್ವಂತ ದುಡ್ಡಿನಲ್ಲಿ ನಡೆಸುತ್ತಿರುವ ಕನ್ನಡ ಶಾಲೆ ಉಲ್ಲೇಖಿಸಿ ಹೊಗಳಿದ್ದು ಕನ್ನಡಿಗರಾದ ನಮಗೆಲ್ಲ ಸಂತಸ ತಂದಿದೆ. ಇದೇ ರೀತಿ ಹಲವು ದೇಶಗಳಲ್ಲಿ ಕನ್ನಡಿಗರು ಕನ್ನಡ ಶಾಲೆಗಳನ್ನು ನಡೆಸುತ್ತಿದ್ದಾರೆ. ಜಗತ್ತಿನ 200 ದೇಶಗಳಲ್ಲಿ ಜನವರಿ 10ರಂದು ‘ವಿಶ್ವ ಹಿಂದಿ ದಿವಸ’ ಆಚರಿಸಲು, ತಾವು ಅಂದಾಜು ₹300 ಕೋಟಿ ನೀಡುತ್ತಿದ್ದೀರಿ. ವಿದೇಶಗಳಲ್ಲಿ ಕನ್ನಡ ಬೆಳೆಸಲು ಒಂದು ರೂಪಾಯಿ ಕೂಡ ತಾವು ನೀಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.
ಮುಖಂಡರಾದ ಜಯರಾಂ, ಎಸ್.ಕೆ.ರಾಜೂಗೌಡ, ಪ್ರದೀಪ್, ಆಫಿಯಾಬಾನು, ನಂದಿನಿ, ಸಚಿನ್ ಒಕ್ಕಲಿಗ, ಕುಮಾರ್, ಶೋಭಾ, ಮಣಿ, ಫೌದಿಯಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.