ADVERTISEMENT

ಮಂಡ್ಯ ಸಾಹಿತ್ಯ ಸಮ್ಮೇಳನ: 2 ಕಡೆ ಸ್ಥಳ ಪರಿಶೀಲನೆ

ಚಿಕ್ಕಮಂಡ್ಯ ಭತ್ತದ ಗದ್ದೆ, ಸ್ಯಾಂಜೊ ಆಸ್ಪತ್ರೆ ಹಿಂದಿನ ಜಾಗ ವೀಕ್ಷಣೆ, ಶೀಘ್ರ ಅಂತಿಮ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 13:20 IST
Last Updated 18 ಜನವರಿ 2023, 13:20 IST
ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜಿಲ್ಲಾಡಳಿತದ ಸಿಬ್ಬಂದಿ ಹಾಗೂ ಕಸಾಪ ಪದಾಧಿಕಾರಿಗಳು ಬುಧವಾರ ಸ್ಥಳ ಪರಿಶೀಲನೆ ನಡೆಸಿದರು. ಕುಂಞ ಮಹಮದ್, ಡಾ.ಎಚ್‌.ಎಲ್‌.ನಾಗರಾಜು, ರವಿಕುಮಾರ್‌ ಚಾಮಲಾಪುರ, ಅಪ್ಪಾಜಪ್ಪ, ಬೋರೇಗೌಡ, ಧನಂಜಯ, ಹೊಳಲು ಶ್ರೀಧರ್‌ ಇದ್ದರು
ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜಿಲ್ಲಾಡಳಿತದ ಸಿಬ್ಬಂದಿ ಹಾಗೂ ಕಸಾಪ ಪದಾಧಿಕಾರಿಗಳು ಬುಧವಾರ ಸ್ಥಳ ಪರಿಶೀಲನೆ ನಡೆಸಿದರು. ಕುಂಞ ಮಹಮದ್, ಡಾ.ಎಚ್‌.ಎಲ್‌.ನಾಗರಾಜು, ರವಿಕುಮಾರ್‌ ಚಾಮಲಾಪುರ, ಅಪ್ಪಾಜಪ್ಪ, ಬೋರೇಗೌಡ, ಧನಂಜಯ, ಹೊಳಲು ಶ್ರೀಧರ್‌ ಇದ್ದರು   

ಮಂಡ್ಯ: ವರ್ಷಾಂತ್ಯದಲ್ಲೇ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾ ಕಸಾಪ ಪದಾಧಿಕಾರಿಗಳು, ಅಧಿಕಾರಿಗಳು ಬುಧವಾರ ನಗರದ ಹೊರವಲಯದಲ್ಲಿ 2 ಕಡೆ ಸ್ಥಳ ಪರಿಶೀಲನೆ ನಡೆಸಿದರು.

ಸಮ್ಮೇಳನಕ್ಕೆ ಒಂದೇ ಕಡೆ 350 ಎಕರೆಗೂ ಹೆಚ್ಚು ವಿಶಾಲ ಮೈದಾನದ ಅವಶ್ಯಕತೆ ಇದೆ. ನಗರ ವ್ಯಾಪ್ತಿಯಲ್ಲಿ ಜಿಲ್ಲಾ ಕ್ರೀಡಾಂಗಣ, ಮಂಡ್ಯ ವಿವಿ ಆವರಣ ಅಷ್ಟು ವಿಶೇಷವಾಗಿಲ್ಲ. ಹೀಗಾಗಿ ಪರ್ಯಾಯ ಜಾಗದ ಅಗತ್ಯತೆ ಇದ್ದು ಸ್ಥಳ ಪರಿಶೀಲನೆ ನಡೆಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಎನ್.ನಾಗರಾಜು, ಮಂಡ್ಯ ತಹಶೀಲ್ದಾರ್ ಕುಂಞ ಮಹಮದ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ ಚಾಮಲಾಪುರ ಮುಂತಾದವರು ಪ್ರಾಥಮಿಕ ಹಂತವಾಗಿ ಚಿಕ್ಕಮಂಡ್ಯದ ಗದ್ದೆ ಬಯಲು ಹಾಗೂ ಸ್ಯಾಂಜೋ ಆಸ್ಪತ್ರೆ ಹಿಂಭಾಗದ ಜಮೀನು, ನೀವೇಶನಗಳ ಸ್ಥಳ ಪರಿಶೀಲನೆ ನಡೆಸಿದರು.

ADVERTISEMENT

ಕೆರೆ ವ್ಯಾಪ್ತಿಯಲ್ಲಿ ಬರುವ ಗದ್ದೆ ಬಯಲು 350 ಎಕರೆಗೂ ಹೆಚ್ಚು ವ್ಯಾಪ್ತಿ ಹೊಂದಿದ್ದು ಅಲ್ಲಿ ಸಮ್ಮೇಳನ ನಡೆಸುವ ಕುರಿತು ವೀಕ್ಷಿಸಲಾಯಿತು. ಡಿಸೆಂಬರ್‌ ತಿಂಗಳಲ್ಲೇ ಸಮ್ಮೇಳನ ನಡೆಯುತ್ತಿರುವ ಕಾರಣ ಆ ವೇಳೆಗೆ ಭತ್ತದ ಕಟಾವು ಮುಗಿದಿರುತ್ತದೆ. ರೈತರ ಸಭೆ ನಡೆಸಿ ಸೂಕ್ತ ಅವಧಿಯಲ್ಲಿ ಕಟಾವು ಪೂರ್ಣಗೊಳಿಸಿ ಸಮ್ಮೇಳನ ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು.

ನಂತರ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಸ್ಯಾಂಜೊ ಆಸ್ಪತ್ರೆ ಹಿಂದೆಯೂ ವಿಶಾಲ ಜಮೀನು, ನಿವೇಶನಗಳ ಜಾಗವಿದ್ದು ಅಲ್ಲಿ ಕೂಡ ಸಮ್ಮೇಳನ ನಡೆಸುವ ಬಗ್ಗೆ ಪರಿಶೀಲನೆ ನಡೆಸಲಾಯಿತು. ನಂತರ ಕಸಾಪ ರಾಜ್ಯ ಘಟಕದ ಅಧ್ಯಕ್ಷ ಡಾ.ಮಹೇಶ್‌ ಜೋಶಿ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಸಾಪ ಪದಾಧಿಕಾರಿಗಳು ತಿಳಿಸಿದರು.

‘25 ಸಾವಿರ ಜನರು ಕುಳಿತುಕೊಳ್ಳಬಹುದಾದ ಪ್ರಧಾನ ವೇದಿಕೆ ನಿರ್ಮಾಣ ಮಾಡಲಾಗುವುದು, ಅದಕ್ಕೆ 150 X 700 ಅಡಿ ಅಳತೆ ಜಾಗದ ಅವಶ್ಯಕತೆ ಇದೆ. 2 ಸಮನಾಂತರ ವೇದಿಕೆ ಬರಲಿದ್ದು ತಲಾ 100X300 ಅಡಿ ಅಳತೆಯ ಜಾಗದ ಅಗತ್ಯತೆ ಇದೆ, 1 ವೇದಿಕೆಯಲ್ಲಿ ತಲಾ 3 ಸಾವಿರ ಜನರು ಕುಳಿತುಕೊಳ್ಳಬಹುದು’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ್‌ ಚಾಮಲಾಪುರ ತಿಳಿಸಿದರು.

‘1 ವಿವಿಐಪಿ, 1 ವಿಐಪಿ ಊಟದ ಮನೆ ನಿರ್ಮಾಣ ಮಾಡಲಾಗುವುದು. ಇತರರಿಗೆ 3 ಕಡೆಗಳಲ್ಲಿ ಬ್ಯಾರಿಕೇಡ್‌ ಹಾಕಿ ಒಮ್ಮೆ 20 ಸಾವಿರ ಮಂದಿ ಊಟ ಮಾಡಬಹುದಾದ ಸ್ಥಳ ನಿರ್ಮಿಸಲಾಗುವುದು. ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆಗಳಿಗೆ 10 X10 ಅಳತೆಯ 1 ಸಾವಿರ ಮಳಿಗೆ ರೂಪಿಸಲಾಗುವುದು. 2 ಸಾವಿರ ದಿಚಕ್ರವಾಹನ, 5 ಸಾವಿರ ಕಾರುಗಳ ನಿಲುಗಡೆಗೆ ಸ್ಥಳಾವಕಾಶ ಮಾಡಲಾಗುವುದು’ ಎಂದರು.

‘2 ಸಾವಿರ ಮಂದಿ ಅಡುಗೆ ತಯಾರಕ ಸಿಬ್ಬಂದಿ ಬರಲಿದ್ದಾರೆ, 3 ಸಾವಿರಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಭದ್ರತೆಯಲ್ಲಿ ಭಾಗವಹಿಸಲಿದ್ದಾರೆ. ಎಲ್ಲರಿಗೂ ಸೂಕ್ತ ಸ್ಥಳಾವಕಾಶ ಮಾಡಿಕೊಡಲಾಗುವುದು. ಜರ್ಮನ್‌ ಟೆಂಟ್‌ ಮೂಲಕವೇ ಎಲ್ಲರಿಗೂ ಸೌಲಭ್ಯ ಕಲ್ಪಿಸಲಾಗುವುದು. ಪ್ರಾಥಮಿಕವಾಗಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ನಮ್ಮ ರಾಜ್ಯ ಘಟಕದ ಅಧ್ಯಕ್ಷರು ಅಂತಿಮವಾಗಿ ನಿರ್ಣಯ ಕೈಗೊಳ್ಳಲಿದ್ದಾರೆ’ ಎಂದರು.

ಈ ಸಂದರ್ಭದಲ್ಲಿ ಚಿಕ್ಕಮಂಡ್ಯ ಗ್ರಾಮ ಪಂಚಾಯಿತಿ ಸದಸ್ಯ ಬೋರೇಗೌಡ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಧನಂಜಯ ದರಸಗುಪ್ಪೆ, ಬಿ.ಎಂ.ಅಪ್ಪಾಜಪ್ಪ, ಹೊಳಲು ಶ್ರೀಧರ್ ಇದ್ದರು.

ವಸತಿಗೆ ಹಾಸ್ಟೆಲ್‌ಗಳ ಬಳಕೆ

ಸಮ್ಮೇಳನಕ್ಕೆ ಬರುವ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ನಗರದ ಹೊಳಲು ರಸ್ತೆಯಲ್ಲಿರುವ ವಿದ್ಯಾರ್ಥಿನಿಲಯ, ಕೊಮ್ಮೇರಹಳ್ಳಿ ವಿಶ್ವಮಾನವ ಶಾಲಾ ಕಾಲೇಜು ವಸತಿ ನಿಲಯಗಳು, ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆ, ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿರುವ ಆದಿಚುಂಚನಗಿರಿ ಸಮುದಾಯ ಭವನ ಬಳಸಿಕೊಳ್ಳುವ ಕುರಿತು ಚರ್ಚಿಸಲಾಯಿತು.

ಸಮ್ಮೇಳನಕ್ಕೆ ಸಹಕಾರ

ತಂಡದ ಸದಸ್ಯರು ಕೊಮ್ಮೇರಹಳ್ಳಿ ವಿಶ್ವ ಮಾನವ ಕ್ಷೇತ್ರದ ಪರಿಶೀಲನೆ ನಡೆಸಿ ನಂತರ ಪುರುಷೋತ್ತಮಾನಂದನಾಥ ಸ್ವಾಮೀಜಿಯನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ ‘ನಮ್ಮ ಮಠದ ವತಿಯಿಂದ ಸಮ್ಮೇಳನಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಸಮ್ಮೇಳನದ ಯಶಸ್ವಿಗೆ ಜಿಲ್ಲೆಯ ಜನರು, ಸಾಹಿತ್ಯಾಸಕ್ತರು ಸಹಕಾರ ನೀಡಬೇಕು. ನಮ್ಮ ಶಾಲಾ, ಕಾಲೇಜು ಆವರಣವನ್ನು ಸಮ್ಮೇಳನಕ್ಕೆ ನೀಡಲಾಗುವುದು. ಜಿಲ್ಲೆಯಲ್ಲಿ 3ನೇ ಅಖಿಲ ಭಾರತ ಸಮ್ಮೇಳನ ನಡೆಯುತ್ತಿದ್ದು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.