ADVERTISEMENT

ಮಳೆ ಕೊರತೆ ನೀಗಿಸಲು ಪರಿಸರ ಉಳಿಸಿ

ಕಾರ್ಗಿಲ್ ವಿಜಯೋತ್ಸವ: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 13:47 IST
Last Updated 28 ಜುಲೈ 2019, 13:47 IST
ಜೀವಧಾರೆ ಟ್ರಸ್ಟ್‌ ವತಿಯಿಂದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಅಂಬೇಡ್ಕರ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಯೋಧರನ್ನು ಅಭಿನಂದಿಸಲಾಯಿತು
ಜೀವಧಾರೆ ಟ್ರಸ್ಟ್‌ ವತಿಯಿಂದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಅಂಬೇಡ್ಕರ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಯೋಧರನ್ನು ಅಭಿನಂದಿಸಲಾಯಿತು   

ಮಂಡ್ಯ: ‘ಅಣೆಕಟ್ಟೆ ಹಾಗೂ ನಾಲೆಗಳು ಬರಿದಾಗುತ್ತಿದ್ದು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಮಸ್ಯೆಗೆ ಮಳೆ ಕೊರತೆಯೇ ಕಾರಣ. ಮಳೆಗಾಗಿ ನಾವೆಲ್ಲರೂ ಪರಿಸರ ಸಂರಕ್ಷಣೆ ಮಾಡಬೇಕು’ ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಜೀವಧಾರೆ ಟ್ರಸ್ಟ್‌ ವತಿಯಿಂದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಕಾರ್ಗಿಲ್ ಯುದ್ಧದಲ್ಲಿ ಸೇವೆ ಸಲ್ಲಿಸಿದ ರಾಜ್ಯದ ವೀರ ಯೋಧರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಯೋಧರು ತಮ್ಮ ಕುಟುಂಬ ಹಾಗೂ ಜೀವವನ್ನು ಪಣಕ್ಕಿಟ್ಟು ನಮ್ಮನ್ನು ಉಳಿಸುತ್ತಿದ್ದಾರೆ. ಅವರ ಸೇವೆ ದೇಶಕ್ಕೆ ಅತ್ಯಮೂಲ್ಯವಾಗಿದ್ದು, ಹುತಾತ್ಮ ಯೋಧರ ಸ್ಮರಣೆ ಎಲ್ಲರ ಕರ್ತವ್ಯ. ನಾವೆಲ್ಲರೂ ಸಮಾಜಕ್ಕೆ ಪೂರಕವಾದ ರಕ್ತದಾನ, ಸಾಮಾಜಿಕ ಸೇವೆ ಮಾಡುವುದು ಅಗತ್ಯವಾಗಿದೆ. ದೇಶದಲ್ಲಿ 4 ಕೋಟಿ ಯೂನಿಟ್ ರಕ್ತದ ಅವಶ್ಯಕತೆಯಿದೆ. ಆದರೆ ಎಲ್ಲಾ ಮೂಲಗಳ ಸಂಗ್ರಹಣೆಯಿಂದ ಕೇವಲ 60 ಲಕ್ಷ ಯೂನಿಟ್ ಸಂಗ್ರಹಣೆಯಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲಾ ಯುವಕರು ರಕ್ತದಾನ ಮಾಡುವ ಮೂಲಕ ಜೀವ ಉಳಿಸಬೇಕು’ ಎಂದರು.

ADVERTISEMENT

‘ಉತ್ತರ ಭಾರತದಲ್ಲಿ ಹಿಮಾಲಯ ಪರ್ವತದ ಹಿಮ ಕರಗಿ ವರ್ಷಪೂರ್ತಿ ನದಿಗಳು ತುಂಬಿ ಹರಿಯುತ್ತವೆ. ದಕ್ಷಿಣ ಭಾರತದ ನದಿಗಳು ಕೇವಲ ಮಳೆಯಿಂದ ಮಾತ್ರ ಭರ್ತಿಯಾಗುತ್ತವೆ. ಹೀಗಾಗಿ ನದಿ ನೀರು ಸಂರಕ್ಷಣೆಗೆ ಜಲಾಶಯಗಳು ಮಹತ್ವದ ಪಾತ್ರ ವಹಿಸುತ್ತವೆ. ನಮ್ಮ ಹಿರಿಯರು ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಕೆಆರ್‌ಎಸ್ ಜಲಾಶಯ, ನಾಲ್ವಡಿ ಕೃಷ್ಣರಾಜ ಹಾಗೂ ಚಿಕ್ಕ ಒಡೆಯರ್ ಕಾಲುವೆಗಳು ಸಂಪೂರ್ಣ ಬರಿದಾಗಿವೆ. ಹೀಗಾಗಿ ಮಳೆಯ ಮೂಲವಾದ ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಬೇಕು’ ಎಂದರು.

‘ದೇಶದಲ್ಲಿ ಪರಿಸರ ಜಾಗೃತಿ ಕಾರ್ಯಗಳು ಹಾಗೂ ಪರಿಸರ ಉಳಿಸಲು ಅನೇಕ ಹೋರಾಟಗಳು ನಡೆಯುತ್ತಾ ಬಂದಿವೆ. ಆದರೂ ಅರಣ್ಯ ನಾಶ ಮುಂದುವರಿದಿದ್ದು, ಪರಿಸರ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಯುವಜನತೆ ಸೇರಿದಂತೆ ಎಲ್ಲರೂ ಪರಸರ ಉಳಿಸಿ, ಬೆಳೆಸುವ ಕಾರ್ಯವನ್ನು ಜವಾಬ್ದಾರಿಯುತವಾಗಿ ಮಾಡಬೇಕು’ ಎಂದು ಸಲಹೆ ನೀಡಿದರು.

ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಎಸ್.ವಿ.ಶರಣಪ್ಪ, ಸುಬೇದಾರ್ ಶಾಂತಯ್ಯ, ಕಳ್ಳಪ್ಪ ಹೂಗಾರ್, ಮಲ್ಲಪ್ಪ, ಹೇಮು ರಾಠೋಡ್, ರಂಗಪ್ಪ ಆಲೂರ್, ಗುರುಪಾದಯ್ಯ ಸಿ.ಪೂಜಾರಿ, ರವಿಚಂದ್ರ ಬಾಳೇಹೊಸೂರ್, ಸುಬೇದಾರ್ ಸಿದ್ದಪ್ಪ, ಕಾಂತರಾವ್, ಶಕೀಲ್‌ಭಾಷಾ, ಕೆ.ಲಕ್ಷ್ಮಣ್ ಬಳ್ಳಾರಿ, ಎಂ.ಡಿ.ಜಹಾಂಗೀರ್ ಖವಾಸ್, ಶಾಂತಕುಮಾರ್, ವಿರೂಪಾಕ್ಷಯ್ಯ ವಿಭೂತಿ, ಗಣೇಶ್, ಚಂದಪ್ಪ, ಚಂದ್ರಹಾಸ, ಸುರೇಶ್, ಬಿ.ಕೆ.ರವಿ, ಭದ್ರೇಗೌಡ, ಚನ್ನಸ್ವಾಮಿ, ಡಾ.ರಘುನಾಥ ಬಸವಶೆಟ್ಟಿ, ಗಂಗಾಧರ ಅವರನ್ನು ಅಭಿನಂದಿಸಲಾಯಿತು.

ಬೆಳಗಾವಿಯ ಸ್ವತಂತ್ರ ಹೋರಾಟಗಾರ ಪರಶುರಾಮ್ ನಂದೀಹಳ್ಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್, ಉದ್ಯಮಿ ಡಾ.ಪಿ.ದಿಲೀಪ್‌ ಕುಮಾರ್, ಜೀವಧಾರೆ ಟ್ರಸ್ಟ್ ಸಂಚಾಲಕರಾದ ನಟರಾಜ್, ಶ್ರೀಧರ್, ಪ್ರಶಾಂತ್, ಕಿರಣ್ ಇದ್ದರು.

********

ರಾಜರ ಆಡಳಿತ ಕಾಲದಿಂದಲೂ ಮೈಸೂರು ಅರಮನೆಯೊಂದಿಗೆ ಮಂಡ್ಯ ಜಿಲ್ಲೆ ಜನ ಅವಿನಾಭಾವ ಸಂಬಂಧ ಹೊಂದಿದ್ದರು. ಮುಂದೆಯೂ ನಾನು ಜಿಲ್ಲೆ ಜನರ ಸಂಪರ್ಕದಲ್ಲಿ ಇರುತ್ತೇನೆ. ಕಷ್ಟ ಸುಖದಲ್ಲಿ ಭಾಗಿಯಾಗುತ್ತೇನೆ
– ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು ರಾಜವಂಶಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.