
ಶ್ರೀರಂಗಪಟ್ಟಣ: ‘ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ರಾಜ್ಯದ ಕಾಂಗ್ರೆಸ್ ಸರ್ಕಾರ ಜನರಿಗೆ ಹಣ ಕೊಡಲಾಗದೆ ಸಾಲದ ಸುಳಿಗೆ ಸಿಲುಕಿದೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.
ತಾಲ್ಲೂಕಿನ ಮಹದೇವಪುರ ಗ್ರಾಮದಲ್ಲಿ ಶುಕ್ರವಾರ ನಡೆದ ಎಂ.ಕೆ. ಆನಂದಾಳ್ವಾರ್ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ‘ರಾಜ್ಯ ಸರ್ಕಾರ 8 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿ ಜನರ ತಲೆ ಮೇಲೆ ಹೊರಿಸಿದೆ. ಮೂರು ವರ್ಷಗಳಿಂದ 1.64 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಲ್ಲ. ಸರ್ಕಾರಿ ನೌಕರರಿಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಭ್ರಷ್ಟಾಚಾರ ಹೆಚ್ಚಿದ್ದು, ಅಧಿಕಾರಿಗಳು ಸಿಕ್ಕಿ ಬೀಳುತ್ತಿದ್ದಾರೆ. ಸಕಾಲಕ್ಕೆ ಗೃಹಲಕ್ಷ್ಮಿ ಹಣವನ್ನೂ ಕೊಡುತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದರು.
ಉತ್ತರ ಕರ್ನಾಟಕಕ್ಕೆ ಕನಕಪುರದಷ್ಟು ಅನುದಾನ ಕೊಡಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗೋಗರೆಯುವ ಪರಿಸ್ಥಿತಿ ಬಂದಿದೆ. ವಿಧಾನಸಭೆಗೆ ಎಂಟು ಬಾರಿ ಆಯ್ಕೆಯಾಗಿರುವ ಖರ್ಗೆ ಇಷ್ಟು ವರ್ಷ ಏನು ಮಾಡಿದ್ದಾರೋ ಗೊತ್ತಿಲ್ಲ. ರಾಜ್ಯ ಸರ್ಕಾರದ ಜನ ವಿರೋಧ ನೀತಿಯಿಂದ ಜನರು ಬೇಸತ್ತಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ರಾಮರಾಜ್ಯ ಮಾದರಿಯ ಸರ್ಕಾರ ಬರಲಿದೆ. ಪ್ರತಿ ಗ್ರಾ.ಪಂ. ಕೇಂದ್ರಗಳಲ್ಲಿ 30 ಹಾಸಿಗೆಗಳ ಆಸ್ಪತ್ರೆ, ಎಲ್ಲರಿಗೂ ಉಚಿತ ಶಿಕ್ಷಣ, ಕೃಷಿ ಉತ್ಪನ್ನಗಳ ಸಂಗ್ರಹಕ್ಕಾಗಿ ಗೋಡನ್ ಮತ್ತು ಶೀತಲೀಕರಣ ಘಟಕ ಸ್ಥಾಪಿಸುವ ಉದ್ದೇಶ ನನ್ನದು’ ಎಂದು ಹೇಳಿದರು. ಆನಂದಾಳ್ವಾರ್ ಶಾಲೆಗೆ ಸಿಎಸ್‌ಆರ್ ನಿಧಿಯಿಂದ ಶೌಚಾಲಯ ಇತರ ಮೂಲ ಸೌಕರ್ಯ ಕಲ್ಪಿಸುತ್ತೇನೆ’ ಎಂದು ಅವರು ಭರವಸೆ ನೀಡಿದರು.
ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ‘ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಮಹದೇವಪುರಕ್ಕೆ ಕುಡಿಯುವ ನೀರು ಕೊಡಲು ₹50 ಕೋಟಿ ಮಂಜೂರು ಮಾಡಿದರು. ಈ ಭಾಗದಲ್ಲಿ ಕೈಗಾರಿಕೆ ಸ್ಥಾಪನೆಗೆ ಮನವಿ ಮಾಡಲಾಗಿದೆ’ ಎಂದು ಹೇಳಿದರು.
ಸಾಹಿತಿ ಮ.ರಾಮಕೃಷ್ಣ ಆಶಯ ಭಾಷಣ ಮಾಡಿದರು. ‘ಮಕ್ಕಳಿಗೆ ಓದು, ಬರಹದ ಜತೆಗೆ ಸ್ವತಂತ್ರವಾಗಿ ಬದುಕುವುದನ್ನು ಕಲಿಸಬೇಕು. ಆರ್ಥಿಕ ಶಿಸ್ತು ಕಲಿಸಬೇಕು. ಎಪಿಜೆ ಅಬ್ದುಲ್ ಕಲಾಂ ಇತರ ಮಹನೀಯರ ಜೀವನ, ಸಾಧನೆಯನ್ನು ತಿಳಿಸಬೇಕು’ ಎಂದರು.
ಶಾಲೆಯ ಆಡಳಿತ ಮಂಡಳಿ ಸದಸ್ಯ ಕೆ. ಪುಟ್ಟಸ್ವಾಮಿ, ‘50 ವರ್ಷಗಳ ಹಿಂದೆ 15 ಮಕ್ಕಳಿಂದ ಆರಂಭವಾದ ಎಂ.ಕೆ. ಆನಂದಾಳ್ವಾರ್ ಶಾಲೆಯಲ್ಲಿ ಈಗ 600ಕ್ಕೂ ಹೆಚ್ಚು ಮಕ್ಕಳಿ ಶಿಕ್ಷಣ ಪಡೆಯುತ್ತಿದ್ದಾರೆ. ಸಾಕಷ್ಟು ದಾನಿಗಳಿಂದ ಕಟ್ಟಡ ನಿರ್ಮಾಣವಾಗಿದೆ’ ಎಂದರು. ಸ್ವರ್ಣಾನಂದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ಆನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ. ಗಿಣಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜೆ. ಪಾಪೇಗೌಡ, ಖಜಾಂಚಿ ಎಂ.ಪಿ. ಸ್ವಾಮಿಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಬೆಂಗಳೂರು ಇಸ್ಕಾನ್ ಸಂಸ್ಥೆಯ ಚೈತನ್ಯದಾಸ್, ಜಗಪತಿದಾಸ್, ಜಿ.ಪಂ. ಮಾಜಿ ಸದಸ್ಯ ಜಿ. ದಶರಥ, ಎಂಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬಸವರಾಜು, ಪ್ರೌಢಶಾಲೆ ಮುಖ್ಯ ಶಿಕ್ಷಕ ಮಾದೇಗೌಡ, ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಎಂ.ಎಸ್. ಸಂಗೀತಾ, ಸ್ವರ್ಣಾನಂದ ಸಂಚಿಕೆ ಸಂಪಾದಕ ಲೋಕೇಶ್ ಚಂದಗಾಲು ಇದ್ದರು.