ಕೆ.ಆರ್.ಪೇಟೆ: ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡಿದ್ದು, ಅದರಂತೆ ನಾವು ನಡೆದುಕೊಳ್ಳುತಿದ್ದರೂ ಜೆಡಿಎಸ್‌ನವರು ಮೈತ್ರಿ ಧರ್ಮ ಉಲ್ಲಂಘನೆ ಮಾಡುತ್ತಿದ್ದಾರೆ’ ಎಂದು ಮಾಜಿ ಸಚಿವ ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
‘ನಿಮ್ಮ ನೋವು, ಸಂಕಟ ನನಗೆ ಅರ್ಥವಾಗಿದೆ, ಮೈತ್ರಿ ಧರ್ಮದ ಪಾಲನೆ ಮಾಡಲು ಜೆಡಿಎಸ್ ಮುಖಂಡರು ಹಿಂದೇಟು ಹಾಕುತ್ತಿದ್ದು, ಬಿಜೆಪಿ ಕಾರ್ಯಕರ್ತರನ್ನು ಸಂಪೂರ್ಣ ಕಡೆಗಣಿಸಿರುವದು ಗಮನಕ್ಕೆ ಬಂದಿದೆ. ಈಚೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಸ್ತೆ ಡಾಂಬರೀಕರಣ ಕಾಮಗಾರಿಯ ಭೂಮಿಪೂಜೆ ಮಾಡಲು ಆಗಮಿಸಿದ ಸಂದರ್ಭದಲ್ಲಿ ನನ್ನನ್ನು ಹಾಗೂ ನಮ್ಮ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಇದೇ ರೀತಿ ಮುಂದುವರಿದರೆ ನಾನು ನಮ್ಮ ಕಾರ್ಯಕರ್ತರ ರಕ್ಷಣೆಗೆ ನಿಲ್ಲುವುದು ಅನಿವಾರ್ಯ ಆಗಲಿದೆ’ ಎಂದರು.
‘ಪುರಸಭೆಯಲ್ಲಿ ಜೆಡಿಎಸ್ ಸ್ಪಷ್ಟ ಬಹುಮತ ಹೊಂದಿದ್ದರೂ ಶಾಸಕರ ನಿರಾಸಕ್ತಿಯಿಂದಾಗಿ ಪುರಸಭೆ ಆಡಳಿತವು ಕಾಂಗ್ರೆಸ್ ಪಾಲಾಗಿದೆ. ಹೊಸಹೊಳಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸ್ಥಾನ ಹೊಂದಾಣಿಕೆ ಸರಿಯಾಗಿರಲಿಲ್ಲ. ಆದರೂ ಮೈತ್ರಕೂಟಕ್ಕೆ ಬಹುಮತ ಬಂದರೂ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನ ಎರಡನ್ನೂ ಜೆಡಿಎಸ್ ಕೇಳಿದ್ದರಿಂದ ಗೆದ್ದಿದ್ದ ಒಬ್ಬ ಬಿಜೆಪಿ ಸದಸ್ಯ ಕಾಂಗ್ರೆಸ್ ಕಡೆಗೆ ವಾಲಿದ’ ಎಂದು ಹೇಳಿದರು.
ಸಭೆಯಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸಾರಂಗಿ ನಾಗಣ್ಣ, ಮುಖಂಡರಾದ ಕೆ.ಶ್ರೀನಿವಾಸ್, ಅಘಲಯ ಶ್ರೀಧರ್ ವಿ.ಡಿ.ಹರೀಶ್, ಬೂಕನಕೆರೆ ಜವರಾಯಿಗೌಡ, ಬಸ್ ಸಂತೋಷ್, ಕುಮಾರ್, ಎಚ್.ಆರ್. ಲೋಕೇಶ್, ಕೆ.ಜಿ.ತಮ್ಮಣ್ಣ, ಭಾರತೀಪುರ ಪುಟ್ಟಣ್ಣ, ಚಂದ್ರಕಲಾ, ದಿವಿ ಕುಮಾರ್, ಆರ್.ಜಗದೀಶ್, ಚೋಕನಹಳ್ಳಿ ಪ್ರಕಾಶ್, ಮಂಜು ಸೇರಿದಂತೆ ಕಾರ್ಯಕರ್ತರು, ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.