ADVERTISEMENT

ರಾಜರ್ಷಿ ನಾಲ್ವಡಿ ಆಡಳಿತ ನೋಡಿ ಕಲಿಯಿರಿ: ಬಸವರಾಜ ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 2:45 IST
Last Updated 7 ಜುಲೈ 2025, 2:45 IST
ಮಂಡ್ಯ ನಗರದ ಕರ್ನಾಟಕ ಸಂಘದ ಕೆವಿಎಸ್‌ ಭವನದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೆ.ಟಿ.ಶ್ರೀಕಂಠೇಗೌಡ, ಪ್ರೊ.ಜಯಪ್ರಕಾಶಗೌಡ, ಕೆ.ಟಿ.ಹನುಮಂತು, ಡಿ.ಸಿ.ತಮ್ಮಣ್ಣ, ಕೆ.ಎಸ್.ರಾಜಣ್ಣ ಭಾಗವಹಿಸಿದ್ದರು
ಮಂಡ್ಯ ನಗರದ ಕರ್ನಾಟಕ ಸಂಘದ ಕೆವಿಎಸ್‌ ಭವನದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೆ.ಟಿ.ಶ್ರೀಕಂಠೇಗೌಡ, ಪ್ರೊ.ಜಯಪ್ರಕಾಶಗೌಡ, ಕೆ.ಟಿ.ಹನುಮಂತು, ಡಿ.ಸಿ.ತಮ್ಮಣ್ಣ, ಕೆ.ಎಸ್.ರಾಜಣ್ಣ ಭಾಗವಹಿಸಿದ್ದರು   

ಮಂಡ್ಯ: ‘ಕರ್ನಾಟಕವನ್ನು ಎರಡು ಭಾಗ ಮಾಡುತ್ತೇವೆ ಎನ್ನುವ ಕೆಲವು ರಾಜಕಾರಣಿಗಳು ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಆಡಳಿತ ನೋಡಿ ಕಲಿಯಬೇಕು’ ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಸಲಹೆ ನೀಡಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಂಜಮ್ಮ ಮೋಟೇಗೌಡ ಚಾರಿಟಬಲ್‌ ಮತ್ತು ಎಜುಕೇಷನ್‌ ಟ್ರಸ್ಟ್‌ ವತಿಯಿಂದ ಶನಿವಾರ ನಡೆದ ಕಾರ್ಯಕ್ರಮದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಉತ್ತರ ಕರ್ನಾಟಕ ಮತ್ತು ಹೈದರಾಬಾದ್‌ ಕರ್ನಾಟಕ ಹಾಳಾಗಬೇಕಾದರೆ ನಾವು ಕಾರಣವೇ ಹೊರತು ಸರ್ಕಾರವಲ್ಲ’ ಎಂದರು.

ADVERTISEMENT

‘ಮಂಡ್ಯ ಜಿಲ್ಲೆಗೆ ಕೊಡುಗೆ ನೀಡಿದ ಕೆ.ವಿ.ಶಂಕರಗೌಡ ಅವರನ್ನು ಮಾದರಿಯಾಗಿ ಇಟ್ಟುಕೊಂಡು ನಾನು ಶಿಕ್ಷಣ ಸಚಿವನಾದೆ. ನನ್ನ 20 ತಿಂಗಳ ಅವಧಿಯಲ್ಲಿ ಬಿಸಿಯೂಟ ಯೋಜನೆ, ಶಿಕ್ಷಕರ ನೇಮಕ ಸೇರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಿದೆ. ಎಚ್‌.ಡಿ.ದೇವೇಗೌಡರ ನಂಬಿಕೆ ಉಳಿಸಿಕೊಂಡೆ. ಶಿಕ್ಷಕರು ನೆಮ್ಮದಿಯಾಗಿದ್ದರೆ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಪಾಠ ಮಾಡುತ್ತಾರೆ ಎನ್ನುವುದನ್ನು ಮನಗಂಡು ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಾಗಿ ಯಶಸ್ವಿಯಾದೆ’ ಎಂದು ಹೇಳಿದರು.

‘ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಯಿಂದ ನನ್ನ ಗೌರವ ಹೆಚ್ಚಿದೆ. ಈ ಪ್ರಶಸ್ತಿಯನ್ನು ಮನೆಯಲ್ಲಿಟ್ಟು ಪೂಜಿಸುತ್ತೇನೆ. ನಾಲ್ವಡಿ ಅವರನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಅವರು ಹಾಕಿಕೊಟ್ಟ ಆಡಳಿತದ ಮಾದರಿ ನಮಗೆ ಪ್ರೇರಣೆ’ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ‘ಉತ್ತರ ಕರ್ನಾಟಕಕ್ಕೆ ಸೇರಿದ ಬಸವರಾಜ ಹೊರಟ್ಟಿ ಅವರಿಗೆ ದಕ್ಷಿಣ ಕರ್ನಾಟಕದ ಪ್ರಮುಖವಾಗಿ ಹತ್ತು ಜಿಲ್ಲೆಗಳನ್ನು ಒಳಗೊಂಡ ಈ ಪ್ರದೇಶದಲ್ಲಿ ಆಳ್ವಿಕೆ ಮಾಡಿದ ರಾಜರ್ಷಿ ನಾಲ್ವಡಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಮೂಲಕ ಅಖಂಡ ಕರ್ನಾಟಕದ ಕಲ್ಪನೆಗೆ ಕಾರ್ಯಕ್ರಮ ಸಾಕ್ಷಿಯಾಗಿದೆ’ ಎಂದು ಹೇಳಿದರು.

ವಿಧಾನಪರಿಷತ್‌ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿದರು.

ಕೃತಿ ಪರಿಚಯ

ಕೃತಿ ಹೆಸರು– ನಾಲ್ವಡಿ ನಾಡು

ಬೆಲೆ– ₹30 ಪುಟಗಳು– 40

ಲೇಖಕ– ಲೋಕೇಶ್‌ ಚಂದಗಾಲು

ಪ್ರಕಾಶಕರು – ನಂಜಮ್ಮ ಮೋಟೇಗೌಡ ಚಾರಿಟಬಲ್‌ ಮತ್ತು ಎಜುಕೇಷನಲ್‌ ಟ್ರಸ್ಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.