ADVERTISEMENT

ಕತ್ತರಘಟ್ಟ ಪ್ರಕರಣ: ನರೇಂದ್ರಸ್ವಾಮಿ ನೇತೃತ್ವದಲ್ಲಿ ಸದನ ಸಮಿತಿ ಭೇಟಿ, ಪರಿಶೀಲನೆ

ಸಮಗ್ರ ತನಿಖೆ ನಡೆಸಿ, ವರದಿ ಸಲ್ಲಿಸಿ

​ಪ್ರಜಾವಾಣಿ ವಾರ್ತೆ
Published 29 ಮೇ 2025, 13:22 IST
Last Updated 29 ಮೇ 2025, 13:22 IST
<div class="paragraphs"><p>ಸದನ ಸಮಿತಿ ಸದಸ್ಯರು, ಅಧಿಕಾರಿಗಳೊಂದಿಗೆ&nbsp;ಕತ್ತರಘಟ್ಟ ಗ್ರಾಮಕ್ಕೆ ಭೇಟಿ ನೀಡಿದ ಪಿ.ಎಂ. ನರೇಂದ್ರಸ್ವಾಮಿ </p></div>

ಸದನ ಸಮಿತಿ ಸದಸ್ಯರು, ಅಧಿಕಾರಿಗಳೊಂದಿಗೆ ಕತ್ತರಘಟ್ಟ ಗ್ರಾಮಕ್ಕೆ ಭೇಟಿ ನೀಡಿದ ಪಿ.ಎಂ. ನರೇಂದ್ರಸ್ವಾಮಿ

   

ಕೆ.ಆರ್.ಪೇಟೆ (ಮಂಡ್ಯ ಜಿಲ್ಲೆ): ‘ತಾಲ್ಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ನಡೆದಿರುವ ದಲಿತ ವ್ಯಕ್ತಿಯ ಸಾವಿನ ಪ್ರಕರಣವು ಅನುಮಾನಾಸ್ಪದವಾಗಿದ್ದು, ಇದರ ಬಗ್ಗೆ ವಿಸ್ತೃತ ತನಿಖೆ ನಡೆಸಬೇಕು. ತನಿಖಾ ವರದಿ ಬಂದ ನಂತರ ಚರ್ಚಿಸಿ ನ್ಯಾಯ ಒದಗಿಸಲಾಗುವುದು’ ಎಂದು ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ತಿಳಿಸಿದರು.

ಗ್ರಾಮಕ್ಕೆ ಸಮಿತಿಯ ಸದಸ್ಯರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಗುರುವಾರ ಭೇಟಿ ನೀಡಿ ರೈತ ಜಯಕುಮಾರ್ ಮೃತಪಟ್ಟ ಸ್ಥಳ ಪರಿಶೀಲಿಸಿದರು. ಆತನ ಪತ್ನಿ ಲಕ್ಷ್ಮಿ ಮತ್ತು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ADVERTISEMENT

‘ಗ್ರಾಮದಲ್ಲಿ ನಡೆದಿರುವ ಈ ಕೃತ್ಯ ಅಮಾನವೀಯ. ಕುಟುಂಬದವರನ್ನು ಭೇಟಿ ಮಾಡಿದಾಗ ಹಲವು ಅನುಮಾನಾಸ್ಪದ ವಿಚಾರಗಳನ್ನು ತಿಳಿಸಿದ್ದಾರೆ. ಈ ಎಲ್ಲ ವಿಷಯಗಳ ಮೇಲೆ ವಿಸ್ತೃತ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಲಾಗಿದೆ. ಕುಟುಂಬದ ಯಜಮಾನನನ್ನು ಕಳೆದುಕೊಂಡು ಅನಾಥವಾಗಿರುವ ಕುಟುಂಬಕ್ಕೆ ಜಮೀನಿನ ಹಕ್ಕು ನೀಡಬೇಕು. ಯೋಗ್ಯ ಪರಿಹಾರದ ಜೊತೆಗೆ ಉದ್ಯೋಗ ನೀಡಬೇಕು ಎಂದು ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಜಯಕುಮಾರ್ ಸಾವಿನ ವಿಷಯದಲ್ಲಿ ಅನುಮಾನಗಳು ಹೆಚ್ಚಾಗಿಯೇ ಇವೆ. ರೌಡಿಶೀಟರ್‌ನಿಂದ ದೌರ್ಜನ್ಯ ನಡೆದಿದೆ ಎಂದು ಆತ ದೂರು ಕೊಟ್ಟಿದ್ದರೂ, ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯಾಗಿದ್ದರೂ ಆದ್ಯತೆ ನೀಡದಿರುವುದು ಪೊಲೀಸರ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಎಲ್ಲ ಆಯಾಮಗಳಿಂದ ತನಿಖೆ ಮುಗಿಯುವವರೆಗೂ ನಾವು ಏನನ್ನು ಹೇಳುವುದಿಲ್ಲ. ಪೂರ್ಣ ಪ್ರಮಾಣದ ವರದಿ ಸ್ಥಳೀಯ ಜಿಲ್ಲಾಡಳಿತದ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಬಂದ ನಂತರ ಈ ಬಗ್ಗೆ ಸಮಗ್ರವಾಗಿ ಚರ್ಚಿಸಿ ಅಂತಿಮ ತೀರ್ಮಾನವನ್ನು ಸಮಿತಿ ನೀಡಲಿದೆ’ ಎಂದರು.

ಸಭೆಯಲ್ಲಿ ಸಮಿತಿಯ ಸದಸ್ಯರು ಹಾಗೂ ಶಾಸಕರಾದ ಪ್ರಸಾದ್ ಅಬ್ಬಯ್ಯ, ಡಾ.ತಿಮ್ಮಯ್ಯ, ಅಭಯ್ ಪಾಟೀಲ್, ರಾಜ್ಯ ಭೋವಿ ನಿಗಮದ ಅಧ್ಯಕ್ಷ ಚಂದ್ರಪ್ಪ ಇದ್ದರು.

ಶಾಸಕ ಎಚ್.ಟಿ. ಮಂಜು, ಜಿಲ್ಲಾಧಿಕಾರಿ ಕುಮಾರ, ಎಡಿಜಿಪಿ ಅರುಣ್ ಚಕ್ರವರ್ತಿ, ಮೈಸೂರಿನ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್‌ಪಿ ತಿಮ್ಮಯ್ಯ, ಡಿವೈಎಸ್‌ಪಿ ಚಲುವರಾಜು, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್ ಅಶೋಕ್, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ್ ಕುಮಾರ್, ದಲಿತ ಮುಖಂಡರಾದ ಡಿ.ಪ್ರೇಮಕುಮಾರ್, ಬಸ್ತಿ ರಂಗಪ್ಪ, ಮಾಂಬಳ್ಳಿ ಜಯರಾಮ್, ಸೋಮಸುಂದರ್, ಕತ್ತರಘಟ್ಟ ರಾಜೇಶ್, ಕಾಂಗ್ರೆಸ್ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.