
ಮಂಡ್ಯ: ‘ಪ್ರತಿಯೊಬ್ಬರೂ ಆರೋಗ್ಯವನ್ನು ಸಮೋತೋಲನದಲ್ಲಿ ಇಟ್ಟುಕೊಳ್ಳಬೇಕೆಂದು ನಮ್ಮ ಸರ್ಕಾರವು ಮನೆ– ಮನೆಗೆ ಕಾವೇರಿ ನೀರನ್ನು ಒದಗಿಸುವ ಮಹತ್ವದ ಯೋಜನೆ ಜಾರಿಗೆ ತಂದಿದ್ದು, ಇದರ ಪ್ರಯೋಜನವು ಸದ್ಬಳಕೆ ಆಗಲಿದೆ’ ಎಂದು ಶಾಸಕ ಪಿ.ರವಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕಿನ ಕೀಲಾರದಲ್ಲಿ ಭಾನುವಾರ ಆಯೋಜಿಸಿದ್ದ ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮದ ಮನೆ– ಮನೆಗೆ ಕಾವೇರಿ ನೀರನ್ನು ಒದಗಿಸುವ ಮಹತ್ವದ ಯೋಜನೆ ಶಿಲಾನ್ಯಾಸ ಸಮಾರಂಭದಲ್ಲಿ ‘ಸಮಯ ರತ್ನ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಜಿಲ್ಲೆಯ ಜಲಜೀವನ್ ಮಿಷನ್ ಯೋಜನೆಯಡಿ ಜನವಸತಿಗಳಿಗೆ ಬಹು ಗ್ರಾಮ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆ ಮೂಲಕ ಅಂದಾಜು ಮೊತ್ತ ₹120.96 ಕೋಟಿಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಶುದ್ಧ ಕುಡಿಯುವ ನೀರು ಒದಗಿಸಲು ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದೇನೆ ಎಂದರು.
‘ಕುಡಿಯುವ ನೀರಿಗೆಂದು ಪ್ರತಿ ತಿಂಗಳು ₹40ರಂತೆ ಗ್ರಾಮ ಪಂಚಾಯಿತಿಗೆ ಹಣ ಕಟ್ಟುತ್ತಿದ್ದೀರಾ. ಈಗ ಮೀಟರ್ ಅಳವಡಿಸಿ ಹೆಚ್ಚಿಗೆ ಹಣ ವಸೂಲಿ ಮಾಡುವುದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಬೋರ್‌ವೆಲ್ ನೀರನ್ನು ಉಪಯೋಗಿಸುತ್ತಿರುವುದರಿಂದ ಅನಾರೋಗ್ಯಕ್ಕೆ ತುತ್ತಾಗುವ ಸಂಭವ ಹೆಚ್ಚಿದೆ. ಕಾವೇರಿ ನೀರನ್ನು ವ್ಯವಸಾಯಕ್ಕೆ ಮಾತ್ರ ಒದಗಿಸಲಾಗುತ್ತಿತ್ತು, ಈಗ ಸರ್ಕಾರವು ಬೋರ್‌ವೆಲ್ ನೀರಿನಿಂದ ಸಮಸ್ಯೆಗಳನ್ನು ಹೋಗಲಾಡಿಸುವ ದೃಷ್ಟಿಯಿಂದ ಮನೆ– ಮನೆಗೆ ಕಾವೇರಿ ನೀರನ್ನು ಕೊಡುವ ಉದ್ದೇಶದಿಂದ ಜಲಧಾರೆ ಯೋಜನೆ ಅನುಷ್ಠಾನಕ್ಕೆ ತಂದಿದೆ’ ಎಂದು ತಿಳಿಸಿದರು.
ಗ್ರಾಮದ ಪ್ರವೇಶ ದ್ವಾರದಲ್ಲಿ ಪೂರ್ಣ ಕುಂಭದೊಂದಿಗೆ ಶಾಸಕ ಪಿ.ರವಿಕುಮಾರ್ ಅವರನ್ನು ಬೃಹತ್ ಸೇಬಿನ ಹಾರ ಹಾಕುವ ಮೂಲಕ ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಣೇಶ್ ಹೆಗಡೆ, ಮುಖಂಡರಾದ ರುದ್ರೇಗೌಡ, ಶಿವಶಂಕರ್, ಕೀಲಾರ ಕೃಷ್ಣ, ಕೀಲಾರ ಶಿವಮೂರ್ತಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.