ADVERTISEMENT

ಕೆ.ಆರ್.ಪೇಟೆ | ಅಧಿಕಾರಿಗಳ ಗೈರು: ಶಾಸಕ ಎಚ್.ಟಿ.ಮಂಜು ಬೇಸರ

ಸಿಂಧುಘಟ್ಟ ಗ್ರಾಮ ಪಂಚಾಯಿತಿಯಲ್ಲಿ ಕೆಡಿಪಿ ಸಭೆ

​ಪ್ರಜಾವಾಣಿ ವಾರ್ತೆ
Published 14 ಮೇ 2025, 14:22 IST
Last Updated 14 ಮೇ 2025, 14:22 IST
<div class="paragraphs"><p>ಸಿಂಧುಘಟ್ಟ ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯಿತಿ ಮಟ್ಟದ ಕೆಡಿಪಿ ಸಭೆಯಲ್ಲಿ ಶಾಸಕ ಎಚ್.ಟಿ.ಮಂಜು ಮಾತನಾಡಿದರು.</p></div>

ಸಿಂಧುಘಟ್ಟ ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯಿತಿ ಮಟ್ಟದ ಕೆಡಿಪಿ ಸಭೆಯಲ್ಲಿ ಶಾಸಕ ಎಚ್.ಟಿ.ಮಂಜು ಮಾತನಾಡಿದರು.

   

ಕೆ.ಆರ್.ಪೇಟೆ: ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯಿತಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಶಾಸಕರ ಜವಾಬ್ದಾರಿ ಹಗುರವಾಗಲು ಸಾಧ್ಯ. ಆದ್ದರಿಂದ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಬೇಕು ಎಂದು ಶಾಸಕ ಎಚ್.ಟಿ. ಮಂಜು ಸೂಚಿಸಿದರು.

ತಾಲ್ಲೂಕಿನ ಸಿಂಧುಘಟ್ಟ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಕೆಡಿಪಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ADVERTISEMENT

‘ಸಭೆಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಜರಿ ಕಡ್ಡಾಯವಾಗಿದ್ದು, ತಮ್ಮ ತಮ್ಮ ಇಲಾಖೆಗಳ ಪ್ರಗತಿ, ಅಗತ್ಯ ಮಾಹಿತಿಯನ್ನು ಒದಗಿಸಬೇಕು. ಸರ್ಕಾರದ ಕಾರ್ಯಕ್ರಮಗಳು ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿವೆ ಎಂಬುದನ್ನು ಪರಿಶೀಲಿಸಲು ಇದು ಸಹಕಾರಿಯಾಗುತ್ತದೆ. ಆದರೆ ಕೆಲವು ಇಲಾಖೆಗಳು ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವುದು ಸರಿಯಲ್ಲ’ ಎಂದರು.

‘ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮ ಪಂಚಾಯಿತಿ ವ್ಯಾಫ್ತಿಯಲ್ಲಿ ನಾಲ್ಕು ಎಕರೆ ಸರ್ಕಾರಿ ಭೂಮಿ ಗುರುತಿಸಿ ಬಡವರಿಗೆ ವಸತಿ ನಿವೇಶನಗಳನ್ನು ಹಂಚಿಕೆ ಮಾಡಲು ಮುಂದಾಗಬೇಕು. ಗ್ರಾಮಾಡಳಿತಾಧಿಕಾರಿಗಳು ಮತ್ತು ರಾಜಸ್ವ ನಿರೀಕ್ಷಕರು ಪೌತಿಖಾತೆಗೆ ಆದ್ಯತೆ ನೀಡಬೇಕು’ ಎಂದು ಹೇಳಿದರು.

‘ಶೀಳನೆರೆ ಹೋಬಳಿಯಲ್ಲಿ ಕುಡಿಯುವ ನೀರು, ಪಂಪ್‌ಸೆಟ್‌, ಗೃಹಬಳಕೆಗೆ ವಿದ್ಯುತ್ ಸರಬರಾಜು ಸಮರ್ಪಕ ಆಗಿಲ್ಲವೆಂದು ದೂರುಗಳು ಬಂದಿದ್ದು, ವಿಭಾಗದ ಜೆಇ ಕ್ರಮವಹಿಸಿ ಸಮಸ್ಯೆ ಬಗೆಹರಿಸಬೇಕು ಇಲ್ಲದಿದ್ದರೆ ಶಿಸ್ತುಕ್ರಮಕ್ಕೆ ಮುಂದಾಗಬೇಕಾಗುತ್ತದೆಂದು’ ಎಂದು ಎಚ್ಚರಿಸಿದರು.

ಮೀನುಗಾರಿಕೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ‘ಕೆಲಸ ಮಾಡಲು ಆಗದಿದ್ದರೆ ವರ್ಗಾವಣೆ ಮಾಡಿಸಿಕೊಂಡು ಹೋಗಬಹುದು’ ಎಂದು ಕಿಡಿಕಾರಿದರು.

ಸಭೆಯಲ್ಲಿ ಸಿಂಧುಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಾವಣ್ಯಕುಮಾರ್, ತಾಲ್ಲೂಕು ಪಂಚಾಯಿತಿ ಇಒ ಕೆ.ಸುಷ್ಮಾ, ಪಿಡಿಒ ಕೆ.ಜೆ.ವಾಣಿ, ತಾಲ್ಲೂಕು ಯೋಜನಾಧಿಕಾರಿ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.