
ಮಂಡ್ಯ: ‘ಅಧಿಕ ಒತ್ತಡ ಹಾಗೂ ಆರೋಗ್ಯದ ಬಗೆಗಿನ ನಿರಾಸಕ್ತಿಯಿಂದಾಗಿ ಪುರುಷರಲ್ಲಿ ಪ್ರಾಸ್ಟೇಟ್ (ವೃಷಣ), ಮೂತ್ರಪಿಂಡ ಸಂಬಂಧಿ ಕಾಯಿಲೆ ಹೆಚ್ಚುತ್ತಿದೆ. ಈ ಬಗ್ಗೆ ನಿರ್ಲಕ್ಷ್ಯವಹಿಸಿದರೆ ಗಂಭೀರ ಪರಿಣಾಮ ಎದುರಾಗಬಹುದು’ ಎಂದು ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಯುರಾಲಜಿ, ಆಂಡ್ರಾಲಜಿ ಮತ್ತು ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಸರ್ಜನ್ ಡಾ.ಟಿ.ಪಿ. ದಿನೇಶ್ ಕುಮಾರ್ ಹೇಳಿದರು.
ವಯಸ್ಸಾದಂತೆ ವೃಷಣ ಗ್ರಂಥಿಯ ಹಿಗ್ಗುವಿಕೆ ಸಾಮಾನ್ಯ. ಇದರಿಂದಾಗಿ ಪದೇ ಪದೇ ಮೂತ್ರ ವಿಸರ್ಜನೆ, ನಿಧಾನ ಮೂತ್ರದ ಹರಿವು ಹಾಗೂ ನಿದ್ರಾಭಂಗದಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಲ್ಲದೆ ವೃಷಣಗಳ ಕ್ಯಾನ್ಸರ್ ಪ್ರಕರಣ ಕೂಡ ಹೆಚ್ಚುತ್ತಿದೆ. ಇದಕ್ಕೆ ವಯಸ್ಸು, ಅನುವಂಶೀಯತೆ, ಜೀವನಶೈಲಿ ಹಾಗೂ ಆಹಾರ ಪದ್ಧತಿ ಕಾರಣ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
60 ವರ್ಷ ಮೇಲ್ಪಟ್ಟವರ ಪೈಕಿ ಶೇ 60ರಷ್ಟು ಪುರುಷರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸಕಾಲಿಕ ತಪಾಸಣೆಯಿಂದ ವೃಷಣ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಬಹುದು. ಕುಟುಂಬದಲ್ಲಿ ಕ್ಯಾನ್ಸರ್ ಇತಿಹಾಸ ಹೊಂದಿರುವ ಪುರುಷರು 45 ವರ್ಷ ದಾಟಿದ ನಂತರ ಕಾಲಕಾಲಕ್ಕೆ ಪಿಎಸ್‌ಎ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಜನ್ ಡಾ.ವಿಪಿನ್ ಕಾವೇರಪ್ಪ ಮಾತನಾಡಿ, ‘ದೇಶದಲ್ಲಿ 13.8 ಕೋಟಿ ಜನರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಧಿಕ ರಕ್ತದೊತ್ತಡ ಬದಲಾದ ಆಹಾರ ಪದ್ಧತಿ ಹಾಗೂ ಮಧುಮೇಹವೇ ಪುರುಷರಲ್ಲಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ ಪ್ರಮುಖ ಕಾರಣ’ ಎಂದು ಹೇಳಿದರು. ಯುರಾಲಜಿ, ಆಂಡ್ರಾಲಜಿ ಮತ್ತು ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಡಾ.ಕೆ.ಎ.ತಿಮ್ಮಯ್ಯ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.