
ಕಿಕ್ಕೇರಿ ಸಮೀಪದ ನಗರೂರು ಮಾರ್ಗೋನಹಳ್ಳಿ ಗ್ರಾಮದಲ್ಲಿ ಮಂಗಳವಾರ ಮರಡಿಲಿಂಗೇಶ್ವರ ದೇವಾಲಯದಲ್ಲಿ ದೊಡ್ಡಯ್ಯ, ಚಿಕ್ಕಯ್ಯ ದೇವರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಕಿಕ್ಕೇರಿ: ಮರಡಿಲಿಂಗೇಶ್ವರ ಕ್ಷೇತ್ರದಲ್ಲಿ ಹಾಲುಮತಸ್ಥ ಸಮುದಾಯದ ಆರಾಧ್ಯ ದೇವರಾದ ಮರಡಿಲಿಂಗೇಶ್ವರ ಸ್ವಾಮಿ ರಥೋತ್ಸವ ಮಂಗಳವಾರ ಹೋಳಿ ಹುಣ್ಣಿಮೆಯಂದು ಸಂಭ್ರಮದಿಂದ ನೆರವೇರಿತು.
ಜಿಲ್ಲೆಯ ವಿವಿಧೆಡೆ, ಹೊರಗಳಿಂದ ಭಕ್ತರು ರಥೋತ್ಸವದಲ್ಲಿ ಭಾಗಿಯಾದರು. ಚಂದ್ರಗ್ರಹಣದ ಅಂಗವಾಗಿ ರಥೋತ್ಸವ ದೇಗುಲ ಸಮಿತಿ ಮಾರ್ಗದರ್ಶನದಂತೆ ಚಾಲನೆ ನೀಡಲಾಯಿತು. ದೇವರಿಗೆ ಅಗ್ರಪೂಜೆ ಸಲ್ಲಿಸಿ ಉತ್ಸವಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಚಿಕ್ಕಯ್ಯ, ದೊಡ್ಡಯ್ಯ, ಬೀರೇಶ್ವರ, ಮರಡಿಲಿಂಗೇಶ್ವರ ಸ್ವಾಮಿ ಉಘೇ ಉಘೇ ಎಂದು ಭಕ್ತರು ರಥವನ್ನು ಗುಡಿಯ ಸುತ್ತ ಎಳೆದರು. ರಥದ ಹಿಂದೆ ಕುರಿಗಾಹಿಗಳು ಕುರಿಮಂದೆಯನ್ನು ಪ್ರದಕ್ಷಿಣೆ ಹಾಕಿಸಿದರು. ತೀರ್ಥ ಪ್ರೋಕ್ಷಣೆ ಮಾಡಿಸಿದರು. ನವಜೋಡಿಗಳು ರಥಕ್ಕೆ ಹಣ್ಣು ಧವನ ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ನೀರು ಮಜ್ಜಿಗೆ, ಪಾನಕ, ಅನ್ನಪ್ರಸಾದ ಹಮ್ಮಿಕೊಳ್ಳಲಾಗಿತ್ತು.
ಮುಖಂಡರಾದ ಮುಡಾ ಮಾಜಿ ಅಧ್ಯಕ್ಷ ಕೆ. ಶ್ರೀನಿವಾಸ್, ದೇವರ ಹೆಗಡಿಗಳಾದ ತೇಗನಹಳ್ಳಿ ನಿಂಗೇಗೌಡ, ಮಾರ್ಗೋನಹಳ್ಳಿ ಮಂಜೇಗೌಡ, ನಗರೂರು ಕೃಷ್ಣೇಗೌಡ, ಉದ್ಯಮಿ ವೇಣುಗೋಪಾಲ, ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಕೆ. ಪುರುಷೋತ್ತಮ, ತಾ.ಪಂ. ಮಾಜಿ ಸದಸ್ಯ ರವೀಂದ್ರಬಾಬು, ಸಚಿನ್‌ಕೃಷ್ಣ, ಕೆ. ವಿನೋದಕುಮಾರ್, ಕಾಳಮ್ಮ ನಿಂಗೇಗೌಡ, ಕಾಡುಮೆಣಸ ಚಂದ್ರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.