ADVERTISEMENT

ಕೊಕ್ಕರೆ ಬೆಳ್ಳೂರು ಪಕ್ಷಿಧಾಮ: ಹಕ್ಕಿಗಳೊಂದಿಗೆ ಜನರ ಸಹಬಾಳ್ವೆಯ ಹಾಡು

ಕೊಕ್ಕರೆ ಬೆಳ್ಳೂರು ಪಕ್ಷಿಧಾಮಕ್ಕೆ ವಲಸೆ ಬಂದ ಹೆಜ್ಜಾರ್ಲೆ ಮತ್ತು ಬಣ್ಣದ ಕೊಕ್ಕರೆಗಳು

ಸಿದ್ದು ಆರ್.ಜಿ.ಹಳ್ಳಿ
Published 26 ಫೆಬ್ರುವರಿ 2026, 7:51 IST
Last Updated 26 ಫೆಬ್ರುವರಿ 2026, 7:51 IST
ಕೊಕ್ಕರೆ ಬೆಳ್ಳೂರಿನಲ್ಲಿ ಬಣ್ಣದ ಕೊಕ್ಕರೆಗಳ (ಪೇಂಟೆಡ್ ಸ್ಟಾರ್ಕ್‌) ಕಲರವ  – ಪ್ರಜಾವಾಣಿ ಚಿತ್ರಗಳು
ಕೊಕ್ಕರೆ ಬೆಳ್ಳೂರಿನಲ್ಲಿ ಬಣ್ಣದ ಕೊಕ್ಕರೆಗಳ (ಪೇಂಟೆಡ್ ಸ್ಟಾರ್ಕ್‌) ಕಲರವ  – ಪ್ರಜಾವಾಣಿ ಚಿತ್ರಗಳು   

ಮಂಡ್ಯ: ರಾಜ್ಯದ ಪ್ರಸಿದ್ಧ ಪಕ್ಷಿಧಾಮಗಳಲ್ಲಿ ಒಂದಾಗಿರುವ ಮದ್ದೂರು ತಾಲ್ಲೂಕಿನ ‘ಕೊಕ್ಕರೆ ಬೆಳ್ಳೂರು’ ಗ್ರಾಮಕ್ಕೆ ಹೆಜ್ಜಾರ್ಲೆ (ಸ್ಪಾಟ್‌ ಬಿಲ್ಡ್‌ ಪೆಲಿಕಾನ್‌) ಮತ್ತು ಬಣ್ಣದ ಕೊಕ್ಕರೆ (ಪೇಂಟೆಡ್‌ ಸ್ಟಾರ್ಕ್‌) ಪಕ್ಷಿಗಳು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬಂದಿವೆ. 

ವಲಸೆ ಪಕ್ಷಿಗಳು ಗ್ರಾಮದ ಮಧ್ಯಭಾಗದಲ್ಲಿರುವ ಹುಣಸೆ, ಆಲದ ಮರಗಳ ಮೇಲೆ ಗೂಡುಕಟ್ಟಿ ಸಂತಾನೋತ್ಪತ್ತಿ ಮಾಡುವ ಸಂಭ್ರಮದಲ್ಲಿವೆ. ಈ ಹಕ್ಕಿಗಳೊಂದಿಗೆ ಇಲ್ಲಿನ ಗ್ರಾಮಸ್ಥರು ನೂರಾರು ವರ್ಷಗಳಿಂದ ಸಾಮರಸ್ಯದ ಬದುಕು ಕಟ್ಟಿಕೊಂಡಿದ್ದಾರೆ. ಪಕ್ಷಿಗಳ ಚಲನ ವಲನಕ್ಕೆ ಸ್ವಲ್ಪವೂ ಧಕ್ಕೆಯಾಗದಂತೆ ನಾಜೂಕಿನಿಂದ ಜೀವನ ನಡೆಸುತ್ತಿದ್ದಾರೆ. ಪಕ್ಷಿಗಳನ್ನು ತಮ್ಮ ಮಕ್ಕಳಂತೆ ಪ್ರೀತಿಸುತ್ತಾರೆ. 

ಮಾನವ– ವನ್ಯಜೀವಿ ಸಹಬಾಳ್ವೆಗೆ ಈ ಗ್ರಾಮ ಉತ್ತಮ ನಿದರ್ಶನವಾಗಿದೆ. ಪ್ರಕೃತಿ ಪ್ರೇಮಿಗಳಿಗೆ ಸುಂದರ ಪ್ರವಾಸಿ ತಾಣವಾಗಿರುವ ಕೊಕ್ಕರೆ ಬೆಳ್ಳೂರಿನಲ್ಲಿ ಈ ಬಾರಿ ಹೆಜ್ಜಾರ್ಲೆ ಪಕ್ಷಿಗಳ 300 ಗೂಡುಗಳನ್ನು ಗುರುತಿಸಲಾಗಿದೆ. ಕಳೆದ ಬಾರಿ 110 ಗೂಡುಗಳು ಮಾತ್ರ ಇದ್ದವು. ಈ ಬಾರಿ ಸುಮಾರು 2500 ಬಣ್ಣದ ಕೊಕ್ಕರೆಗಳು ಇಲ್ಲಿಗೆ ಧಾವಿಸಿವೆ. 

ADVERTISEMENT

ಆಹಾರ ಹುಡುಕಿಕೊಂಡು ಬಂದ ತಾಯಿ ಹಕ್ಕಿಗಳು, ಗೂಡಿನಲ್ಲಿರುವ ತಮ್ಮ ಮರಿಗಳಿಗೆ ಮೀನುಗಳನ್ನು ತಿನಿಸುವ ಕ್ಷಣಗಳು ಪ್ರಕೃತಿ ಪ್ರಿಯರಿಗೆ ರೋಮಾಂಚನ ಉಂಟು ಮಾಡುತ್ತವೆ. ಆಹಾರ ಸಮೀಕ್ಷೆ, ಜಾಗದ ಸುರಕ್ಷತೆ ಮತ್ತು ನೀರಿನ ಲಭ್ಯತೆಗೆ ಪೂರಕವಾಗಿರುವ ಈ ಊರು ಹಕ್ಕಿಗಳ ಪಾಲಿಗೆ ತವರೂರಾಗಿದೆ. 

ಗ್ರಾಮಸ್ಥರಿಗೆ ಪ್ರೋತ್ಸಾಹಧನ

‘ಶಿಂಷಾ ನದಿ ತೀರದಲ್ಲಿರುವ ಕೊಕ್ಕರೆ ಬೆಳ್ಳೂರಿನ ಸುತ್ತಮುತ್ತ ತೈಲೂರು ಕೆರೆ, ಸೂಳೆಕೆರೆ, ಮಾದರಹಳ್ಳಿ ಕೆರೆ, ದೊಡ್ಡರಸಿನಕೆರೆ, ಇಗ್ಗಲೂರು ಜಲಾಶಯ ಮುಂತಾದ ನೀರಿನ ತಾಣಗಳು ಇರುವುದರಿಂದ ಪಕ್ಷಿಗಳ ಸಂತಾನೋತ್ಪತ್ತಿಗೆ ಸೂಕ್ತವಾದ ಸ್ಥಳವಾಗಿದೆ. ಪಕ್ಷಿಗಳು ಗೂಡು ಕಟ್ಟಿರುವ ಮರಗಳನ್ನು ಕಡಿಯದಂತೆ ಅದರ ಮಾಲೀಕರಿಗೆ ಸರ್ಕಾರ ಪ್ರತಿ ವರ್ಷ ಪ್ರೋತ್ಸಾಹಧನ ನೀಡುತ್ತಿದೆ’ ಎಂದು ಗ್ರಾಮಸ್ಥರು ತಿಳಿಸಿದರು. 

‘ಶ್ರೀಲಂಕಾ, ಬರ್ಮಾ, ಉತ್ತರ ಭಾರತದ ವಿವಿಧ ಪ್ರದೇಶಗಳಿಂದ ಕೊಕ್ಕರೆ ಬೆಳ್ಳೂರಿಗೆ ವಲಸೆ ಪಕ್ಷಿಗಳು ಧಾವಿಸುತ್ತವೆ. ಪೆಲಿಕಾನ್‌ಗಳು ಅಕ್ಟೋಬರ್‌–ನವೆಂಬರ್‌ ತಿಂಗಳಿಂದ ಬರಲು ಆರಂಭಿಸಿದರೆ, ಬಣ್ಣದ ಕೊಕ್ಕರೆಗಳು ಜನವರಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಈ ಗ್ರಾಮಕ್ಕೆ ವಲಸೆ ಬರುತ್ತವೆ. ಜೂನ್‌– ಜುಲೈವರೆಗೆ ಇಲ್ಲಿಯೇ ಬೀಡುಬಿಟ್ಟು, ಮೊಟ್ಟೆ ಇಟ್ಟು, ಮರಿ ಮಾಡಿ, ಅವುಗಳಿಗೆ ಹಾರಾಟ ಮತ್ತು ಆಹಾರ ಅನ್ವೇಷಣೆಯ ಪಾಠ ಕಲಿಸಿದ ನಂತರ ಮರಳಿ ಹೋಗುತ್ತವೆ’ ಎಂದು ಪಕ್ಷಿಪ್ರಿಯರು ಮಾಹಿತಿ ನೀಡಿದರು. 

ಹೆಜ್ಜಾರ್ಲೆ ಬಳಗ

‘1994ರಲ್ಲಿ ಮೈಸೂರು ಅಮೆಚೂರ್‌ ನ್ಯಾಚುರಲಿಸ್ಟ್‌ (ಮ್ಯಾನ್‌) ಸಂಸ್ಥೆಯ ಮನು ಅವರ ಸಹಕಾರದೊಂದಿಗೆ ‘ಹೆಜ್ಜಾರ್ಲೆ ಬಳಗ’ ಸ್ಥಾಪಿಸಿ, ಗಾಯಗೊಂಡ ಮರಿಗಳನ್ನು ಸ್ವಂತ ಖರ್ಚಿನಲ್ಲಿ ಸಂರಕ್ಷಿಸುತ್ತಿದ್ದೆವು. ವರ್ಷಕ್ಕೆ 5ರಿಂದ 10 ಪೆಲಿಕಾನ್‌ಗಳು ಮರದಿಂದ ಬಿದ್ದು ಗಾಯಗೊಳ್ಳುತ್ತಿದ್ದವು. 2022ರವರೆಗೆ ಸುಮಾರು 300 ಮರಿಗಳನ್ನು ಸಂರಕ್ಷಿಸಿದ್ದೇವೆ. ನಂತರ ಅರಣ್ಯ ಇಲಾಖೆಯೇ ಪಕ್ಷಿ ಪಾಲನಾ ಕೇಂದ್ರ ತೆರೆದು, ಆ ಕಾರ್ಯ ನಿರ್ವಹಿಸುತ್ತಿದೆ’ ಎಂದು ಪಕ್ಷಿಪ್ರೇಮಿ ಬಿ.ಲಿಂಗೇಗೌಡರು ಮಾಹಿತಿ ನೀಡಿದರು. 

ಕೊಕ್ಕರೆ ಬೆಳ್ಳೂರಿಗೆ ವಲಸೆ ಬಂದಿರುವ ಹೆಜ್ಜಾರ್ಲೆ (ಸ್ಪಾಟ್‌ ಬಿಲ್ಡ್‌ ಪೆಲಿಕಾನ್‌) ಪಕ್ಷಿಗಳು 
ಹೆಜ್ಜಾರ್ಲೆ ಪಕ್ಷಿಯೊಂದಿಗೆ ಕೊಕ್ಕರೆಬೆಳ್ಳೂರಿನ ಪಕ್ಷಿಪ್ರೇಮಿ ಬಿ.ಲಿಂಗೇಗೌಡ
ಆಹಾರದ ಅನ್ವೇಷಣೆಯಲ್ಲಿ ಬಣ್ಣದ ಕೊಕ್ಕರೆ 
ಗೂಡಿನಲ್ಲಿ ಮರಿಗಳಿಗೆ ಕಾವು ಕೊಡುತ್ತಿರುವ ‘ಪೇಂಟೆಡ್‌ ಸ್ಟಾರ್ಕ್‌’ 
ಪೆಲಿಕಾನ್‌ ಪಕ್ಷಿಯ ಮಾಂತ್ರಿಕ ನೋಟ 
ಬಣ್ಣದ ಕೊಕ್ಕರೆಯ ಜೋಡಿ
ಹುಣಸೆ ಮರದಲ್ಲಿ ಬೀಡು ಬಿಟ್ಟಿರುವ ಪೇಂಟೆಡ್‌ ಸ್ಟಾರ್ಕ್‌ಗಳು 

ಪಕ್ಷಿ ಪಾಲನಾ ಕೇಂದ್ರ

ಮೇಲುಕೋಟೆ ವನ್ಯಜೀವಿ ವಲಯ ವ್ಯಾಪ್ತಿಗೆ ಬರುವ ಈ ಪಕ್ಷಿಧಾಮದ ಸ್ಥಳದಲ್ಲಿ ಅರಣ್ಯ ಇಲಾಖೆ ವತಿಯಿಂದ ‘ಪಕ್ಷಿ ಪಾಲನಾ ಕೇಂದ್ರ’ ತೆರೆಯಲಾಗಿದೆ. ಇಲ್ಲಿ ಗಾಯಗೊಂಡ ಸುಮಾರು 20 ಮರಿಗಳನ್ನು ಸಂರಕ್ಷಿಸಲಾಗಿದೆ. ಗಾಯ ವಾಸಿಯಾಗಿ ರೆಕ್ಕೆ ಬಲಿತು ಹಾರುವಂತಾದ ನಂತರ ಪಕ್ಷಿಗಳನ್ನು ಇಲ್ಲಿಂದ ಬಿಡುಗಡೆ ಮಾಡಲಾಗುತ್ತದೆ. ಜತೆಗೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ಮಾಹಿತಿ ಕೇಂದ್ರವನ್ನು ಸ್ಥಾಪಿಸಿದ್ದು ಇಲ್ಲಿ ಪುಸ್ತಕ ಚಾರ್ಟ್‌ ಮತ್ತು ಪಕ್ಷಿಗಳ ಫೋಟೊಗಳನ್ನು ಪ್ರವಾಸಿಗರಿಗಾಗಿ ಒದಗಿಸಲಾಗಿದೆ. 

ಪರಿಸರ ಪ್ರೇಮಿಗಳ ಬೇಡಿಕೆಗಳು

* ಪಕ್ಷಿ ವೀಕ್ಷಣೆಗೆ ಅನುಕೂಲವಾಗುವಂತೆ ‘ವೀಕ್ಷಣಾ ಗೋಪುರ’ ನಿರ್ಮಿಸಬೇಕು * ಕೊಕ್ಕರೆ ಬೆಳ್ಳೂರು ಕೆರೆಯನ್ನು ಏತ ನೀರಾವರಿ ಯೋಜನೆ ಮೂಲಕ ತುಂಬಿಸಬೇಕು * ಮರಗಳಿಗೆ ಬಲೆ ಕಟ್ಟುವ ಮೂಲಕ ಮರಿಗಳು ಕೆಳಗೆ ಬೀಳದಂತೆ ರಕ್ಷಿಸಬೇಕು  * ಸಮುದಾಯ ಭವನ ಮತ್ತು ಪ್ರವಾಸಿಗರಿಗೆ ವಸತಿ ಕೊಠಡಿಗಳನ್ನು ನಿರ್ಮಿಸಬೇಕು * ಸೂಚನಾ ಫಲಕ ಆಸನಗಳು ಕುಡಿಯುವ ನೀರು ಮತ್ತು ಶೌಚಾಲಯ ನಿರ್ಮಿಸಬೇಕು * ಗ್ರಾಮದ ಮಧ್ಯಭಾಗದಲ್ಲಿರುವ ಎರಡು ಮೊಬೈಲ್‌ ನೆಟ್‌ವರ್ಕ್‌ ಟವರ್‌ಗಳನ್ನು ದೂರಕ್ಕೆ ಸ್ಥಳಾಂತರಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.