ADVERTISEMENT

ಕೊಪ್ಪ ಆರೋಗ್ಯ ಕೇಂದ್ರಕ್ಕೆ ಬೇಕಿದೆ ‘ಚಿಕಿತ್ಸೆ’

30 ಹಳ್ಳಿಗಳ ಜನರ ಪರದಾಟ

ಬಿ.ಎ.ಮಧುಕುಮಾರ
Published 7 ಡಿಸೆಂಬರ್ 2019, 9:57 IST
Last Updated 7 ಡಿಸೆಂಬರ್ 2019, 9:57 IST
ಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ತಡೆಗೋಡೆ ಹಾಳಾಗಿರುವುದು (ಎಡಚಿತ್ರ). ಆರೋಗ್ಯ ಕೇಂದ್ರದ ಆವರಣದಲ್ಲಿನ ಶವಾಗಾರ ಕೊಠಡಿ
ಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ತಡೆಗೋಡೆ ಹಾಳಾಗಿರುವುದು (ಎಡಚಿತ್ರ). ಆರೋಗ್ಯ ಕೇಂದ್ರದ ಆವರಣದಲ್ಲಿನ ಶವಾಗಾರ ಕೊಠಡಿ   

ಕೊಪ್ಪ: ಎಲ್ಲೆಂದರಲ್ಲಿ ಗಿಡಗಂಟಿಗಳು, ಕಸ ಹಾಗೂ ಪೊದೆಗಳು. ಬಳಕೆಗೆ ಬಾರದ ಶವಾಗಾರ, ಪಾಳುಬಿದ್ದ ವಸತಿ ಗೃಹ... ಇದು ಕೊಪ್ಪ ಆರೋಗ್ಯ ಕೇಂದ್ರದ ಸ್ಥಿತಿ.

30 ಹಳ್ಳಿಗಳನ್ನು ಒಳಗೊಂಡ ಪ್ರಮುಖ ವಾಣಿಜ್ಯ ಕೇಂದ್ರ ಕೊಪ್ಪ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಂಪೌಂಡ್‌ ಬಿದ್ದಿದ್ದು, ಎಲ್ಲೆಂದರಲ್ಲಿ ಗಿಡಗಂಟಿಗಳು ಬೆಳೆದಿವೆ. ವೈದ್ಯರು ಮತ್ತು ಹಿರಿಯ ಆರೋಗ್ಯ ಸಹಾಯಕರ ವಸತಿ ಗೃಹಗಳು ಪಾಳುಬಿದ್ದಿವೆ. ಆಸ್ಪತ್ರೆಯ ಆವರಣ ವಿಷಜಂತುಗಳ ವಾಸಸ್ಥಾನವಾಗಿದೆ.

‘ಅಲ್ಲಲ್ಲಿ ಕಸದ ರಾಶಿ, ಕಳೆಗಿಡಗಳಿಂದಾಗಿ ಶವಾಗಾರದತ್ತ ಕಾಲಿಡದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಸದಾಗಿ ಆಸ್ಪತ್ರೆ ಕಟ್ಟಡವನ್ನು ನಿರ್ಮಾಣ ಮಾಡಿದ್ದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಬೀದಿ ನಾಯಿಗಳು, ಬೀಡಾಡಿ ದನಗಳು ಆಸ್ಪತ್ರೆಯ ಆವರಣದಲ್ಲಿ ಆಶ್ರಯ ಪಡೆಯುತ್ತಿವೆ. ಆಸ್ಪತ್ರೆ ಸುತ್ತ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಚೀಲಗಳ ರಾಶಿ ಬಿದ್ದಿವೆ. ಸ್ವಚ್ಛತೆ ಇಲ್ಲಿ ಮರೀಚಿಕೆ ಆಗಿದೆ’ ಎಂದು ಪ್ರದೀಪ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ರಾತ್ರಿ ಪಾಳಿಯಲ್ಲಿ ವೈದ್ಯರು ಇರುವುದಿಲ್ಲ. ಆರೋಗ್ಯ ಸಮಸ್ಯೆಯಾದರೆ ದೂರದ ನಗರಗಳನ್ನು ಅವಲಂಬಿಸಬೇಕಿದೆ. ಮಹಿಳಾ ವೈದ್ಯರ ಅಗತ್ಯ ಇದೆ.

ಈ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸಬೇಕು ಎಂದು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಜನಪ್ರತಿನಿಧಿನಿಗಳು ಮತ್ತು ಅಧಿಕಾರಿಗಳ ಹಿತಾಸಕ್ತಿ ಕೊರತೆಯಿಂದ ಆಸ್ಪತ್ರೆ ಅಭಿವೃದ್ಧಿ ಆಗುತ್ತಿಲ್ಲ’ ಎಂದು ಸ್ಥಳೀಯ ನಿವಾಸಿಗಳಾದ ಆಬಲವಾಡಿ ತಿಮ್ಮೇಶ್, ವಿನಾಯಕ
ದೂರಿದರು.

‘ಕೊಪ್ಪ ಆರೋಗ್ಯ ಕೇಂದ್ರಕ್ಕೆ ಆಗಾಗ ಭೇಟಿ ನೀಡಿ ಪರಿಶೀಲಿಸುತ್ತಿದ್ದೇನೆ. ಆಸ್ಪತ್ರೆ ಆವರಣಕ್ಕೆ ಕಳೆನಾಶಕ ಔಷಧಿಯನ್ನು ಸಿಂಪಡಿಸುವಂತೆ ಸೂಚಿಸಿದ್ದೇನೆ. ಆಸ್ಪತ್ರೆ ಅಭಿವೃದ್ಧಿಗೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಆವರಣದಲ್ಲಿ ಸ್ವಚ್ಛತೆ ಕಾಪಾಡಿ, ಸಸಿಗಳನ್ನು ಬೆಳೆಯಲು ಕ್ರಮ ಕೈಗೊಳ್ಳಲಾಗಿದೆ’ ಎನ್ನುತ್ತಾರೆ ತಾಲ್ಲೂಕು ಆರೋಗ್ಯಧಿಕಾರಿ ಡಾ. ಆಶಾಲತಾ.

‘ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಮಸ್ಯೆಯ ಸರಮಾಲೆಯೆ ಇದೆ. ಬಗೆಹರಿಸುವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ವಿಫಲರಾಗಿದ್ದಾರೆ’ ಎಂದು ಚಿಕ್ಕ ಹೊಸಗಾವಿಯ ಬೈರೇಶ್ ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.