ADVERTISEMENT

 ಕೆ.ಪಿಎಸ್ ಶಾಲೆ:  ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಆರೋಪ

ಪೋಷಕರ ಒತ್ತಾಯದ ಮೇರೆಗೆ ಹೆಚ್ಚುವರಿ ತರಗತಿಯ ಶಿಕ್ಷಕರಿಗೆ ಗೌರವಧನ ನೀಡಲು ಸಂಗ್ರಹ: ಶಾಲಾಡಳಿತ  ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 5:58 IST
Last Updated 4 ಜುಲೈ 2025, 5:58 IST
ಎಚ್‌.ಟಿ.ಮಂಜು
ಎಚ್‌.ಟಿ.ಮಂಜು   

ಕೆಆರ್.ಪೇಟೆ: ಕಡ್ಡಾಯ ಶಿಕ್ಷಣ ಕಾಯ್ದೆ ಅನ್ವಯ 6 ರಿಂದ 14 ವರ್ಷದ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಬೇಕಿದ್ದರೂ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆಂದು ಕೆಲವು ಪೋಷಕರು ಆರೋಪಿಸಿ ಶಿಕ್ಷಣಾಧಿಕಾರಿಗೆ ದೂರು ನೀಡಿರುವ ಘಟನೆ ನಡೆದಿದೆ.

ಸರ್ಕಾರದ ಆದೇಶದಂತೆ ಸರ್ಕಾರಿ ಶಾಲೆಯಲ್ಲಿ ಯಾವುದೇ ರೀತಿಯ ಶುಲ್ಕ ವಸೂಲಿ ಮಾಡುವಂತಿಲ್ಲ. ಆದರೆ, ಶಾಲೆಯಲ್ಲಿ ಆಂಗ್ಲ ಮಾಧ್ಯಮದ ಎಲ್‌ಕೆಜಿ ಮತ್ತು ಯುಕೆಜಿ ಹಾಗೂ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ₹3,500 ರಿಂದ ₹5,500 ರವರೆಗೆ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಕೇಳಿದರೆ ಮಕ್ಕಳ ದಾಖಲಾತಿಗೆ ಬೇಡಿಕೆ ಹೆಚ್ಚಾಗಿರುವುದರಿಂದ, ಮಕ್ಕಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಶಾಲಾಭಿವೃದ್ಧಿ ಸಮಿತಿಯ ನಿರ್ಣಯದಂತೆ ಹೆಚ್ಚುವರಿ ವಿಭಾಗ ತೆರೆಯಲಾಗಿದೆ. ಕೆಲಸ ಮಾಡುವ ಶಿಕ್ಷಕರು ಮತ್ತು ಸಿಬ್ಬಂದಿಗೆ ಗೌರವಧನ ನೀಡಲು ಶುಲ್ಕವಸೂಲಿ ಮಾಡಲಾಗುತ್ತಿದೆ ಎಂದು ಶಾಲೆಯ ಮುಖ್ಯಸ್ಥರು ಹೇಳುತ್ತಾರೆ.

ಆದರೆ, ಇದರಿಂದ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದ್ದು, ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.

ADVERTISEMENT

ಪಟ್ಟಣದಲ್ಲಿ 2018-19ರಲ್ಲಿ ಕೆಪಿಎಸ್ ಶಾಲೆ ಆರಂಭಿಸಲಾಗಿದೆ. ಇಲ್ಲಿ ಕನ್ನಡ ಮಾಧ್ಯಮ ಮತ್ತು ಆಂಗ್ಲ-ಮಾಧ್ಯಮ ತರಗತಿಗಳಿದ್ದು, ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಗೆ ಮತ್ತು ಪ್ರಾಥಮಿಕ ಶಾಲೆಗೆ ತುಂಬ ಬೇಡಿಕೆ ಇದೆ. ಶಾಲೆಯಲ್ಲಿ ಪೂರ್ವ ಪ್ರಾಥಮಿಕದಿಂದ ದ್ವಿತೀಯ ಪಿಯುಸಿವರೆಗೆ 2,432 ವಿದ್ಯಾರ್ಥಿಗಳು ವ್ಯಾಸಂಗ ಮಾಡುತಿದ್ದಾರೆ.

‘ಪ್ರತಿ ಮಗುವಿಗೂ ಕಡ್ಡಾಯವಾಗಿ ಪ್ರಾಥಮಿಕ ಶಿಕ್ಷಣವನ್ನು ಉಚಿತವಾಗಿ ನೀಡಬೇಕೆಂಬ ಉದ್ದೇಶದಿಂದ ಕಾಯ್ದೆ ಮಾಡಲಾಗಿದೆ. ಆದರೆ, ಕೆಪಿಎಸ್ ಶಾಲೆಯಲ್ಲಿ ಶುಲ್ಕ ವಸೂಲಾತಿ ಮಾಡುತ್ತಿರುವುದರಿಂದ ಬಡವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಹೆಚ್ಚುವರಿ ತರಗತಿ ತೆರೆಯಬೇಕಾದರೆ ಪೋಷಕರು, ಹಿರಿಯ ವಿದ್ಯಾರ್ಥಿಗಳು ಮತ್ತು ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಆ ಹಣದಿಂದ ಶಿಕ್ಷಕರು ಸಿಬ್ಬಂದಿಗೆ ಗೌರವಧನ ನೀಡಬೇಕೆಂಬ ನಿಯಮ ಇದೆ. ಆದರೆ ಇಲ್ಲಿ ಹಾಗೆ ಮಾಡದೆ ಪೋಷಕರಿಂದಲೇ ಹಣ ವಸೂಲಿ ಮಾಡುತ್ತಿರುವುದು ತಪ್ಪು. ಇದನ್ನು ಸರಿಪಡಿಸಬೇಕು’ ಎಂದು ಪೋಷಕ ಹಾಗೂ ಎಸ್‌ಡಿಎಂಸಿ ಸದಸ್ಯರಾದ ಗಂಗಾಧರ್ ಒತ್ತಾಯಿಸಿದ್ದಾರೆ.

ಎಸ್‌ಡಿಎಂಸಿ ಮಾಜಿ ಸದಸ್ಯ ಎಚ್.ಬಿ.ಮಂಜುನಾಥ್ ಪ್ರತಿಕ್ರಿಯಿಸಿ, ಹೆಚ್ಚುವರಿ ವಿಭಾಗ ತೆರೆದರೆ ಅಗತ್ಯ ಸೌಲಭ್ಯ ನೀಡಲಾಗುವುದೆಂದು ಶಿಕ್ಷಣ ಇಲಾಖೆಯೇ ತಿಳಿಸಿದ್ದರೂ ಸಂಸ್ಥೆಯ ಮುಖ್ಯಸ್ಥರು ಹುದ್ದೆ ಮಂಜೂರು ಮಾಡಿಸಿಕೊಂಡಿಲ್ಲ. ದೇಣಿಗೆ ರೂಪದಲ್ಲಿ ದಾನಿಗಳಿಂದ ಹಿಂದೆ ಹಣ ಸಂಗ್ರಹಿಸಿ ಗೌರವಧನ ನೀಡಲಾಗುತ್ತಿತ್ತು. ಆದರೆ, ಈಗ ಅದನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.

ಗ್ರಾಮಾಂತರ ಪ್ರದೇಶದ ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಆಂಗ್ಲ ಮಾಧ್ಯಮದ ಹೆಚ್ಚುವರಿ ಸೆಕ್ಷನ್ ಗಳನ್ನು ಆರಂಭಿಸಲಾಗಿದೆ. ಈ ಸೆಕ್ಷನ್‌ಗಳಿಗೆ ಸರ್ಕಾರದಿಂದ ಯಾವುದೇ ಅನುದಾನ ಬರುವುದಿಲ್ಲ. ಹಾಗಾಗಿ ಪೋಷಕರ ಒತ್ತಡದ ಮೇರೆಗೆ, ಶಾಲಾಭಿವೃದ್ಧಿ ಸಮಿತಿಯ ತೀರ್ಮಾನದಂತೆ ಶುಲ್ಕ ವಸೂಲಿ ಮಾಡಲಾಗಿದೆ. ಈ ಹಣವನ್ನು ಸ್ಥಳೀಯ ಶಾಸಕರು ಮತ್ತು ಪ್ರಾಂಶುಪಾಲರ ಹೆಸರಿನಲ್ಲಿರುವ ಜಂಟಿ ಖಾತೆಯಲ್ಲಿ ಜಮಾ ಮಾಡಲಾಗಿದೆ. ಎಲ್ಲ ಹಣಕಾಸಿನ ವ್ಯವಹಾರವನ್ನು ಚೆಕ್ ಮೂಲಕ ನಡೆಸಲಾಗಿದೆ. ಆಂಗ್ಲ ಮಾಧ್ಯಮದ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆ ವಿಭಾಗದ ಮಕ್ಕಳ ಪೋಷಕರಿಗೆ ರಸೀದಿ ನೀಡುವಾಗ ಕರ್ನಾಟಕ ಪಬ್ಲಿಕ್ ಶಾಲೆಯ ರಸೀದಿ ಬದಲಿಗೆ ಮಕ್ಕಳ ದಾಖಲಾತಿ ಸಮಯದಲ್ಲಿ ಒತ್ತಡ ಮತ್ತು ಕಣ್ಣತಪ್ಪಿನಿಂದ ಶಿಕ್ಷಕರು ‘ಮಾಡಲ್ ಕೋಚಿಂಗ್ ಸೆಂಟರ್’ ಹೆಸರಿನ ರಸೀದಿ ನೀಡಿದ್ದರು. ಇದು ಗೊತ್ತಾದ ತಕ್ಷಣ ವಾಪಸ್ ಪಡೆದು ಹೊಸ ರಸೀದಿ ನೀಡಲಾಗಿದೆ. ವಸೂಲಿಯಾದ ಆ ಹಣವನ್ನು ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗಿದೆ. ಹಣ ದುರುಪಯೋಗ ಆಗಿಲ್ಲ ಎಂದು ಪ್ರಾಂಶುಪಾಲರಾಗಿದ್ದ ಡಿ.ಬಿ. ಸತ್ಯ ಮತ್ತು ಜುಲೈ 1ರಂದು ಪ್ರಭಾರ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡಿರುವ ಪುಲಿಗೆರಯ್ಯ ತಿಳಿಸಿದರು.

ಕೆ.ಆರ್‌.ಪೇಟೆಯ ಕರ್ನಾಟಕ ಪಬ್ಲಿಕ್‌ ಸ್ಕೂಲ್‌

ಸಲ್ಲದ ಆರೋಪ ಸರಿಯಲ್ಲ: ಶಾಸಕ ಮಂಜು ತಾಲ್ಲೂಕಿನಲ್ಲಿಯೇ ಅತ್ಯಧಿಕ ಮಕ್ಕಳು ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಶಾಲೆ ಕೆಪಿಎಸ್ ಶಾಲೆ ಆಗಿದೆ. ರಾಜ್ಯದಲ್ಲಿ ಎರಡನೇ ಶಾಲೆ ಇದಾಗಿದ್ದು ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ಖಾಸಗಿ ಶಾಲೆಗಳನ್ನು ತೊರೆದು ಮಕ್ಕಳು ಇಲ್ಲಿ ದಾಖಲಾಗುತ್ತಿದ್ದಾರೆ. ಆದರೆ ಸರ್ಕಾರ ನೀಡಿರುವ ಸೌಲಭ್ಯದಲ್ಲಿ ಹೆಚ್ಚುವರಿ ವಿಭಾಗ ತೆರೆಯಲು ಹೆಚ್ಚಿನ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಿಲ್ಲ. ಆದ್ದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಉದ್ದೇಶದಿಂದ ಶುಲ್ಕ ವಸೂಲಾತಿ ಮಾಡಲಾಗಿದೆ. ನನ್ನ ಹೆಸರಿನಲ್ಲಿಯೇ ಜಂಟಿ ಖಾತೆ ಇರುವುದರಿಂದ ಪೋಷಕರ ಮತ್ತು ಮಕ್ಕಳ ಹಣಕ್ಕೆ ಖಾತ್ರಿ ಒದಗಿಸುತ್ತೇನೆ. ಸಲ್ಲದ ಆರೋಪ ಮಾಡುವುದು ಶಾಲೆಯ ಬೆಳವಣಿಗೆಯ ದೃಷ್ಟಿಯಿಂದ ಸರಿ ಅಲ್ಲ ಎಂದು ಶಾಸಕ ಎಚ್.ಟಿ.ಮಂಜು ಪ್ರತಿಕ್ರಿಯಿಸಿದ್ದಾರೆ.

‘ವರ್ಷಕ್ಕೆ ₹11.70 ಲಕ್ಷ ಬೇಕಿದೆ’

ಪಟ್ಟಣದ ಕೆಪಿಎಸ್ ಶಾಲೆ ರಾಜ್ಯವೇ ಕಣ್ಣಾಯಿಸುವ ಮಟ್ಟಕ್ಕೆ ಬೆಳೆದು ಗಮನ ಸೆಳೆದಿದೆ. ಎಲ್‌ಕೆಜಿ ಮಕ್ಕಳಿಗೆ ₹3600 ಯುಕೆಜಿ ಮಕ್ಕಳಿಗೆ ₹2600 ಹೊಸದಾಗಿ ಸೇರಿಕೊಂಡ ಮಕ್ಕಳಿಗೆ ₹3600 ಒಂದರಿಂದ ನಾಲ್ಕನೇ ತರಗತಿ ಓದುತ್ತಿರುವ ಮಕ್ಕಳಿಗೆ ₹5300 ವಸೂಲಿ ಮಾಡಿ ಎಸ್‌ಡಿಎಂಸಿ ಖಾತೆಗೆ ಜಮೆ ಮಾಡಿದೆ. 5 6 7ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಯಾವುದೇ ಶುಲ್ಕ ವಸೂಲಿ ಮಾಡಿಲ್ಲ. 8 9 10ನೇ ತರಗತಿ ಮಕ್ಕಳಿಗೆ ಶಾಲಾ ಅಭಿವೃದ್ಧಿ ಶುಲ್ಕವಾಗಿ ₹400 ಪಿಯುಸಿ ಮಕ್ಕಳಿಗೆ ₹500 ವಸೂಲಿ ಮಾಡಲಾಗಿದೆ ಎಂದು ಎಸ್‌ಡಿಎಂಸಿ ಉಪಾಧ್ಯಕ್ಷ ಚೇತನ್ ಕುಮಾರ್ ತಿಳಿಸಿದರು.  ಈ ಹಣದಿಂದ ಆಂಗ್ಲ ಮಾಧ್ಯಮದ ಹೆಚ್ಚುವರಿ ತರಗತಿಗಳಿಗೆ ನೇಮಿಸಿಕೊಂಡಿರುವ ಆರು ಮಂದಿ ಗೌರವ ಶಿಕ್ಷಕರು ಇಬ್ಬರು ಕಂಪ್ಯೂಟರ್ ಶಿಕ್ಷಕರು ಶಾಲಾ ಕಾವಲುಗಾರ ಮತ್ತು ಮೂವರು ಶುಚಿತ್ವ ಕೆಲಸಗಾರರಿಗೆ ಸಂಬಳ ನೀಡಲಾಗುತ್ತದೆ. ಈ ಎಲ್ಲ ಒಟ್ಟು ವೆಚ್ಚ ನಿರ್ವಹಣೆಗೆ ವಾರ್ಷಿಕ ₹11.70 ಲಕ್ಷ ಬೇಕಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.