ADVERTISEMENT

ಕೆ.ಆರ್‌.ಪೇಟೆ: ಯಾರ ಪಾಲಿಗೆ ಶುಭ ಸೋಮವಾರ?

ಎಲ್ಲರ ಚಿತ್ತ ಫಲಿತಾಂಶದತ್ತ, ಲೆಕ್ಕಾಚಾರದಲ್ಲಿ ಮುಳುಗಿದ ಮುಖಂಡರು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 19:45 IST
Last Updated 7 ಡಿಸೆಂಬರ್ 2019, 19:45 IST
ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ನಡೆಯಲಿರುವ ಮತ ಎಣಿಕೆಗೆ ಟೇಬಲ್‌ ವ್ಯವಸ್ಥೆ ಪರಿಶೀಲಿಸುತ್ತಿರುವುದು
ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ನಡೆಯಲಿರುವ ಮತ ಎಣಿಕೆಗೆ ಟೇಬಲ್‌ ವ್ಯವಸ್ಥೆ ಪರಿಶೀಲಿಸುತ್ತಿರುವುದು   

ಕೆ.ಆರ್.ಪೇಟೆ: ಉಪ ಚುನಾವಣೆಯ ಮತದಾನ ಮುಗಿಯುತ್ತಿದ್ದಂತೆ ಹಲವು ಸಮೀಕ್ಷೆಗಳು ಪ್ರಕಟಗೊಂಡಿವೆ. ಆದರೆ ಸಮೀಕ್ಷೆಗಳು ಯಾವುದೇ ಅಭ್ಯರ್ಥಿಯ ಗೆಲುವಿನ ಸಾಧ್ಯತೆಯನ್ನು ಖಚಿತವಾಗಿ ಹೇಳಿಲ್ಲ. ಹೀಗಾಗಿ ಕ್ಷೇತ್ರದಾದ್ಯಂತ ಕುತೂಹಲ ಸೃಷ್ಟಿಯಾಗಿದ್ದು, ಎಲ್ಲರ ಚಿತ್ರ ಶುಭ ಸೋಮವಾರದತ್ತ (ಡಿ.9) ನೆಟ್ಟಿದೆ.

ಫಲಿತಾಂಶಕ್ಕೆ ಇನ್ನು 24 ಗಂಟೆ ಉಳಿದಿದ್ದು, ತಾಲ್ಲೂಕಿನಾದ್ಯಂತ ಗೆಲುವು– ಸೋಲುಗಳ ಲೆಕ್ಕಾಚಾರ ಭರ್ಜರಿಯಾಗಿ ನಡೆಯುತ್ತಿದೆ. ಹಳ್ಳಿಗಳ ಟೀ ಅಂಗಡಿ, ಅರಳೀಕಟ್ಟೆ, ಪ್ರಮುಖ ವೃತ್ತಗಳಲ್ಲಿ ಫಲಿತಾಂಶದ್ದೇ ಚರ್ಚೆ ನಡೆಯುತ್ತಿದೆ. ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಕಂಡು ಜಿಲ್ಲೆಯಲ್ಲಿ ಹೊಸ ಇತಿಹಾಸ ನಿರ್ಮಿಸಲಿದೆಯೇ ಅಥವಾ ಜೆಡಿಎಸ್‌ ತನ್ನ ಕ್ಷೇತ್ರವನ್ನು ಉಳಿಸಿಕೊಳ್ಳಲಿದೆಯೇ ಎಂಬ ಚರ್ಚೆಗಳು ಜನರ ನಾಲಗೆಯ ಮೇಲೆ ಹರಿದಾಡುತ್ತಿವೆ.

ಈ ಬಾರಿ ಕ್ಷೇತ್ರದಲ್ಲಿ ಅತ್ಯಧಿಕ ಮತದಾನ ಆಗಿದ್ದು ಯಾವ ಸಮಾಜಗಳ ಮತ ಯಾವ ಅಭ್ಯರ್ಥಿಗೆ ಬಿದ್ದಿರಬಹುದು ಎಂಬ ಬಗ್ಗೆ ಮಾತುಕತೆ ನಡೆಯುತ್ತಿದೆ. ಬಿಜೆಪಿ ಮುಖಂಡರು ಕ್ಷೇತ್ರದಲ್ಲಿ ನಡೆಸಿದ ವಿವಿಧ ಸಮಾಜಗಳ ಸಮಾವೇಶಗಳು ಕೈ ಹಿಡಿಯುತ್ತವೆಯೇ ಎಂಬ ಬಗ್ಗೆಯೂ ಚರ್ಚೆ ಗರಿಗೆದರಿದೆ.

ADVERTISEMENT

ಮಹಿಳೆಯರ ಮತಗಳು ಯಾರಿಗೆ ಹೆಚ್ಚು ಸಿಕ್ಕಿರಬಹುದು ಎಂಬ ಮಾತಿಗೆ ಮನ್ನಣೆ ದೊರೆತಿದೆ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಹಿಳಾ ಮತದಾರರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎ.ಸುಮಲತಾ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದೇ ರೀತಿ ಈ ಚುನಾವಣೆಯಲ್ಲಿ ಮಹಿಳೆಯರ ಮನ ಸೆಳೆಯಲು ಬಿಜೆಪಿ ಮುಖಂಡರು ಹಲವು ತಂತ್ರ ಮಾಡಿದ್ದರು. ಆ ತಂತ್ರಗಳಿಗೆ ಫಲ ದೊರೆಯಲಿದೆಯೇ ಎಂಬ ಪ್ರಶ್ನೆ ವಿವಿಧ ಪಕ್ಷಗಳ ಕಾರ್ಯಕರ್ತರ ಮನಸ್ಸಿನಲ್ಲಿ ಮೂಡಿದೆ.

ಮತಗಟ್ಟೆ ಸಮೀಕ್ಷೆ ನಡೆಸಿರುವ ವಿವಿಧ ವಾಹಿನಿಗಳು ಕ್ಷೇತ್ರದಲ್ಲಿ ಬಿಜೆಪಿ–ಜೆಡಿಎಸ್‌ಗೆ ಪೈಪೋಟಿ ಇದ್ದು, ಕಾಂಗ್ರೆಸ್‌ಗೆ ಮೂರನೇ ಸ್ಥಾನ ದೊರೆಯಲಿವೆ ಎಂದಿವೆ. ಆದರೆ ಬೇರೆ ಕ್ಷೇತ್ರಗಳಲ್ಲಿ ಹೇಳಿದಷ್ಟು ಖಚಿತ ವಿವರ ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಇಲ್ಲ. ಹೀಗಾಗಿ ಕ್ಷೇತ್ರದಲ್ಲಿ ಕುತೂಹಲ ಮತ್ತಷ್ಟು ಹೆಚ್ಚಳಗೊಂಡಿದೆ.

ದೇಶದಲ್ಲಿಯೇ ಮೊದಲ ಬಾರಿಗೆ ರೈತರ ಸಾಲಮನ್ನಾ ಮಾಡಿದ ಪಕ್ಷ ಜೆಡಿಎಸ್‌. ಅದರ ಸಂಪೂರ್ಣ ಲಾಭ ತಮಗೆ ದೊರೆಯಲಿದೇ ಎಂದು ಜೆಡಿಎಸ್‌ ಮುಖಂಡರು ಹೇಳುತ್ತಿದ್ದಾರೆ. ವರಿಷ್ಠ ಎಚ್‌.ಡಿ.ದೇವೇಗೌಡ ಇಳಿವಯಸ್ಸಿನಲ್ಲೂ ಪ್ರಚಾರ ಮಾಡಿದ್ದಾರೆ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಸೇರಿದಂತೆ ಹಲವು ಮುಖಂಡರು ಕಾರ್ಯತಂತ್ರ ಫಲಿಸಲಿದೆ ಎಂದು ವಿಶ್ವಾಸದಿಂದ ಮಾತನಾಡುತ್ತಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ತವರು ಕ್ಷೇತ್ರವಾಗಿದ್ದು, ಕೆ.ಆರ್‌.ಪೇಟೆಯ ಕಣ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದೆ. ಕೆ.ಸಿ.ನಾರಾಯಣಗೌಡ ಗೆದ್ದರೆ ಸಚಿವರಾಗುತ್ತಾರೆ ಎಂಬುದನ್ನು ಮುನ್ನೆಲೆಗೆ ತಂದು ಪ್ರಚಾರ ಮಾಡಿದ್ದಾರೆ. ಇದು ಅಭ್ಯರ್ಥಿಯ ಗೆಲುವಿಗೆ ಕಾರಣವಾಗಲಿದೆ ಎಂದು ಬಿಜೆಪಿ ಮುಖಂಡರು ಹೇಳುತ್ತಾರೆ.

ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಅವರು ಎರಡು ಬಾರಿ ಸೋತಿದ್ದು, ಜನರ ಅನುಕಂಪ ಅವರನ್ನು ಕೈಹಿಡಿಯಲಿದೆ ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಾರೆ. ಜೊತೆಗೆ ಕಾಂಗ್ರೆಸ್‌ ಮುಖಂಡರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಎನ್.ಚಲುವರಾಯಸ್ವಾಮಿ ಅವರ ಪ್ರಚಾರದಿಂದ ಕುರುಬ, ಒಕ್ಕಲಿಗ, ಹಿಂದುಳಿದ ವರ್ಗಗಳು ಹಾಗೂ ಅಲ್ಪ ಸಂಖ್ಯಾತರ ಮತಗಳು ಕೆ.ಬಿ.ಚಂದ್ರಶೇಖರ್‌ ಅವರಿಗೆ ಶಕ್ತಿ ತುಂಬಲಿವೆ ಎಂದೇ ಬಣ್ಣಿಸಲಾಗುತ್ತಿದೆ.

ಬರೋಬ್ಬರಿ ತಿಂಗಳ ಚಟುವಟಿಕೆಯ ನಂತರ ಮೂರೂ ಪಕ್ಷಗಳ ಅಭ್ಯರ್ಥಿಗಳು ಈಗ ವಿಶ್ರಾಂತಿಯಲ್ಲಿದ್ದಾರೆ. ಮನಸ್ಸಿನಲ್ಲಿ ದುಡುಗವಿದ್ದರೂ ಶಾಂತವಾಗಿದ್ದಾರೆ. ಮನೆಗೆ ಬರುವ ಕಾರ್ಯಕರ್ತರ ಜೊತೆ ಮಾತುಕತೆ ನಡೆಸುತ್ತಿದ್ದಾರೆ.

ಮತ ಎಣಿಕೆಗೆ ಸಕಲ ಸಿದ್ಧತೆ
ಕೆ.ಆರ್‌.ಪೇಟೆ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಮತ ಎಣಿಕೆ ನಡೆಯಲಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಶನಿವಾರ ಭದ್ರತಾ ಕೊಠಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮತ ಎಣಿಕೆ ಸಿಬ್ಬಂದಿ ಜೊತೆ ಮಾತುಕತೆ ನಡೆಸಿ ಅಗತ್ಯ ಸಲಹೆ, ಸೂಚನೆ ನೀಡಿದರು.

ಮತ ಎಣಿಕೆಯ ಟೇಬಲ್‌ ವ್ಯವಸ್ಥೆ ನಡೆಯುತ್ತಿದ್ದು, ಪ್ರಕ್ರಿಯೆ ಯಾವ ರೀತಿಯಲ್ಲಿರಬೇಕು ಎಂಬುದನ್ನು ಚುನಾವಣಾಧಿಕಾರಿಗಳು ಸೂಚನೆ ನೀಡಿದರು. ಪಾಲಿಟೆಕ್ನಿಕ್‌ ಆವರಣರಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದು ಸಹಾಯಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶೋಭಾರಾಣಿ ಸ್ಥಳದಲ್ಲೇ ಇದ್ದು ಭದ್ರತಾ ಪರಿಶೀಲನೆ ನಡೆಸುತ್ತಿದ್ದಾರೆ.

ವಾಹನ ಸಂಚಾರಕ್ಕೆ ನಿರ್ಬಂಧ
ಮತ ಎಣಿಕೆಯ ದಿನ ಸಾವಿರಾರು ಜನರು ಪಾಲ್ಗೊಳ್ಳುವುದರಿಂದ ಸಾರ್ವಜನಿಕರ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಲಿದೆ. ಅಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕೆ.ಆರ್.ಪೇಟೆ ಪಟ್ಟಣ ವ್ಯಾಪ್ತಿಯ ಮೈಸೂರು–ಚನ್ನರಾಯಪಟ್ಟಣ ರಸ್ತೆ ಮಾರ್ಗವಾಗಿ ಸಂಚರಿಸುವ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

ಮೈಸೂರು ಕಡೆಯಿಂದ ಚನ್ನರಾಯಪಟ್ಟಣ ಕಡೆಗೆ ಸಂಚರಿಸುವ ವಾಹನಗಳನ್ನು ಹೊಸ ಕಿಕ್ಕೇರಿ ರಸ್ತೆಯಲ್ಲಿ ಚಲಿಸುವಂತೆ, ಚನ್ನರಾಯಪಟ್ಟಣ ಕಡೆಯಿಂದ ಮೈಸೂರು ಕಡೆಗೆ ಸಂಚರಿಸುವ ವಾಹನಗಳನ್ನು ಹಳೇ ಕಿಕ್ಕೇರಿ ರಸ್ತೆಯಲ್ಲಿ ಸಂಚರಿಸಿಸುವಂತೆ ಬದಲಾವಣೆ ಮಾಡಲಾಗಿದೆ. ಟಿ.ಬಿ ಸರ್ಕಲ್‍ನಿಂದ ಹೊಸ ಕಿಕ್ಕೇರಿ ರಸ್ತೆಯವರೆಗೆ ಸಂಚಾರ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

ನಿಷೇಧಾಜ್ಞೆ ಜಾರಿ, ಮೆರವಣಿಗೆ ನಿಷಿದ್ಧ
ಡಿ.9ರಂದು ಬೆಳಿಗ್ಗೆ 6 ಗಂಟೆಯಿಂದ ಡಿ.10ರ ಮಧ್ಯರಾತ್ರಿಯವರೆಗೆ ಕೆ.ಆರ್‌.ಪೇಟೆ ಕ್ಷೇತ್ರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಯಾವುದೇ ಮೆರವಣಿಗೆ, ಮಾರಾಕಾಸ್ತ್ರ ಹಿಡಿದು ತಿರುಗಾಡುವುದನ್ನು, ಪಟಾಕಿ, ಸ್ಫೋಟಕ ಬಳಕೆಯನ್ನು ನಿಷೇಧಿಸಲಾಗಿದೆ. ನಿಷೇಧಾಜ್ಞೆ ಇರುವ ಪ್ರದೇಶದಲ್ಲಿ ವಿಜೇತ ಅಭ್ಯರ್ಥಿಗಳು ಯಾವುದೇ ವಿಜಯೋತ್ಸವ ಮೆರವಣೆಗೆ ಮಾಡುವಂತಿಲ್ಲ. ಅಭ್ಯರ್ಥಿಗಳ ಮನೆಮುಂದೆ ಘೋಷಣೆ ಕೂಗುವಂತಿಲ್ಲ, ಧ್ವನಿವರ್ಧಕಗಳ ಮೂಲಕ ಪ್ರಚೋದನಾತ್ಮಕ ಹಾಡು ಹಾಕುವಂತಿಲ್ಲ ಎಂದು ಆದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.