ADVERTISEMENT

ಕೆ.ಆರ್.ಪೇಟೆ: ಹೊಸವರ್ಷದ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2025, 15:48 IST
Last Updated 1 ಜನವರಿ 2025, 15:48 IST
ಭೂವರಾಹನಾಥ ಸ್ವಾಮಿ
ಭೂವರಾಹನಾಥ ಸ್ವಾಮಿ   

ಕೆ.ಆರ್.ಪೇಟೆ: ಹೊಸ ವರ್ಷಾಚರಣೆ ಅಂಗವಾಗಿ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಕಲ್ಲಹಳ್ಳಿ ಭೂವರಾಹನಾಥ ಸ್ವಾಮಿ, ತ್ರಿವೇಣಿ ಸಂಗಮ, ಕಾಪನಹಳ್ಳಿ ಗವಿಮಠ, ಹೊಸಹೊಳಲು ಲಕ್ಷ್ಮಿನಾರಾಯಣಸ್ವಾಮಿ ದೇವಾಲಯ ಮತ್ತು ಪಟ್ಟಣದ ಈಶ್ವರ ದೇವಸ್ಥಾನ, ಚೌಡೇಶ್ವರಿ ದೇವಸ್ಥಾನ, ಆಂಜನೇಯಸ್ವಾಮಿ ದೇವಸ್ಥಾನಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ನೂತನ ವರ್ಷದ ಸಂಭ್ರಮಾಚರಣೆ ಅಂಗವಾಗಿ ದೇವಾಲಯಕ್ಕೆ ಮುಂಜಾನೆಯಿಂದಲೇ ಬಂದ ಭಕ್ತರು ಸರತಿಯ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಹೊಸ ವರ್ಷದಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಕಾವೇರಿ ಹಿನ್ನೀರಿನಲ್ಲಿರುವ ದೇಶದಲ್ಲಿಯೇ ಅಪರೂಪದ್ದಾಗಿರುವ 17 ಅಡಿ ಎತ್ತರದ ಭೂವರಾಹನಾಥ ಸ್ವಾಮಿಯ ದರ್ಶನ ಪಡೆಯಲು ರಾಜ್ಯದ ಹಲವು ಕಡೆಯಿಂದ ಭಕ್ತರು ಆಗಮಿಸಿದ್ದರು. ಹೀಗಾಗಿ ಕ್ಷೇತ್ರದಲ್ಲಿ ಕಿಲೋ ಮೀಟರ್‌ಗಟ್ಟಲೆ ವಾಹನಗಳು ಸಾಲಾಗಿ ನಿಂತಿದ್ದವು.

ADVERTISEMENT

ಮೂರು ನದಿ ಸೇರುವ ಅಂಬಿಗರಹಳ್ಳಿ ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರಕ್ಕೂ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಮಹದೇಶ್ವರರ ಮತ್ತು ಸಂಗಮೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರು.

ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು, ಹೋಮ ಹವನಗಳು ಮತ್ತು ಅಭಿಷೇಕಗಳು ನಡೆದು ದೇವರ ಮೂರ್ತಿಗಳನ್ನು ಅಲಂಕರಿಸಲಾಗಿತ್ತು. ಭಕ್ತರ ಕಣ್ತುಂಬಿಕೊಂಡು ಧನ್ಯತಾಭಾವ ಮೆರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.