ಕೆ.ಆರ್.ಪೇಟೆ: ತಾಲ್ಲೂಕಿನ ಕ್ರೀಡಾಪಟುಗಳಿಗೆ ಚಿಮ್ಮುಹಲಗೆಯಾಗಬೇಕಿದ್ದ ಕ್ರೀಡಾಂಗಣ ಸೂಕ್ತ ನಿರ್ವಹಣೆ ಇಲ್ಲದೆ ಹಾಳು ಕೊಂಪೆಯಂತಾಗಿದೆ. ಸ್ವಚ್ಛ ಮಾಡುವವರು ಗತಿಯಿಲ್ಲದೆ ಕಸದ ತೊಟ್ಟಿಯಂತೆ ಕಾಣುತ್ತಿದೆ. ಜಿಮ್ ಉಪಕರಣಗಳು ಹಾಳಾಗುತ್ತಿವೆ.
ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣಗಳಲ್ಲಿ ಕೆ.ಆರ್.ಪೇಟೆ ಪಟ್ಟಣವೂ ಒಂದಾಗಿದ್ದರೂ ಸಾರ್ವಜನಿಕರಿಗೆ ಮೂಲಸೌಕರ್ಯ ಮರೀಚಿಕೆಯಾಗಿದೆ. ಸುಮಾರು 40 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ಪಟ್ಟಣದಲ್ಲಿ ಇರುವ ಕ್ರೀಡಾಂಗಣವೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಪಟ್ಟಣದ ಜಯನಗರ ಬಡಾವಣೆಯಲ್ಲಿ 5 ಎಕರೆ ವಿಸ್ತೀರ್ಣದಲ್ಲಿ ತಾಲ್ಲೂಕು ಕ್ರೀಡಾಂಗಣವಿದೆ. ತಾಲ್ಲೂಕು ಮಟ್ಟದ ಸಭೆ, ರಾಜಕೀಯ ಸಮಾವೇಶ, ಕ್ರೀಡಾಕೂಟ, ವಾಯು ವಿಹಾರ ಸೇರಿದಂತೆ ಹಲವಾರು ಚಟುವಟಿಕೆಗಳಿಗೆ ಇದೇ ಮೂಲಾಧಾರವಾಗಿದೆ.
ಕ್ರೀಡಾಪಟುಗಳಿಗೆ ಮತ್ತು ವಾಯು ವಿಹಾರಿಗಳಿಗೆ ಅನುಕೂಲವಾಗುವಂತೆ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಿಕೊಡಬೇಕು ಎಂಬುದು ಇಲ್ಲಿಯ ನಾಗರಿಕರ ಒಕ್ಕೊರಲ ಬೇಡಿಕೆಯಾಗಿತ್ತು.
ಇದಕ್ಕೆ ಸ್ಪಂದಿಸಿದ ಯುವಜನ ಮತ್ತು ಕ್ರೀಡಾ ಸಚಿವರಾಗಿದ್ದ ನಾರಾಯಣಗೌಡ ಅವರು ತಮ್ಮ ಇಲಾಖೆಯಿಂದ ₹15 ಕೋಟಿ ವೆಚ್ಚದಲ್ಲಿ ಕ್ರೀಡಾಪಟುಗಳಿಗೆ ಮತ್ತು ಸಾರ್ವಜನಿಕರಿಗೆ ಉಪಯುಕ್ತವಾಗುವಂತಹ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣವನ್ನು ನಿರ್ಮಿಸಿ, ಎರಡು ವರ್ಷಗಳ ಹಿಂದೆ ಲೋಕಾರ್ಪಣೆ ಮಾಡಿದ್ದರು.
ಕಸದ ತೊಟ್ಟಿಯಾದ ಕ್ರೀಡಾಂಗಣ:
ಒಳಾಂಗಣ ಕ್ರೀಡಾಂಗಣದ ಸುತ್ತ ಹಸಿರು ಹುಲ್ಲಿನ ಹಾಸು ಹಾಕಿದ್ದಲ್ಲದೆ, ವಾಯುವಿಹಾರಿಗಳಿಗೆ ಸುತ್ತಲೂ ಸಂಚರಿಸಲು ಅನುಕೂಲವಾಗುವಂತೆ ಪಾದಚಾರಿ ಮಾರ್ಗ ನಿರ್ಮಿಸಲಾಗಿತ್ತು. ಮಾರ್ಗದ ಉದ್ದಕ್ಕೂ ಬದಿಯಲ್ಲಿ ಹಸಿರು ಚೆಲ್ಲುವ ಮತ್ತು ಹೂವು ಬಿಡುವ ಗಿಡಗಳನ್ನು ನೆಡಲಾಗಿತ್ತು. ಇವುಗಳಿಂದ ಇಡೀ ಕ್ರೀಡಾಂಗಣ ಹಸಿರುಮಯವಾಗಿದ್ದಲ್ಲದೆ, ಅವುಗಳಿಗೆ ಪ್ರತಿನಿತ್ಯ ನೀರು ಹಾಯಿಸಲು ಹನಿ ನೀರಾವರಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈಗ ಅದೆಲ್ಲವೂ ಹಾಳಾಗಿದ್ದು, ನಿರ್ವಹಣೆ ಮಾಡುವವರಿಲ್ಲದೆ ಇಡೀ ಕ್ರೀಡಾಂಗಣ ಕಸದ ತೊಟ್ಟಿಯಾಗಿ ಪರಿವರ್ತನೆಯಾಗಿದೆ.
ಕ್ರೀಡಾಂಗಣದ ಮೇಲ್ವಿಚಾರಣೆ ವಹಿಸಿಕೊಂಡಿರುವ ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆಯ ನಿರ್ಲಕ್ಷ್ಯದ ಪರಿಣಾಮ ಹನಿ ನೀರಾವರಿ ಪೈಪ್ ಬಳಸದ ಕಾರಣ ಪಾದಚಾರಿ ಮಾರ್ಗದ ಉದ್ದಕ್ಕೂ ನೆಟ್ಟಿದ್ದ ಹೂವಿನ ಗಿಡಗಳು ನೀರು ಇಲ್ಲದೆ ಸೊರಗಿ ಹೋಗಿವೆ. ಮರದ ಒಣಗಿದ ಎಲೆಗಳ ರಾಶಿ ಎಲ್ಲೆಂದರಲ್ಲಿ ಉದುರಿದ್ದು, ಸ್ವಚ್ಛಗೊಳಿಸದ ಕಾರಣ ಕೊಳೆತು ನಾರುತ್ತಿದೆ.
ಸಂಜೆಯಾಗುತ್ತಿದ್ದಂತೆ ವಿದ್ಯುತ್ ಇಲ್ಲದೆ ಕತ್ತಲಾವರಿಸಿ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ. ಕ್ರೀಡಾಂಗಣದ ಸುತ್ತ ಪಾರ್ಥೇನಿಯಂ ಗಿಡ ಹುಲುಸಾಗಿ ಬೆಳೆದು ನಿಂತಿದ್ದು, ಅಲ್ಲಲ್ಲಿ ಹುತ್ತಗಳೂ ಬೆಳೆದಿವೆ. ವಿಷಕಾರಿ ಹಾವು ಮತ್ತು ಜಂತುಗಳ ಕಾಟ ವಾಯುವಿಹಾರಿಗಳು ಮತ್ತು ಕ್ರೀಡಾಪಟುಗಳಿಗೆ ಆತಂಕ ತಂದಿದೆ.
ಮರದ ಕೊಂಬೆಗಳು ನೆಲಕ್ಕೆ ಜೋತು ಬಿದ್ದಿದ್ದು, ಅವುಗಳನ್ನು ತೆರವುಗೊಳಿಸದ ಕಾರಣ ಪಾದಚಾರಿ ಮಾರ್ಗದಲ್ಲಿ ನಡೆದಾಡಲು ವಾಯುವಿಹಾರಿಗಳಿಗೆ ಕಷ್ಟವಾಗಿದೆ. ಇಡೀ ಕ್ರೀಡಾಂಗಣದ ಸೊಬಗು ಹಾಳಾಗಿದೆ. ಇದನ್ನು ಸರಿಪಡಿಸಿ ಸಾರ್ವಜನಿಕರಿಗೆ ಉಪಯುಕ್ತವಾಗುವಂತೆ ಅನುಕೂಲ ಮಾಡಿಕೊಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಯಾರು ಏನಂತಾರೆ...?
ಕ್ರೀಡಾಂಗಣದ ಶೌಚಾಲಯಕ್ಕೆ ಬೀಗ
ಕೆ.ಆರ್.ಪೇಟೆ ಪಟ್ಟಣದಲ್ಲಿರುವ ತಾಲ್ಲೂಕು ಕ್ರೀಡಾಂಗಣವನ್ನು ಸುಮಾರು ₹15 ಕೋಟಿ ವೆಚ್ಚದಲ್ಲಿ ಪುನರುಜ್ಜೀವನ ಗೊಳಿಸಲಾಗಿದೆ. ಆದರೆ, ಅದರ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವವರು ಸಮರ್ಪಕವಾಗಿ ನಿರ್ವಹಿಸದ ಕಾರಣ, ಹೊರ ಕ್ರೀಡಾಂಗಣದಲ್ಲಿರುವ ಜಿಮ್ ಉಪಕರಣಗಳು ಹಾಳಾಗುತ್ತಿವೆ. ಶೌಚಾಲಯ ಇದ್ದರೂ ಬೀಗ ಜಡಿಯಲಾಗಿದೆ.
–ರಾಜೇನಹಳ್ಳಿ ಪದ್ಮೇಶ್, ಕ್ರೀಡಾಪಟು
ಅಧಿಕಾರಿಗಳಿಗೆ ಸೂಚಿಸಿದ್ದೇನೆ
ಪಟ್ಟಣದಲ್ಲಿರುವ ಕ್ರೀಡಾಂಗಣದ ದುಃಸ್ಥಿತಿ ಮತ್ತು ಅದರ ನಿರ್ವಹಣೆಯ ಕೊರತೆಯ ಬಗ್ಗೆ ದೂರುಗಳು ಬಂದ ನಂತರ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಸೂಕ್ತ ಕ್ರಮ ವಹಿಸಲು ಯುವಜನ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ
ಎಚ್.ಟಿ. ಮಂಜು, ಶಾಸಕ
ಸರಿಪಡಿಸದಿದ್ದರೆ ಪ್ರತಿಭಟನೆ
ನಾನು ರಾಜ್ಯದ ಯುವಜನ ಸೇವೆ ಮತ್ತು ಕ್ರೀಡಾ ಸಚಿವನಾಗಿದ್ದ ಸಂದರ್ಭದಲ್ಲಿ ಪಟ್ಟಣದ ನಾಗರಿಕರ ಕೋರಿಕೆಯಂತೆ ಕ್ರೀಡಾಂಗಣವನ್ನು ನವೀಕರಿಸಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿತ್ತು. ನಿರ್ಮಾಣವಾದ ಎರಡು ವರ್ಷಗಳಲ್ಲಿಯೇ ನಿರ್ವಹಣೆ ಇಲ್ಲದೆ ಸಂಪೂರ್ಣವಾಗಿ ಹಾಳಾಗಿದೆ. ಸರಿಪಡಿಸದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ.
– ನಾರಾಯಣಗೌಡ, ಮಾಜಿ ಸಚಿವ
ನಿರ್ವಹಣೆಗೆ ಗಮನಹರಿಸಲಿ
ಒಳಾಂಗಣ ಕ್ರೀಡಾಂಗಣ ಮತ್ತು ಹೊರ ಕ್ರೀಡಾಂಗಣ ಮಹಿಳೆಯರಿಗೆ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಾಗಿದೆ. ಸೂಕ್ತ ನಿರ್ವಹಣೆಗೆ ಪುರಸಭೆಯವರು ಗಮನಹರಿಸಬೇಕು
ಸುಮಾ ಸತೀಶ್, ಗೃಹಿಣಿ
ಪುರಸಭೆಗೆ ವಹಿಸಿಕೊಡಲಿ
ಕ್ರೀಡಾಂಗಣದ ನಿರ್ವಹಣೆಯನ್ನು ಪುರಸಭೆಗೆ ವಹಿಸಿಕೊಟ್ಟರೆ ಅಚ್ಚುಕಟ್ಟಾಗಿ ನಿರ್ವಹಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು
ನಟರಾಜು, ಮುಖ್ಯಾಧಿಕಾರಿ, ಪುರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.