
KRS: ತಮಿಳುನಾಡು ವ್ಯಕ್ತಿಗೆ ಚಿನ್ನದ ಬ್ರಾಸ್‌ಲೆಟ್ ಹಿಂದಿರುಗಿಸಿದ KSISF ಪೊಲೀಸ್
ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಕೆಆರ್‌ಎಸ್ ಬೃಂದಾವನಕ್ಕೆ ಪ್ರವಾಸಕ್ಕೆ ಬಂದು ಚಿನ್ನದ ಬ್ರಾಸ್‌ಲೆಟ್ ಕಳೆದುಕೊಂಡಿದ್ದ ತಮಿಳುನಾಡಿನ ವ್ಯಕ್ತಿಗೆ ಕೈಗಾರಿಕಾ ಭದ್ರತಾ ಪಡೆಯ ಎಎಸ್‌ಐ ಬ್ರಾಸ್‌ಲೆಟ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ತಮಿಳುನಾಡಿನ ಕಾಂಚೀಪುರಂ ನಿವಾಸಿ ವಿಮಲ್‌ಕುಮಾರ್.ಎಂ ಬುಧವಾರ ಸಂಜೆ ಬೃಂದಾವನ ವೀಕ್ಷಣೆಗೆ ಬಂದಿದ್ದ ವೇಳೆ ತಮ್ಮ ಬ್ರಾಸ್‌ಲೆಟ್ ಕಳೆದುಕೊಂಡಿದ್ದರು. ಮತ್ತೆ ಗುರುವಾರ ಬೃಂದಾವನಕ್ಕೆ ಬಂದು ಹುಡುಕಾಟ ನಡೆಸಿದ್ದರು. ಕೈಗಾರಿಕಾ ಭದ್ರತಾ ಪಡೆಯ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಕೃಷ್ಣ. ಡಿ ಅವರಿಗೆ ಅದು ಸಿಕ್ಕಿತ್ತು.
ಬೃಂದಾವನದ ಸಂಗೀತ ಕಾರಂಜಿ ಸಮೀಪ, ಉತ್ತರ ಬೃಂದಾವನದಲ್ಲಿ ಬಿದ್ದಿದ್ದ ಈ ಬ್ರಾಸ್‌ಲೆಟ್ ಅನ್ನು ಕೃಷ್ಣ.ಡಿ ಹುಡುಕಿ ಇಟ್ಟು ವಾಪಸ್ ವಿಮಲ್‌ಕುಮಾರ್ ಅವರಿಗೆ ಕೊಟ್ಟರು.
‘ಸುಮಾರು ₹1.5 ಲಕ್ಷ ಬೆಲೆಯ, 15 ಗ್ರಾಂ ತೂಕದ ಚಿನ್ನದ ಬ್ರಾಸ್‌ಲೆಟ್ ಬುಧವಾರ ಸಂಜೆ ಕಳೆದು ಹೋಗಿತ್ತು. ಬೃಂದಾವನದಲ್ಲಿ ಭದ್ರತೆಗೆ ನಿಯೋಜಿಸಿದ್ದ ಎಎಸ್‌ಐ ಕೃಷ್ಣ ಅವರು ಹುಡುಕಿ ಕೊಟ್ಟಿದ್ದಾರೆ’ ಎಂದು ವಿಮಲ್‌ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
‘ವಿಮಲ್ ಕುಮಾರ್ ಅವರ ಅಧಿಕೃತ ವಿಳಾಸದ ದಾಖಲೆ ಮತ್ತು ಫೋಟೊಗಳನ್ನು ಪಡೆದು ಚಿನ್ನದ ಬ್ರಾಸ್‌ಲೆಟ್ ಕೊಟ್ಟಿದ್ದೇನೆ’ ಎಂದು ಕೃಷ್ಣ. ಡಿ. ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.