ಮಂಡ್ಯ: ‘ಕೃಷ್ಣ ಜಗತ್ತಿಗೆ ನೀಡಿರುವ ವಿಚಾರಗಳು ಜೀವನದಲ್ಲಿ ನೆಮ್ಮದಿ ಕೊಡುವ ಮಾರ್ಗದ ಕಡೆ ಕೊಂಡೊಯ್ಯುತ್ತವೆ’ ಎಂದು ಮೇಲುಕೋಟೆ ಇಸ್ಕಾನ್ ಮುಖ್ಯಸ್ಥ ಆನಂದ ಗೌರಂಗದಾಸ ಹೇಳಿದರು.
ನಗರದ ಶಾರದ ಚಂದ್ರಮೌಳೇಶ್ವರ ಪ್ರಾರ್ಥನಾ ಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಶನಿವಾರ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಕೃಷ್ಣಾ ನಮ್ಮೆಲರ ಅಚ್ಚುಮೆಚ್ಚಿನ ಭಗವಂತ. ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಕೃಷ್ಣನನ್ನು ಆರಾಧಿಸಲು ಕಾರಣ ಇಸ್ಕಾನ್ ಸಂಸ್ಥೆಯ ಆಚಾರ್ಯರಾದ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು’ ಎಂದು ಹೇಳಿದರು.
‘ಪ್ರಭುಪಾದರು ಕೇವಲ ಹತ್ತು ವರ್ಷಗಳಲ್ಲಿ 108 ದೇವಾಲಯ ನಿರ್ಮಾಣ ಮಾಡಿದ್ದಾರೆ. 60ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. 10 ಸಾವಿರಕ್ಕೂ ಹೆಚ್ಚು ಶಿಷ್ಯ ವೃಂದ ಗಳಿಸಿದ್ದರು. ಇವೆಲ್ಲವನ್ನು ಅವರು ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ ಮಾತನ್ನು ಆಧರಿಸಿ ಮಾಡಿದ್ದರು’ ಎಂದು ಹೇಳಿದರು.
‘ಕೃಷ್ಣ ಭಗವದ್ಗೀತೆಯಲ್ಲಿ ಹೇಳಿರುವ ವಿಚಾರಗಳು ನಮಗೆ ಸಹಾಯ ಮಾಡುವ ಜ್ಞಾನ ಭಂಡಾರ. ಏನೇ ಮಾಡಿದರೂ ನನಗಾಗಿ ಮಾಡು ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿಕೊಂಡಿದ್ದಾನೆ. ಆದ್ದರಿಂದ ನೀವೆಲ್ಲರೂ ಒಳ್ಳೆಯ ಮನಸಿನಿಂದ ಸತ್ ಕಾರ್ಯ ನಿರ್ವಹಿಸಿ’ ಎಂದು ಸಲಹೆ ನೀಡಿದರು.
ಕೃಷ್ಣನ ವೇಷ ಧರಿಸಿ ಮಕ್ಕಳು ಸಂಭ್ರಮಿಸಿದರು. ವಿವಿಧ ಮಕ್ಕಳು ಕೃಷ್ಣ ಹಾಗೂ ಗೋಪಿಕೆಯರ ಉಡುಗೆ ತೊಟ್ಟು ನೃತ್ಯ ಪ್ರದರ್ಶನ ಮಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ. ನಂದೀಶ್, ಕರ್ನಾಟಕ ಜನಪರ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಎಸ್.ಎಂ. ಜವರೇಗೌಡ ಹಾಗೂ ಮುಖಂಡರಾದ ಮಾದೇಗೌಡ, ಪ್ರಕಾಶ್, ಮಹೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.