ADVERTISEMENT

ದೀರ್ಘಾವಧಿ ಬೆಳೆಗೆ 4 ಕಟ್ಟು ನೀರು: ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

18 ದಿನ ನಾಲೆಯಲ್ಲಿ ನೀರು, 12 ದಿನ ಸ್ಥಗಿತ

ಸಿದ್ದು ಆರ್.ಜಿ.ಹಳ್ಳಿ
Published 5 ಜನವರಿ 2026, 3:01 IST
Last Updated 5 ಜನವರಿ 2026, 3:01 IST
ಕೆಆರ್‌ಎಸ್‌ ಜಲಾಶಯದ ವಿಹಂಗಮ ನೋಟ (ಸಂಗ್ರಹ ಚಿತ್ರ) 
ಕೆಆರ್‌ಎಸ್‌ ಜಲಾಶಯದ ವಿಹಂಗಮ ನೋಟ (ಸಂಗ್ರಹ ಚಿತ್ರ)    

ಮಂಡ್ಯ: ಕೃಷ್ಣರಾಜಸಾಗರ ಜಲಾಶಯದ ವಿಶ್ವೇಶ್ವರಯ್ಯ ನಾಲಾ ಜಾಲದ ಅಚ್ಚುಕಟ್ಟು ಪ್ರದೇಶದಲ್ಲಿ ಹಾಲಿ ಬೆಳೆದು ನಿಂತಿರುವ ಕಬ್ಬು ಸೇರಿದಂತೆ ದೀರ್ಘಾವಧಿ ಬೆಳೆಗಳಿಗೆ ಜನವರಿ 12ರಿಂದ ಏಪ್ರಿಲ್‌ 30ರವರೆಗೆ ನಾಲ್ಕು ಕಟ್ಟು ಪದ್ಧತಿ ಆಧಾರದಲ್ಲಿ ನಾಲೆಗಳಲ್ಲಿ ನೀರನ್ನು ಹರಿಸಲು ತೀರ್ಮಾನಿಸಲಾಗಿದೆ. 

ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಕೃಷ್ಣರಾಜಸಾಗರ ಜಲಾಶಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. 18 ದಿನಗಳು ನಾಲೆಯಲ್ಲಿ ನೀರನ್ನು ಹರಿಸಿ, ಮುಂದಿನ 12 ದಿನಗಳು ನೀರನ್ನು ನಿಲ್ಲಿಸುವ ‘ಕಟ್ಟು ಪದ್ಧತಿ’ (ಆನ್‌ ಅಂಡ್‌ ಆಫ್‌) ಇದಾಗಿದೆ. 

ತುರಗನೂರು ಶಾಖಾ ನಾಲೆ, ಹೆಬ್ಬಕವಾಡಿ ಶಾಖಾ ನಾಲೆ, ನಿಡಘಟ್ಟ ಶಾಖಾ ನಾಲೆ ಮತ್ತು ಸಂಪರ್ಕ ನಾಲೆಗಳನ್ನು ಹೊರತುಪಡಿಸಿ, ವಿಶ್ವೇಶ್ವರಯ್ಯ ನಾಲಾ ಜಾಲದ ಮುಖ್ಯ ನಾಲೆ, ಶಾಖಾ ನಾಲೆಗಳಲ್ಲಿ ಮಾತ್ರ ನೀರನ್ನು ಹರಿಸಲು ನಿರ್ಣಯ ಕೈಗೊಳ್ಳಲಾಗಿದೆ. 

ADVERTISEMENT

4 ಕಟ್ಟು ನೀರು ಹರಿಸಿದ ನಂತರವೂ ದೀರ್ಘಾವಧಿ ಬೆಳೆಗಳಿಗೆ ನೀರಿನ ಅಗತ್ಯ ಕಂಡುಬಂದಲ್ಲಿ ಜಲಾಶಯದಲ್ಲಿನ ನೀರಿನ ಲಭ್ಯತೆಯನ್ನು ಆಧರಿಸಿ, ಮತ್ತೊಂದು ನೀರಾವರಿ ಸಲಹಾ ಸಮಿತಿ ಸಭೆ ಕರೆದು, ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯದಂತೆ ಕ್ರಮ ಕೈಗೊಳ್ಳಲಾಗುವುದು. ರೈತ ಬಾಂಧವರು ಸಹಕರಿಸಬೇಕು ಎಂದು ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳು ಕೋರಿದ್ದಾರೆ. 

ಜನವರಿಯಲ್ಲೂ ಡ್ಯಾಂ ಭರ್ತಿ:

ಕಾವೇರಿ ಜಲಾಯನ ಪ್ರದೇಶದಲ್ಲಿ ಉತ್ತಮ ಮಳೆಯಾದ ಕಾರಣ ಕೆಆರ್‌ಎಸ್‌ ಡ್ಯಾಂ ನಿರ್ಮಾಣವಾದ 92 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಜೂನ್‌ ತಿಂಗಳಲ್ಲೇ (2025ರಲ್ಲಿ) ಭರ್ತಿಯಾಗಿ ದಾಖಲೆ ಬರೆದಿತ್ತು. ಜೂನ್‌ ತಿಂಗಳಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸಿದ್ದು ಕೂಡ ವಿಶೇಷವಾಗಿತ್ತು. ಕಳೆದ ವರ್ಷದಂತೆ ಈ ಬಾರಿಯೂ ಜನವರಿ ತಿಂಗಳಲ್ಲೂ ಜಲಾಶಯ ಭರ್ತಿಯಾಗಿರುವುದು ರೈತರಲ್ಲಿ ಮಂದಹಾಸ ಮೂಡಿಸಿದೆ. 

ಜ.4ರಂದು (ಭಾನುವಾರ) ಕೆಆರ್‌ಎಸ್‌ ಜಲಾಶಯದಲ್ಲಿ 123.54 ಅಡಿ (ಗರಿಷ್ಠ ಮಟ್ಟ 124.80 ಅಡಿ) ನೀರು ಇದೆ. 2124 ಕ್ಯುಸೆಕ್‌ ಒಳಹರಿವು ಮತ್ತು 1285 ಹೊರಹರಿವು ಕಂಡುಬಂದಿತು. ಜಲಾಶಯದಲ್ಲಿ ಒಟ್ಟು 47.707 ಟಿಎಂಸಿ ಅಡಿ (ಗರಿಷ್ಠ ಸಾಮರ್ಥ್ಯ 49.452 ಟಿಎಂಸಿ ಅಡಿ) ನೀರು ಸಂಗ್ರಹವಾಗಿದೆ.

‘ಜನವರಿಯಿಂದ ಏಪ್ರಿಲ್‌ ಅಂತ್ಯದವರೆಗೆ ನೀರಾವರಿಗೆ 15.5 ಟಿಎಂಸಿ ಅಡಿ ನೀರು ಬೇಕಾಗುತ್ತದೆ. ಮೇ ಅಂತ್ಯದವರೆಗೆ ಕುಡಿಯುವ ನೀರಿಗೆ 8.5 ಟಿಎಂಸಿ ಅಡಿ ಅವಶ್ಯವಿದೆ. ಕೈಗಾರಿಕೆಗಳಿಗೆ 1.5 ಟಿಎಂಸಿ ಅಡಿ ನೀರು ಕೊಡಬೇಕಿದೆ. ಜತೆಗೆ ಸುಪ್ರೀಂಕೋರ್ಟ್ ತೀರ್ಪಿನಂತೆ ತಮಿಳುನಾಡಿಗೆ ಜನವರಿಯಿಂದ ಮೇ ತಿಂಗಳವರೆಗೆ ಒಟ್ಟು 12.76 ಟಿಎಂಸಿ ಅಡಿ ನೀರು ಹರಿಸಬೇಕು’ ಎಂದು ಎಂಜಿನಿಯರ್‌ಗಳು ತಿಳಿಸಿದ್ದಾರೆ. 

ಕೆಆರ್‌ಎಸ್‌ ವ್ಯಾಪ್ತಿಯ ವಿಶ್ವೇಶ್ವರಯ್ಯ ನಾಲಾ ಅಚ್ಚುಕಟ್ಟು ಪ್ರದೇಶದ ರೈತರು 4 ಕಟ್ಟುಪದ್ಧತಿಯಲ್ಲಿ ದೀರ್ಘಾವಧಿ ಬೆಳೆಗೆ ಹರಿಸುವ ನೀರನ್ನು ಮಿತವಾಗಿ ಬಳಸಬೇಕು
– ಕೆ.ರಘುರಾಮನ್‌, ಅಧೀಕ್ಷಕ ಎಂಜಿನಿಯರ್‌, ಕಾವೇರಿ ನೀರಾವರಿ ನಿಗಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.