ADVERTISEMENT

ಮಂಡ್ಯ | ಹಿನ್ನೀರಿನಲ್ಲಿ ಒತ್ತುವರಿ: ಸರ್ವೆಗೆ ಜಿಲ್ಲಾಧಿಕಾರಿ ಸೂಚನೆ

ಕೆಆರ್‌ಎಸ್‌ ಜಲಾಶಯ ಹಿನ್ನೀರಿನಲ್ಲಿ ಗಡಿ ಕಲ್ಲು ನೆಡಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆದೇಶ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 5:37 IST
Last Updated 8 ಜನವರಿ 2026, 5:37 IST
ಮಳವಳ್ಳಿ ತಾಲ್ಲೂಕಿನ ಬಿ.ಜಿ.ಪುರ ಹೋಬಳಿಯ ಹೆಬ್ಬಣಿ ಗ್ರಾಮದ ಸರ್ವೆ ನಂ. 122ರಲ್ಲಿ ಇರುವ ಜಾಗವನ್ನು 400 ಕೆ.ವಿ ಉಪಕೇಂದ್ರ ಸ್ಥಾಪನೆಗಾಗಿ ಜಿಲ್ಲಾಧಿಕಾರಿ ಕುಮಾರ ಪರಿಶೀಲಿಸಿದರು. ಉಪವಿಭಾಗಾಧಿಕಾರಿ ಶಿವಮೂರ್ತಿ ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು 
ಮಳವಳ್ಳಿ ತಾಲ್ಲೂಕಿನ ಬಿ.ಜಿ.ಪುರ ಹೋಬಳಿಯ ಹೆಬ್ಬಣಿ ಗ್ರಾಮದ ಸರ್ವೆ ನಂ. 122ರಲ್ಲಿ ಇರುವ ಜಾಗವನ್ನು 400 ಕೆ.ವಿ ಉಪಕೇಂದ್ರ ಸ್ಥಾಪನೆಗಾಗಿ ಜಿಲ್ಲಾಧಿಕಾರಿ ಕುಮಾರ ಪರಿಶೀಲಿಸಿದರು. ಉಪವಿಭಾಗಾಧಿಕಾರಿ ಶಿವಮೂರ್ತಿ ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು    
ಡಿಸಿಎಂಗೆ ಪತ್ರ ಬರೆದಿದ್ದ ಜಿಲ್ಲೆಯ ಶಾಸಕರು | ಮಧ್ಯಂತರ ವರದಿ ನೀಡಲು ಡಿ.ಕೆ.ಶಿವಕುಮಾರ್‌ ಆದೇಶ | ಪಾಂಡವಪುರ ಎಸಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ 

ಮಂಡ್ಯ: ಕೃಷ್ಣರಾಜಸಾಗರ ಜಲಾಶಯ ಹಿನ್ನೀರಿನ ಪ್ರದೇಶದಲ್ಲಿ ಒತ್ತುವರಿಯನ್ನು ತೆರವುಗೊಳಿಸಲು ಕೂಡಲೇ ಸರ್ವೆ ಕಾರ್ಯ ಪ್ರಾರಂಭಿಸಬೇಕು ಎಂದು ಜಿಲ್ಲಾಧಿಕಾರಿ ಕುಮಾರ ಅವರು ಅಧಿಕಾರಿಗಳಿಗೆ ಸೂಚಿಸಿದರು. 

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸಭೆ ನಡೆಸಿ ಅವರು ಮಾತನಾಡಿದರು. ಕೆ.ಆರ್.ಎಸ್. ಅಣೆಕಟ್ಟು ರಾಜ್ಯದ ಪ್ರಮುಖ ಜಲಸಂಪನ್ಮೂಲವಾಗಿದ್ದು, ಮೈಸೂರು, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳ ಕುಡಿಯುವ ನೀರು, ಕೃಷಿ ಮತ್ತು ವಿದ್ಯುತ್ ಉತ್ಪಾದನೆಗೆ ಅವಶ್ಯಕವಾಗಿದೆ ಎಂದರು. 

ಒತ್ತುವರಿಯಾಗಿರುವ ನಿಖರ ಸ್ಥಳಗಳು, ವ್ಯಾಪ್ತಿ ಹಾಗೂ ಸ್ವರೂಪವನ್ನು ಗುರುತಿಸಲು ತಕ್ಷಣ ಸರ್ವೆ ಕಾರ್ಯ ಪ್ರಾರಂಭಿಸುವುದು ಅತ್ಯಂತ ಅವಶ್ಯಕವಾಗಿದೆ. ಜಲಸಂಪನ್ಮೂಲ ಇಲಾಖೆ, ಭೂ ದಾಖಲೆ ಇಲಾಖೆಗಳು ಸಮನ್ವಯದಿಂದ ಕೂಡಲೇ ಸರ್ವೆ ಕಾರ್ಯ ಆರಂಭಿಸಿ, ಭೂಮಿ ಮತ್ತು ಖಾಸಗಿ ಭೂಮಿಯ ಗಡಿ ರೇಖೆಗಳನ್ನು ಸ್ಪಷ್ಟಪಡಿಸಬೇಕು. ಕಾನೂನುಬಾಹಿರವಾಗಿ ಒತ್ತುವರಿಯಾದ ಪ್ರದೇಶಗಳನ್ನು ದಾಖಲಿಸಿ, ನಿಖರ ವರದಿಯನ್ನು ನೀಡುವಂತೆ ಸೂಚಿಸಿದರು.

ADVERTISEMENT

ಶಾಸಕರಾದ ರಮೇಶ ಬಂಡಿಸಿದ್ದೇಗೌಡ ಮತ್ತು ದಿನೇಶ್ ಗೂಳಿಗೌಡ ಅವರು ಜಂಟಿಯಾಗಿ ಕೆ.ಆರ್.ಎಸ್‌ ಅಣೆಕಟ್ಟೆಯ ಹಿನ್ನೀರಿನ ಪ್ರದೇಶಗಳಲ್ಲಿ ಒತ್ತುವರಿ ಪ್ರಕರಣಗಳು ಹೆಚ್ಚುತ್ತಿದ್ದು ಅವುಗಳನ್ನು ತೆರವುಗೊಳಿಸುವ ಸಂಬಂಧ ಉಪ ಮುಖ್ಯಮಂತ್ರಿಯವರಿಗೆ ‍ಪತ್ರ ಬರೆದಿದ್ದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಈ ಸಂಬಂಧ ಸರ್ವೆ ಮಾಡಿ ಒತ್ತುವರಿಯನ್ನು ಕೂಡಲೇ ತೆರವು ಮಾಡಿಸಿ ಗಡಿ ಕಲ್ಲುಗಳನ್ನು ನೆಟ್ಟು ವರದಿಯನ್ನು ನೀಡುವಂತೆ ಆದೇಶಿಸಿರುತ್ತಾರೆ ಎಂದು ಹೇಳಿದರು. 

ಈ ಹಿನ್ನೆಲೆಯಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿರುತ್ತದೆ. ಅಣೆಕಟ್ಟೆ ಹಿನ್ನೀರಿನ ಪ್ರದೇಶದಲ್ಲಿ ಅನಧಿಕೃತವಾಗಿ ನಡೆದಿರುವ ಒತ್ತುವರಿಗಳು ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯವನ್ನು ಕಡಿಮೆ ಮಾಡುತ್ತಿದ್ದು, ಮಳೆಗಾಲದಲ್ಲಿ ಪ್ರವಾಹದ ಅಪಾಯವನ್ನು ಹೆಚ್ಚಿಸುತ್ತಿದೆ. ಇದರಿಂದ ಸಾರ್ವಜನಿಕ ಆಸ್ತಿ ಹಾನಿಯಾಗುವ ಜೊತೆಗೆ ಪರಿಸರ ಸಮತೋಲನಕ್ಕೂ ಧಕ್ಕೆಯಾಗುತ್ತಿದೆ ಎಂದರು. 

ಸಭೆಯಲ್ಲಿ ಭೂದಾಖಲೆಗಳ ಉಪನಿರ್ದೇಶಕರು, ಪಾಂಡವಪುರ ಉಪವಿಭಾಗಾಧಿಕಾರಿ, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌, ಶ್ರೀರಂಗಪಟ್ಟಣ, ಪಾಂಡವಪುರ ಹಾಗೂ ಕೆ.ಆರ್.ಪೇಟೆ ತಾಲ್ಲೂಕುಗಳ ತಹಶೀಲ್ದಾರ್‌ಗಳು ಭಾಗವಹಿಸಿದ್ದರು. 

400 ಕೆವಿ ಉಪಕೇಂದ್ರ ಸ್ಥಾಪನೆಯಾದಲ್ಲಿ ಮಂಡ್ಯ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಗುಣಮಟ್ಟದ ನಿರಂತರ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗುತ್ತದೆ
ಕುಮಾರ ಜಿಲ್ಲಾಧಿಕಾರಿ ಮಂಡ್ಯ

ವಿದ್ಯುತ್‌ ಉಪಕೇಂದ್ರಕ್ಕೆ ಸ್ಥಳದ ಪರಿಶೀಲನೆ 

ಮಂಡ್ಯ ಜಿಲ್ಲೆಯಲ್ಲಿ ಮೊದಲ ಬಾರಿಗೆ 400 ಕೆವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರವನ್ನು ಸ್ಥಾಪಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಕುಮಾರ ಅವರು ಬುಧವಾರ ಪ್ರಸ್ತಾವಿತ ಸ್ಥಳದ ಪರಿಶೀಲನೆ ನಡೆಸಿದರು. 400 ಕೆ.ವಿ ಉಪಕೇಂದ್ರ ಸ್ಥಾಪನೆಗೆ ಗುರುತಿಸಲಾದ ಸ್ಥಳವು ಮಳವಳ್ಳಿ ತಾಲ್ಲೂಕಿನ ಬಿ.ಜಿ.ಪುರ ಹೋಬಳಿಯ ಹೆಬ್ಬಣಿ ಗ್ರಾಮದ ಸರ್ವೆ ನಂ. 122ರಲ್ಲಿ ಇರುವ ಜಾಗವಾಗಿದ್ದು ಸದರಿ ಜಾಗವನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು. ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಜಾಗದ ವಿಸ್ತೀರ್ಣ ಭೂಸ್ವರೂಪ ಅಗತ್ಯವಿರುವ ತಾಂತ್ರಿಕ ಅನುಕೂಲತೆಗಳು ಸಂಪರ್ಕ ರಸ್ತೆ ಸೌಲಭ್ಯ ಭದ್ರತಾ ವ್ಯವಸ್ಥೆಗಳು ಹಾಗೂ ಭವಿಷ್ಯ ವಿಸ್ತರಣೆಯ ಸಾಧ್ಯತೆಗಳ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಗ್ರವಾಗಿ ಅವಲೋಕನ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.