ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯದಿಂದ ಸೋಮವಾರ 79,535 ಕ್ಯೂಸೆಕ್ ನೀರು ಹೊರಗೆ ಬಿಡಲಾಗಿದ್ದು, ನದಿ ತೀರದ ದೇವಾಲಯ– ಮಂಟಪ ಮತ್ತು ಕೃಷಿ ಜಮೀನುಗಳು ಮುಳುಗಡೆಯಾಗಿವೆ.
ಪಟ್ಟಣದ ಪ್ರಸಿದ್ಧ ಶ್ರದ್ಧಾಕೇಂದ್ರ ಪಶ್ಚಿಮವಾಹಿನಿಯಲ್ಲಿ ಪುರಾತನ ಮಂಟಪ, ದೇವಾಲಯ ಹಾಗೂ ಇಲ್ಲಿನ ಮಹಾತ್ಮ ಗಾಂಧಿ ಚಿತಾಭಸ್ಮ ಸ್ಮಾರಕ ಮತ್ತು ರಾಜಮನೆತನದ ಸ್ನಾನಘಟ್ಟಗಳು ನೀರಿನಲ್ಲಿ ಮುಳುಗಿವೆ. ಸಾಯಿಬಾಬಾ ಆಶ್ರಮದ ಮುಖ ಮಂಟಪದ ಒಳಕ್ಕೆ ನೀರು ನುಗ್ಗಿದ್ದು, ಶಂಭುಲಿಂಗಯ್ಯನಕಟ್ಟೆ ಸ್ಮಶಾನದ ಮೇಲೆ ಆಳೆತ್ತರ ನೀರು ಹರಿಯುತ್ತಿದೆ.
ಸಮೀಪದ ಗಂಜಾಂನ ಚಿಕ್ಕ ಗೋಸಾಯಿಘಾಟ್ ಮತ್ತು ದೊಡ್ಡ ಗೋಸಾಯಿಘಾಟ್‌ಗಳಲ್ಲಿ ದೇವಾಲಯಗಳ ಬಾಗಿಲುವರೆಗೂ ನೀರು ಬಂದಿದೆ. ಕಾವೇರಿ ಸಂಗಮದ ಬಳಿ ಬಟ್ಟೆ ಬದಲಿಸುವ ಮನೆ ಜಲಾವೃತವಾಗಿದೆ. ವೆಲ್ಲೆಸ್ಲಿ ಸೇತುವೆ ಬಳಿ ಇರುವ ಮಂಡ್ಯ ನಗರ ನೀರು ಸರಬರಾಜು ಕೇಂದ್ರದ ಸಮೀಪದ ಆಂಜನೇಯಸ್ವಾಮಿ ದೇವಾಲಯ ಮುಕ್ಕಾಲು ಭಾಗ ಜಲಾವೃತಗೊಂಡಿದೆ.
ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ಕೇಂದ್ರದ ಹಳೆಯ ಟಿಕೆಟ್ ಕೌಂಟರ್ ನೀರಿನಿಂದ ಆವೃತವಾಗಿದೆ. ರಾಂಪುರ, ಗಂಜಾಂ, ಮರಳಾಗಾಲ, ಚಿಕ್ಕಪಾಳ್ಯ, ಹಂಗರಹಳ್ಳಿ ಬಳಿ ನದಿ ತೀರದ ಕೃಷಿ ಜಮೀನುಗಳ ಮೇಲೆ ನೀರು ಹರಿಯುತ್ತಿದೆ. ಶ್ರೀನಿವಾಸ ಅಗ್ರಹಾರದ ಬಳಿ ಕಾವೇರಿ ನದಿ ನೀರು ಲೋಕಪಾವನಿ ನದಿಯತ್ತ ಹಿಮ್ಮುಖವಾಗಿ ಹರಿಯತೊಡಗಿದೆ.
ಪ್ರವಾಹ ಪರಿಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಪಟ್ಟಣ ಮತ್ತು ವಿವಿಧ ಗ್ರಾಮಗಳ ನದಿ ತೀರಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ನದಿಯತ್ತ ಯಾರೂ ತೆರಳದಂತೆ ಪ್ರಚಾರ ಮಾಡಲಾಗುತ್ತಿದೆ.
ಕಾವೇರಿ ಮೈದುಂಬಿ ಹರಿಯುತ್ತಿರುವ ಬೆಂಗಳೂರು– ಮೈಸೂರು ನಡುವೆ ಸಂಚರಿಸುವವರು ವಾಹನ ನಿಲ್ಲಿಸಿ ವೀಕ್ಷಿಸುತ್ತಿದ್ದಾರೆ. ಪಟ್ಟಣದ ಉತ್ತರ ಕಾವೇರಿ ನದಿ ಸೇತುವೆ, ವೆಲ್ಲೆಸ್ಲಿ ಸೇತುವೆ, ಸಾಯಿಬಾಬಾ ಆಶ್ರಮದ ಬಳಿ ಸೇತುವೆ ಮೇಲೆ ನಿಂತು ಫೋಟೊ, ಸೆಲ್ಫೀ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಹೆದ್ದಾರಿಯಲ್ಲಿ ಜನದಟ್ಟಣೆ ಉಂಟಾಗುತ್ತಿದೆ. ಪೊಲೀಸರು ಜನರನ್ನು ಚದುರಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.