ಶ್ರೀರಂಗಪಟ್ಟಣ: ‘ತಾಲ್ಲೂಕಿನ ಕೆಆರ್‌ಎಸ್ ಜಲಾಶಯದ ಪ್ಲಸ್ 80 ಅಡಿ ಮಟ್ಟದ 5ನೇ ಗೇಟ್ ಮೂಲಕ ಭಾನುವಾರ ರಾತ್ರಿಯಿಂದ ಸೋಮವಾರ ರಾತ್ರಿವರೆಗೆ ಅನಗತ್ಯವಾಗಿ ನೀರು ಹರಿದು ಹೋಗಿದೆ’ ಎಂದು ರೈತರು ದೂರಿದ್ದಾರೆ.
‘ಜಲಾಶಯದ ಒಂದು ಗೇಟ್ ಮೂಲಕ ಎರಡು ಸಾವಿರ ಕ್ಯೂಸೆಕ್ ನೀರು ನದಿಗೆ ಹರಿದಿದೆ. ಜಲಾಶಯದ ನೀರಿನ ಮಟ್ಟ (ಗೇಜ್) ನೋಡಲು ಹೋದ ಸಿಬ್ಬಂದಿ ಅದನ್ನು ಗಮನಿಸಿ, ಎಂಜಿನಿಯರ್‌ಗಳಿಗೆ ವಿಷಯ ಮುಟ್ಟಿಸಿದ್ದರು. ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಮುಖ್ಯ ಎಂಜಿನಿಯರ್ ವೆಂಕಟೇಶ್, ಅಧೀಕ್ಷಕ ಎಂಜಿನಿಯರ್ ರಘುರಾಂ ಸೂಚನೆಯಂತೆ, ಗೇಟ್ ಭದ್ರಪಡಿಸಿ ನೀರು ನಿಲ್ಲಿಸಿದ್ದಾರೆ’ ಎಂದು ನಿಗಮದ ಸಿಬ್ಬಂದಿ ತಿಳಿಸಿದ್ದಾರೆ.
ನಿಗಮದ ಸಿಬ್ಬಂದಿಯೇ ಗೇಟ್ ತೆರೆದರೇ ಅಥವಾ ತಾಂತ್ರಿಕ ದೋಷದಿಂದ ಗೇಟ್ ತೆರೆದುಕೊಂಡಿದೆಯೇ ಎಂಬ ಬಗ್ಗೆ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಿಲ್ಲ. ನದಿಗೆ ನೀರು ಹರಿದು ವ್ಯರ್ಥವಾದ ಬಗ್ಗೆ ಮಂಗಳವಾರ ಕೆಆರ್‌ಎಸ್‌ನಲ್ಲಿ ನಿಗಮದ ಅಧಿಕಾರಿಗಳು ಮತ್ತು ಸಿಬ್ಬಂದಿಯ ತುರ್ತು ಸಭೆ ನಡೆದಿದೆ. ಆದರೆ ಸಭೆಯಲ್ಲಿ ಚರ್ಚಿಸಿದ ವಿಷಯಗಳ ಕುರಿತು ಮಾಹಿತಿ ಪಡೆಯಲು ಅಧಿಕಾರಿಗಳು ಸಂಪರ್ಕಕ್ಕೆ ಸಿಕ್ಕಿಲ್ಲ.
ತನಿಖೆ ನಡೆಸಿ: ರೈತಸಂಘ
‘ಸರ್ಕಾರದ ಸೂಚನೆ ಪ್ರಕಾರ ಅಧಿಕಾರಿಗಳು ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಎರಡು ದಿನ ನಿರಂತರವಾಗಿ ನೀರು ಹರಿಸಿದ್ದಾರೆ. ಗೇಟ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ನದಿಗೆ ನೀರು ಹರಿದು ಹೋಗಿದೆ ಎಂಬ ಮಾತನ್ನು ನಂಬಲು ಸಾಧ್ಯವಿಲ್ಲ. ಬೇಸಿಗೆ ಬೆಳೆ ಮತ್ತು ಜೂನ್ ವರೆಗೆ ಕುಡಿಯುವ ಉದ್ದೇಶಕ್ಕೆ ನೀರನ್ನು ಕಾದಿಡಬೇಕಾದ ಅನಿವಾರ್ಯತೆ ಇರುವಾಗ ಹೀಗೆ ನೀರು ಹರಿಸಿರುವುದು ರೈತ ವಿರೋಧಿ ಕ್ರಮ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಂಜೇಶಗೌಡ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.