ಪ್ರಜಾವಾಣಿ ವಾರ್ತೆ
ಶ್ರೀರಂಗಪಟ್ಟಣ: ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ, 1916ರಲ್ಲಿ ಸ್ಥಾಪನೆಯಾಗಿರುವ ಪಟ್ಟಣದ ಕೃಷ್ಣರಾಜೇಂದ್ರ ಸಹಕಾರ ಸಂಘ ₹15 ಕೋಟಿ ವಹಿವಾಟು ನಡೆಸುತ್ತಿದೆ ಎಂದು ಸಂಘದ ನೂತನ ಅಧ್ಯಕ್ಷ ಕುಬೇರಸಿಂಗ್ ಎಸ್.ಕೆ. ತಿಳಿಸಿದರು.
ಸಂಘದ ಅಧ್ಯಕ್ಷರಾಗಿ ಸೋಮವಾರ ಆಯ್ಕೆಯಾದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿ, ‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಂಘವು ₹23 ಲಕ್ಷ ಲಾಭ ಗಳಿಸಿದ್ದು, ಷೇರುದಾರರಿಗೆ ಶೇ 9ರಷ್ಟು ಡಿವಿಡೆಂಟ್ ನೀಡಲಾಗಿದೆ. ಸಂಘದ ಎಲ್ಲ ವ್ಯವಹಾರಗಳನ್ನು ಸಂಪೂರ್ಣ ಗಣಕೀಕೃತ ಮಾಡಲಾಗುವುದು. ಸಂಘದ ಕಚೇರಿಯ ಕಟ್ಟಡ ಮೇಲೆ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುವುದು. ಸಂಘದ ಎಲ್ಲ ಸದಸ್ಯರಿಗೆ ಆರ್‌ಡಿ ಖಾತೆ ತೆರೆಯಲು ಅವಕಾಶ ಕಲ್ಪಿಸಲಾಗುವುದು. ಸಂಘಕ್ಕೆ ಸೇರಿದ ಖಾಲಿ ಜಾಗದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.
ಉಪಾಧ್ಯಕ್ಷರಾಗಿ ಪ್ರಕಾಶ್. ಸಿ ಆಯ್ಕೆಯಾಗಿದ್ದು, ಚುನಾವಣಾಧಿಕಾರಿ ವಸೀಂ ಪಾಷ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ಸಂಘದ ನಿರ್ದೇಶಕರಾದ ವಸಂತಕುಮಾರ್.ಸಿ, ರಘು.ಎಸ್, ವಿ. ನಾರಾಯಣ, ಪರಮೇಶ್.ಈ, ಸಾಯಿಲೀಲಾ, ಭಾನುಮತಿ ಚಂದ್ರಶೇಖರ್, ನಾರಾಯಣಸ್ವಾಮಿ, ಮಹದೇವ, ಸಿಇಒ ಎಂ. ವಸಂತಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.