ಮಂಡ್ಯ: ಕರ್ನಾಟಕ ಸಂಘದ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ 121ನೇ ಜನ್ಮದಿನದ ಅಂಗವಾಗಿ ನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಡಿಸೆಂಬರ್ 28ರಂದು ಮಧ್ಯಾಹ್ನ2.30ಕ್ಕೆ ವಿವಿಧ ಸಾಂಸ್ಕೃತಿಕ ಸಂಸ್ಥೆಗಳ ಸಹಯೋಗದಲ್ಲಿ ‘ಕುವೆಂಪು ಜನ್ಮೋತ್ಸವ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶಗೌಡ ಮತ್ತು ವಿಶ್ರಾಂತ ಪ್ರಾಂಶುಪಾಲ ಡಾ.ಎಸ್.ಬಿ. ಶಂಕರೇಗೌಡ ತಿಳಿಸಿದರು.
ಡಿಸೆಂಬರ್ 28ರಂದು ಮಧ್ಯಾಹ್ನ 2.30ಕ್ಕೆ ಆರಂಭವಾಗಲಿರುವ ಕುವೆಂಪು ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಆಂಧ್ರಪ್ರದೇಶದ ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತ ಜಯರಾಂ ರಾಯಪುರ ವಹಿಸುವರು. ವಿಮರ್ಶಕ ಎಸ್.ಜಿ. ಸಿದ್ದರಾಮಯ್ಯ ವಿಚಾರ ಕ್ರಾಂತಿಗೆ ಆಹ್ವಾನ ಹಿನ್ನೆಲೆಯಲ್ಲಿ ‘ನಿರಂಕುಶ ಮತಿತ್ವ’ ಕುರಿತು ಮಾತನಾಡುವರು. ನಂತರ ಚಿಂತಕ ಚಂದ್ರಶೇಖರ್ ನಂಗಲಿ ಅವರು ‘ಕುವೆಂಪು ಸಾಹಿತ್ಯ ಪ್ರವೇಶಕ್ಕೆ ಭೂಮಿಕೆ’ ಕುರಿತು ತಮ್ಮ ಒಳನೋಟ ಹಂಚಿಕೊಳ್ಳಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಸಂಜೆ 6ಕ್ಕೆ ಬೆಂಗಳೂರಿನ ಮನೋಜ್ಞ ಕಲಾತಂಡದ ಪಿ.ಮಾನಸ ನೇತೃತ್ವದ ತಂಡ ಕುವೆಂಪು ಅವರ ಜೀವನಾಧಾರಿತ ‘ಕಾಡಿನ ಕೊಳಲು’ ನೃತ್ಯ ರೂಪಕ ಪ್ರಸ್ತುತಪಡಿಸಲಿದ್ದಾರೆ. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪುರುಷೋತ್ತಮನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಲಯನ್ಸ್ ಕ್ಲಬ್‌ನ ಮಾಜಿ ಗವರ್ನರ್ ಕೆ.ದೇವೇಗೌಡ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.
ಜಿಲ್ಲಾಧಿಕಾರಿ ಕುಮಾರ ಅವರು ವಿದುಷಿ ಮಾನಸ ಅವರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ. ಅತಿಥಿಗಳಾಗಿ ವಿ.ಸುಜಾತ ಕೃಷ್ಣ, ಕನ್ನಿಕಾ ಶಿಲ್ಪ, ಚೇತನಾ ರಾಧಾಕೃಷ್ಣ ಪಾಲ್ಗೊಳ್ಳಲಿದ್ದಾರೆ. ಪುಸ್ತಕ ಪ್ರದರ್ಶನ ಸಹ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ನ ವಿನಯ್‌ಕುಮಾರ್, ನಾಗರೇವಕ್ಕ, ಸುಜಾತಾ ಕೃಷ್ಣ, ಶಿವಕುಮಾರ್ ಆರಾಧ್ಯ, ಅರವಿಂದ ಪ್ರಭು, ಜಯರಾಮ್ ಇದ್ದರು.
ಶ್ರೀರಾಮಾಯಣದರ್ಶನಂ ಗಮಕ ಡಿ.26 ಮತ್ತು 27ರಂದು
ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಡಿ.26 ಮತ್ತು 27ರಂದು ಪ್ರತಿದಿನ ಸಂಜೆ 5.45ರಿಂದ 7.30ರವರೆಗೆ ರಾಮಾಯಣದರ್ಶನಂ ಗಮಕ–ವ್ಯಾಖ್ಯಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ವಿಶ್ರಾಂತ ಪ್ರಾಚಾರ್ಯ ಮ. ರಾಮಕೃಷ್ಣ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಅಧ್ಯಕ್ಷತೆ ವಹಿಸುವರು. ತುಮಕೂರಿನ ಲಕ್ಷ್ಮಿಜೈಪ್ರಕಾಶ್ ಮತ್ತು ಶುಭಶ್ರೀ ಪ್ರಸಾದ್ ಅವರಿಂದ ‘ಶ್ರೀರಾಮಾಯಣ ದರ್ಶನಂ ಬೆಳಗಿಸಿದ ಸ್ತ್ರೀ ಪಾತ್ರಗಳು ಕುರಿತು ಗಮಕ ಮತ್ತು ವ್ಯಾಖ್ಯಾನ ನಡೆಯಲಿದೆ.
ಬೆಂಗಳೂರಿನ ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನದಿಂದ ‘ಶ್ರೀರಾಮಾಯಣದರ್ಶನಂ ಹಾಗೂ ಕುವೆಂಪು ಗೀತೆಗಳು’ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ ಎಂದು ಜಯಪ್ರಕಾಶಗೌಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.