ADVERTISEMENT

ಕೇಂದ್ರ ಸರ್ಕಾರದಿಂದ ಕಾರ್ಮಿಕ ವಿರೋಧಿ ನೀತಿ: ಬಾಲಕೃಷ್ಣ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 4:25 IST
Last Updated 30 ಡಿಸೆಂಬರ್ 2025, 4:25 IST
ಮಳವಳ್ಳಿ ಪಟ್ಟಣದ ರೈತ ಸಮುದಾಯ ಭವನದಲ್ಲಿ ಭಾನುವಾರ ನಡೆದ ಕಟ್ಟಡ ನಿರ್ಮಾಣ ಕಾರ್ಮಿಕರ ತಾಲ್ಲೂಕು ಸಮಾವೇಶವನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ರಾಜ್ಯ ಘಟಕದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿದರು
ಮಳವಳ್ಳಿ ಪಟ್ಟಣದ ರೈತ ಸಮುದಾಯ ಭವನದಲ್ಲಿ ಭಾನುವಾರ ನಡೆದ ಕಟ್ಟಡ ನಿರ್ಮಾಣ ಕಾರ್ಮಿಕರ ತಾಲ್ಲೂಕು ಸಮಾವೇಶವನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ರಾಜ್ಯ ಘಟಕದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿದರು   

ಮಳವಳ್ಳಿ: ದೇಶದ ಕಾರ್ಮಿಕ ವರ್ಗವನ್ನು ಗುಲಾಮಗಿರಿಗೆ ತಳ್ಳುವ ಜನದ್ರೋಹಿ ಕಾರ್ಮಿಕ ಸಂಹಿತೆಗಳನ್ನು ಸಂಘಟನೆಗಳ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಜಾರಿ ಮಾಡಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ರಾಜ್ಯ ಘಟಕದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕಿಡಿ ಕಾರಿದರು.

ಪಟ್ಟಣದ ರೈತ ಸಮುದಾಯ ಭವನದಲ್ಲಿ ಭಾನುವಾರ ನಡೆದ ಕಟ್ಟಡ ನಿರ್ಮಾಣ ಕಾರ್ಮಿಕರ ತಾಲ್ಲೂಕು ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಮಿಕರ ರಕ್ಷಣೆಗಾಗಿ ಸ್ವಾತಂತ್ರ್ಯ ಪೂರ್ವದಿಂದಲೂ ಇದ್ದ 29 ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿರುವುದು ದುಡಿಯುವ ವರ್ಗದ ಹಿತ ಕಾಯುವ ಬದಲಾಗಿ ಕಾರ್ಪೋರೇಟ್ ಬಂಡವಾಳದಾರರಿಗೆ ಲಾಭವನ್ನು ಮಾಡಿಕೊಳ್ಳಲು ಜಾರಿ ಮಾಡಲಾಗಿದೆ. ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಜಾರಿ ಮಾಡಿರಬಹುದು ಆದರೆ ನಾವು ಬೀದಿಯಲ್ಲಿ ಆ ಕಾನೂನುಗಳನ್ನು ಸೋಲಿಸುತ್ತೇವೆ ಎಂದು ಹೇಳಿದರು.

ADVERTISEMENT

ಕಾರ್ಮಿಕರನ್ನು ಕಾನೂನು ಕಾರ್ಮಿಕರ ಉದ್ಯೋಗವನ್ನು ಅನಿಶ್ಚಿತಗೊಳಿಸುತ್ತವೆ ಮತ್ತು ಅಭದ್ರತೆಗೆ ತುಳ್ಳುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಫೆಬ್ರವರಿ 12ರಂದು ದೇಶಾದ್ಯಂತ ಸಾರ್ವತ್ರಿಕ ಮುಷ್ಕರ ನಡೆಸಲು ಕೇಂದ್ರ ಕಾರ್ಮಿಕ ಸಂಘಟನೆಗಳು ನಿರ್ಧರಿಸಿರುವ ಮುಷ್ಕರವನ್ನು ಎಲ್ಲರೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಫೆಡರೇಶನ್ ರಾಜ್ಯ ಘಟಕದ ಕಾರ್ಯದರ್ಶಿ ಲಿಂಗರಾಜು ಮಾತನಾಡಿ, ಹೊಸ ಸಂಹಿತೆಗಳಿಂದಾಗಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಭದ್ರತೆ ಒದಗಿಸಿದ್ದ ಎರಡು ಕಾಯ್ದೆಗಳು ರದ್ದಾಗಿವೆ. ಇದ್ದರಿಂದ ಅನೇಕ ಪ್ರಯೋಜನಗಳು ಸಿಗದಿರುವ ಪರಿಸ್ಥಿತಿ ಇದೆ. ಇತ್ತ ರಾಜ್ಯದ ಕಾರ್ಮಿಕರ ನಿಧಿ ದುರ್ಬಳಕೆಯಾಗಿ ಬೇರೆ ಯೋಜನೆಗಳಿಗೆ ಬಳಕೆಯಾಗುತ್ತಿದೆ. ಕಾರ್ಮಿಕರ ಕಿಟ್‌ಗಳಲ್ಲೂ ನೂರಾರು ಕೋಟಿ ಭ್ರಷ್ಟಾಚಾರ ನಡೆಯುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೌನ ವಹಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಲಿಂಗರಾಜು ಮಾತನಾಡಿದರು. ಫೆಡರೇಶನ್ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಸಿಐಟಿಯು ಮುಖಂಡರಾದ ಮಹದೇವಮ್ಮ, ಎಚ್.ಕೆ.ತಿಮ್ಮೇಗೌಡ, ಮಂಟೇಸ್ವಾಮಿ, ಚಂದ್ರಶೇಖರ್ ಪಾಲ್ಗೊಂಡಿದ್ದರು.

ಪದಾಧಿಕಾರಿಗಳ ಆಯ್ಕೆ: ಸಮಾವೇಶದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ತಾಲ್ಲೂಕು ಸಮಿತಿಗೆ ನೂತನ ಅಧ್ಯಕ್ಷರಾಗಿ ಮಾದಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಎಚ್.ಕೆ.ತಿಮ್ಮೇಗೌಡ, ಖಜಾಂಚಿಯಾಗಿ ಬಿ.ಮಂಟೇಸ್ವಾಮಿ ಹಾಗೂ 11 ಮಂದಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.