ADVERTISEMENT

ಸೌಕರ್ಯದ ಕೊರತೆ; ಮೆಡಿಕಲ್‌ ಕಾಲೇಜುಗಳಿಗೆ ದಂಡ

ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲೂ ಸೌಲಭ್ಯಗಳಿಗೆ ಬರ

ಸಿದ್ದು ಆರ್.ಜಿ.ಹಳ್ಳಿ
Published 16 ಜುಲೈ 2024, 7:18 IST
Last Updated 16 ಜುಲೈ 2024, 7:18 IST
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಹೊರನೋಟ  –ಪ್ರಜಾವಾಣಿ ಚಿತ್ರ: ಧನುಷ್‌ ಡಿ.ವಿ.
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಹೊರನೋಟ  –ಪ್ರಜಾವಾಣಿ ಚಿತ್ರ: ಧನುಷ್‌ ಡಿ.ವಿ.   

ಮಂಡ್ಯ: ಮೂಲಸೌಕರ್ಯದ ಕೊರತೆ ಎದುರಿಸುತ್ತಿರುವ ರಾಜ್ಯದ 27 ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌.ಎಂ.ಸಿ) ದಂಡ ವಿಧಿಸಿ ಕಠಿಣ ಕ್ರಮ ಕೈಗೊಂಡಿದೆ. 

ಸ್ಥಾಪನೆಯಾಗಿ ಹಲವಾರು ವರ್ಷಗಳೇ ಕಳೆದಿರುವ ಹಳೆಯ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಪ್ರತಿಷ್ಠಿತ ಖಾಸಗಿ ವೈದ್ಯಕೀಯ ಕಾಲೇಜುಗಳಿಗೂ ನೋಟಿಸ್‌ ಜಾರಿಗೊಳಿಸಿ, ದಂಡ ಪಾವತಿಸುವಂತೆ ತಾಕೀತು ಮಾಡಲಾಗಿದೆ. ಕನಿಷ್ಠ ₹2 ಲಕ್ಷದಿಂದ ಬರೋಬ್ಬರಿ ₹15 ಲಕ್ಷದವರೆಗೆ ದಂಡ ವಿಧಿಸಲಾಗಿದೆ. 

ಮಂಡ್ಯ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ ಹಾಗೂ ಯಾದಗಿರಿಯಲ್ಲಿರುವ ಸರ್ಕಾರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳಿಗೆ ಗರಿಷ್ಠ ತಲಾ ₹15 ಲಕ್ಷ ದಂಡ ಹಾಕಲಾಗಿದೆ. 11 ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲೂ ಸೌಲಭ್ಯಗಳ ಕೊರತೆ ಕಂಡು ಬಂದಿರುವುದರಿಂದ ನೋಟಿಸ್‌ ಜಾರಿ ಮಾಡಲಾಗಿದೆ. 

ADVERTISEMENT

ಬೋಧಕರ ಕೊರತೆ:

ಬಹುತೇಕ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಬೋಧಕರು ಮತ್ತು ಸಿಬ್ಬಂದಿ ಕೊರತೆ ಎದುರಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲವಾಗಿವೆ. ಎನ್‌.ಎಂ.ಸಿ. ನಿಯಮಾವಳಿ ಪ್ರಕಾರ ನಿಗದಿತ ಸಿಬ್ಬಂದಿ ಭರ್ತಿಯಾಗದಿರುವುದೇ ದಂಡ ಹಾಕಲು ಪ್ರಮುಖ ಕಾರಣ. 

ಪ್ರಯೋಗಾಲಯಗಳ ಕೊರತೆ, ವೈದ್ಯಕೀಯ ಉಪಕರಣಗಳ ಕೊರತೆ, ದಾಖಲೆಗಳ ನಿರ್ವಹಣೆ ಕೊರತೆ, ರೋಗಿಗಳ ಸಂಖ್ಯೆಯನ್ನು ಸಮರ್ಪಕವಾಗಿ ದಾಖಲಿಸದಿರುವುದು, ಅಗತ್ಯ ಸೇವೆ ಮತ್ತು ಸೌಲಭ್ಯ ಒದಗಿಸದಿರುವುದು ಮತ್ತು ನಿರ್ವಹಣೆಯ ಕೊರತೆಯೇ ದಂಡ ಬೀಳಲು ಕಾರಣ ಎನ್ನಲಾಗಿದೆ. 

ತಜ್ಞರ ವರದಿ:

ಎನ್‌.ಎಂ.ಸಿ ತಜ್ಞರ ಸಮಿತಿ ಮತ್ತು ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ಥಳೀಯ ತಪಾಸಣಾ ಸಮಿತಿ ರಾಜ್ಯದ ವಿವಿಧ ವೈದ್ಯಕೀಯ ಕಾಲೇಜುಗಳಿಗೆ ಭೇಟಿ ನೀಡಿ, ಎನ್‌.ಎಂ.ಸಿ. ನಿಯಮಾವಳಿ ಪ್ರಕಾರ ಮೂಲಸೌಕರ್ಯ ಮತ್ತು ಸೌಲಭ್ಯಗಳು ಇವೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡಿತ್ತು. 

178 ಹುದ್ದೆ ಖಾಲಿ:

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ 303 ಗ್ರೂಪ್‌–ಎ ಹುದ್ದೆಗಳು ಮಂಜೂರಾಗಿದ್ದು, ಪ್ರಸ್ತುತ 125 ಹುದ್ದೆಗಳಷ್ಟೇ ಭರ್ತಿಯಾಗಿವೆ. 178 ಕಾಯಂ ಹುದ್ದೆಗಳು ಖಾಲಿಯಿವೆ. ಅದರಲ್ಲಿ ಪ್ರಾಂಶುಪಾಲ–1, ಹಣಕಾಸು ಅಧಿಕಾರಿ–1, ಪ್ರಾಧ್ಯಾಪಕ–2, ಸಹ ಪ್ರಾಧ್ಯಾಪಕ–2, ಸಹಾಯಕ ಪ್ರಾಧ್ಯಾಪಕ–31, ಸೀನಿಯರ್‌ ರೆಸಿಡೆಂಟ್‌–56, ಜೂನಿಯರ್‌ ರೆಸಿಡೆಂಟ್‌–84 ಹುದ್ದೆಗಳು ಖಾಲಿ ಉಳಿದಿವೆ. 

ಎನ್‌ಎಂಸಿಗೆ ಪತ್ರ:

‘ಹಾವೇರಿ ಮೆಡಿಕಲ್‌ ಕಾಲೇಜು (ಹಿಮ್ಸ್‌) ಹೊಸದಾಗಿ ಆರಂಭಗೊಂಡಿದ್ದು, ಬೋಧಕರು ಮತ್ತು ಸೌಲಭ್ಯಗಳನ್ನು ಸರ್ಕಾರ ಹಂತ–ಹಂತವಾಗಿ ಒದಗಿಸುತ್ತಿದೆ. ಹೀಗಾಗಿ ರಿಯಾಯಿತಿ ನೀಡಬೇಕೆಂದು ಎನ್‌.ಎಂ.ಸಿ.ಗೆ. ಪತ್ರ ಬರೆದಿದ್ದೆವು. ಪ್ರತಿಕ್ರಿಯೆ ಬರಲಿಲ್ಲ. ದಂಡ ಕಟ್ಟದಿದ್ದರೆ ಮುಂದಿನ ವರ್ಷಕ್ಕೆ ಮಾನ್ಯತೆ ಸಿಗುವುದಿಲ್ಲ ಎಂಬ ಕಾರಣದಿಂದ ₹15 ಲಕ್ಷ ದಂಡ ಕಟ್ಟಿದ್ದೇವೆ’ ಎಂದು ‘ಹಿಮ್ಸ್‌’ ನಿರ್ದೇಶಕರು ಮಾಹಿತಿ ನೀಡಿದರು.

ಮಂಡ್ಯ ವೈದ್ಯಕೀಯ ಕಾಲೇಜಿನಲ್ಲಿ 56 ‘ಸೀನಿಯರ್‌ ರೆಸಿಡೆಂಟ್‌’ ಸೇರಿದಂತೆ 178 ಕಾಯಂ ಸಿಬ್ಬಂದಿ ಕೊರತೆಯಿದೆ. ಎನ್‌.ಎಂ.ಸಿ ಹಾಕಿದ ₹15 ಲಕ್ಷ ದಂಡವನ್ನು ಪಾವತಿಸಿದ್ದೇವೆ
– ಡಾ.ನರಸಿಂಹಸ್ವಾಮಿ ನಿರ್ದೇಶಕ ಮಿಮ್ಸ್‌ ಮಂಡ್ಯ

ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ವಿಧಿಸಿರುವ ದಂಡದ ವಿವರ  ಮೆಡಿಕಲ್‌ ಕಾಲೇಜುಗಳು; ದಂಡದ ಮೊತ್ತ  ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್‌);₹15 ಲಕ್ಷ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ:₹15 ಲಕ್ಷ  ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ;₹15 ಲಕ್ಷ ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ;₹15 ಲಕ್ಷ ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ;₹15 ಲಕ್ಷ ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ;₹15 ಲಕ್ಷ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ;₹3 ಲಕ್ಷ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ;₹3 ಲಕ್ಷ ಗುಲ್ಬರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ;₹3 ಲಕ್ಷ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ;₹3 ಲಕ್ಷ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ;₹3 ಲಕ್ಷ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ;₹3 ಲಕ್ಷ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ;₹3 ಲಕ್ಷ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹುಬ್ಬಳ್ಳಿ (ಕಿಮ್ಸ್‌);₹2 ಲಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.