ADVERTISEMENT

ತಿದ್ದುಪಡಿ ಹಿಂದೆ ಕಾರ್ಪೊರೇಟ್‌ ವಲಯದ ಕೈವಾಡ: ರವಿವರ್ಮಕುಮಾರ್‌

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 14:22 IST
Last Updated 27 ಜೂನ್ 2020, 14:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಾಂಡವಪುರ: ‘ಕೋವಿಡ್‌ ಲಾಕ್‌ಡೌನ್ ಪರಿಸ್ಥಿತಿಯನ್ನೇ ನೆಪ ಮಾಡಿಕೊಂಡ ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಪ್ರತಿಭಟನೆ ನಡೆಸುವುದಕ್ಕೂ ಸಾಧ್ಯವಾಗದ ಪರಿಸ್ಥಿತಿಯಲ್ಲೇ ಈ ಸಂಚು ಮಾಡಿದ್ದು ಇದರ ಹಿಂದೆ ಕಾರ್ಪೊರೇಟ್‌ ವಲಯದ ಕೈವಾಡ ಇದೆ’ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಪ್ರೊ.ರವಿವರ್ಮಕುಮಾರ್ ಶನಿವಾರ ಹೇಳಿದರು.

ದಿ.ಕೆ.ಎಸ್‌.ಪುಟ್ಟಣ್ಣಯ್ಯ ತವರು ಕ್ಯಾತನಹಳ್ಳಿ ಗ್ರಾಮದಲ್ಲಿ ರೈತಸಂಘ ಹಾಗೂ ಹಸಿರು ಸೇನೆ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂತಹ ತಿದ್ದುಪಡಿಗಳನ್ನು ತಮ್ಮ ಸ್ವಂತಿಕೆಯಿಂದ ಮಾಡುತ್ತಿಲ್ಲ. ಅವರ ಮೇಲೆ ಒತ್ತಡ ಹೇರಿ ತಿದ್ದುಪಡಿ ತರಲಾಗುತ್ತಿದೆ. ಇದರ ಹಿಂದೆ ಕೇಂದ್ರ ಸರ್ಕಾರ ಹಾಗೂ ಕಾರ್ಪೊರೇಟ್‌ ಕಂಪನಿಗಳ ಕೈವಾಡವಿದೆ. ಭೂ ಸುಧಾರಣೆ ಕಾಯ್ದೆಗೆ ನಮ್ಮ ರಾಜ್ಯದಲ್ಲಿ ದೊಡ್ಡ ಇತಿಹಾಸವಿದೆ. ಇದಕ್ಕೆ ತಿದ್ದುಪಡಿ ತರುವಾಗ ಅಧಿವೇಶನ ಕರೆದು ಚರ್ಚೆಗೆ ಒಳಪಡಿಸಬೇಕಾಗಿತ್ತು. ಆದರೆ ಸರ್ಕಾರ ತರಾತುರಿಯಲ್ಲಿ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ಜಾರಿಗೊಳಿಸಲು ಹೊರಟಿರುವುದು ಅನುಮಾನಾಸ್ಪದವಾಗಿದೆ’ ಎಂದರು.

ADVERTISEMENT

‘ತಿದ್ದುಪಡಿ ಕಾಯ್ದೆ ಮೂಲಕ ಉಳುವವರನ್ನೇ ಉಳ್ಳವರನ್ನಾಗಿ ಮಾಡುತ್ತೆವೆ ಎಂದು ಕಂದಾಯ ಸಚಿವ ಆರ್.ಅಶೋಕ್‌ ಬಾಲಿಶವಾಗಿ ಹೇಳಿಕೆ ನೀಡಿದ್ದಾರೆ. ಇದರ ಹಿಂದೆ ಅನ್ನ ಕೊಡುವ ಭೂಮಿಯನ್ನು ಮಾರಾಟ ಮಾಡುವ ಉದ್ದೇಶವಿದೆ. ರೈತ ಭೂಮಿ ಮಾರಿಕೊಂಡರೆ ಆತನ ಜಮೀನಿನಲ್ಲೇ ಕೂಲಿ ಕೆಲಸಗಾರನಾಗುವ ಅಪಾಯವಿದೆ’ ಎಂದರು.

‘ತಿದ್ದುಪಡಿಗೆ ವಿರೋಧ ವ್ಯಕ್ತವಾದ ಕಾರಣ ರಾಜ್ಯ ಸರ್ಕಾರ, ನೀರಾವರಿ ಜಮೀನಿಗೆ ಈ ತಿದ್ದುಪಡಿ ಅನ್ವಯವಾಗುವುದಿಲ್ಲ ಎಂದು ಹೇಳಿದೆ. ಆದರೆ ನೀರಾವರಿ ಜಮೀನಿನ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆ ಇಲ್ಲ. ನಾಲೆ, ಕೆರೆ, ಪಂಪ್‌ಸೆಟ್‌ ಸೇರಿದಂತೆ ಯಾವ ನೀರಾವರಿ ಎಂಬುದು ತಿಳಿಸಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.