ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ‘ಜನ, ಜಾನುವಾರುಗಳಿಗೆ ಉಪಪಟಳ ನೀಡುತ್ತವೆ ಎಂಬ ಕಾರಣಕ್ಕೆ ಚಿರತೆ ಅಥವಾ ಹುಲಿಗಳನ್ನು ಮೂಲ ನೆಲೆಯಿಂದ ಬೇರೆಡೆಗೆ ಸ್ಥಳಾಂತರ ಮಾಡಿದರೆ ಸಂಘರ್ಷ ಮತ್ತಷ್ಟು ಹೆಚ್ಚುತ್ತದೆ’ ಎಂದು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಹೇಳಿದರು.
ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ಮಂಗಳವಾರ ವಿಶ್ವ ವನ್ಯಜೀವಿಗಳ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ‘ಚಿರತೆ ಮತ್ತು ಮಾನವ ಸಂಘರ್ಷ’ ವಿಚಾರ ಮಂಥನದಲ್ಲಿ ಅವರು ಮಾತನಾಡಿದರು.
‘ಚಿರತೆಗಳು ವನ್ಯ ಲೋಕದ ಅವಿಭಾಜ್ಯ ಅಂಗ. ಅವುಗಳ ಆವಾಸ ಸ್ಥಾನವನ್ನು ಮನುಷ್ಯ ಅತಿಕ್ರಮಿಸುತ್ತಿರುವುದರಿಂದ ಆಹಾರದ ಕೊರತೆ ಉಂಟಾಗುತ್ತಿದೆ. ಹಾಗಾಗಿ ಜನ, ಜಾನುವಾರುಗಳ ಮೇಲೆ ದಾಳಿ ಮಾಡುವ ಪ್ರಕರಣಗಳು ನಡೆಯುತ್ತಿವೆ. ಬೋನಿಗೆ ಬಿದ್ದ ಚಿರತೆಗಳು ಗಾಯಗೊಳ್ಳದಂತೆ ಅರಣ್ಯ ಇಲಾಖೆ ಸಿಬ್ಬಂದಿ ಜಾಗ್ರತೆ ವಹಿಸಬೇಕು. ಅವುಗಳ ಮುಖ ಮತ್ತು ಕಾಲಿಗೆ ಗಾಯವಾದರೆ ಬಲಿ ಪ್ರಾಣಿಗಳನ್ನು ಬೆನ್ನಟ್ಟಿ ಬೇಟೆಯಾಡಲು ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಜನರ ಮೇಲೆ ದಾಳಿ ಮಾಡುವುದು ಸಹಜ’ ಎಂದರು.
‘ಚಿರತೆ ಗೋಚರವಾದರೆ ಅಥವಾ ಜನ, ಜಾನುವಾರುಗಳ ಮೇಲೆ ದಾಳಿ ಮಾಡಿದರೆ ಮಾಧ್ಯಮಗಳು ಜಾಣ್ಮೆಯಿಂದ ವರದಿ ಮಾಡಬೇಕು. ವರದಿಗಳು ಜನರಲ್ಲಿ ಭಯ ಹುಟ್ಟಿಸುವಂತಿರಬಾರದು. ಅತಿ ರಂಜಿತವಾದ ವರದಿಗಳು ಒಳ್ಳೆಯದಲ್ಲ’ ಎಂದು ಹೇಳಿದರು.
ವನ್ಯಜೀವಿ ತಜ್ಞ ವೆಂಕಟೇಶ್ ಮಾತನಾಡಿ, ‘ಯಾವುದೇ ವನ್ಯ ಜೀವಿಯನ್ನು ಸೆರೆ ಹಿಡಿದಾಗ ಘಟನೆಯ ವರದಿಯನ್ನು ವಿಡಿಯೊ ಮತ್ತು ಛಾಯಾಚಿತ್ರಗಳ ಸಹಿತ ದಾಖಲಿಸಬೇಕು. ನವೀನ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ವನ್ಯಜೀವಿ ಸೆರೆ ಕಾರ್ಯಾಚರಣೆಗೂ ಮುನ್ನ ಸೂಕ್ತ ಯೋಜನೆ ರೂಪಿಸಬೇಕು’ ಎಂದರು.
‘ಚಿರತೆಗಳು ರೈತನ ಮಿತ್ರಗಳು. ರೈತರ ಬೆಳೆ ಹಾಳು ಮಾಡುವ ಕಾಡು ಹಂದಿಗಳನ್ನು ತಿನ್ನುತ್ತವೆ. ವರ್ಷದಲ್ಲಿ ಒಂದು ಚಿರತೆ 50ರಿಂದ 60 ಹಂದಿಗಳನ್ನು ಬೇಟೆಯಾಡುತ್ತದೆ. ವನ್ಯ ಜೀವಿಗಳ ಉಪಟಳದ ಬಗ್ಗೆ ದೂರು ನೀಡುವವರ ಜತೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಶ್ವಾಸದಿಂದ ಇರಬೇಕು. ಕಾಡಂಚಿನ ಜನರ ಜತೆ ನಿರಂತರ ಸಂಪರ್ಕ ಇಟ್ಟುಳ್ಳಬೇಕು. ಮೇಲಿಂದ ಮೇಲೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು’ ಎಂದು ತಿಳಿಸಿದರು.
ಚಿರತೆ ಕಾರ್ಯಪಡೆ ಸಿಬ್ಬಂದಿ ಮತ್ತು ವನ್ಯಜೀವಿ ತಜ್ಞರ ನಡುವೆ ಸಂವಾದ ನಡೆಯಿತು. ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಭುಗೌಡ, ಮಂಡ್ಯ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಘು, ಪಕ್ಷಿಧಾಮದ ವಲಯ ಅರಣ್ಯಾಧಿಕಾರಿ ಸಯ್ಯದ್ ನದೀಂ, ಉಪ ವಲಯ ಅರಣ್ಯಾಧಿಕಾರಿ ಎಚ್.ವಿ. ರವಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.