
ಪ್ರಾತಿನಿಧಿಕ ಚಿತ್ರ
ಮಂಡ್ಯ: ಜಿಲ್ಲೆಯಲ್ಲಿ ಚಿರತೆ ದಾಳಿ ವಿಪರೀತವಾಗಿದ್ದು, 10 ತಿಂಗಳಲ್ಲಿ 477 ಜಾನುವಾರು ಮೃತಪಟ್ಟಿವೆ. ಅಷ್ಟೇ ಅಲ್ಲ, 19 ಜನರೂ ಗಾಯಗೊಂಡಿದ್ದಾರೆ.
2022-23ರಲ್ಲಿ 595, 2023–24ರಲ್ಲಿ 353, 2024–25ರಲ್ಲಿ 588 ಚಿರತೆ ದಾಳಿ ಪ್ರಕರಣಗಳು ದಾಖಲಾಗಿವೆ. ಅರಣ್ಯ ಇಲಾಖೆಯು ಜಾನುವಾರು ಸಾವು, ಮಾನವ ಗಾಯ, ಮಾನವ ಸಾವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪರಿಹಾರವನ್ನೂ ನೀಡುತ್ತಿದೆ.
ಬೆಟ್ಟ ಮತ್ತು ಕಾಡಂಚಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಮಿತಿ ಮೀರಿದೆ. ಅಷ್ಟೇ ಏಕೆ, ಕಾಡಿನಿಂದ ದೂರದಲ್ಲಿರುವ ಹಳ್ಳಿಗಳಿಗೂ ಚಿರತೆಗಳು ನುಗ್ಗಿ ನಾಯಿ, ಕುರಿ, ಮೇಕೆ, ಕೋಳಿಗಳನ್ನು ಕದ್ದೊಯ್ಯುತ್ತಿವೆ. ಹಸು, ಎಮ್ಮೆಗಳ ಮೇಲೂ ಮಾರಣಾಂತಿಕ ದಾಳಿ ನಡೆಸುತ್ತಿವೆ.
ಮಳವಳ್ಳಿ ತಾಲ್ಲೂಕಿನ ಹಲಗೂರು, ಬೆಳಕವಾಡಿ, ಮದ್ದೂರು ತಾಲ್ಲೂಕಿನ ಭಾರತೀನಗರ, ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಉಪಟಳ ಜಾಸ್ತಿಯಾಗಿದೆ.
ಕಬ್ಬಿನ ಗದ್ದೆಗಳೇ ವಾಸಸ್ಥಾನ
‘ಬೆಟ್ಟ, ಕಾಡು, ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದ ಚಿರತೆಗಳು ಇತ್ತೀಚಿನ ದಿನಗಳಲ್ಲಿ ಕಬ್ಬಿನ ಗದ್ದೆಗಳನ್ನೇ ವಾಸಸ್ಥಾನವನ್ನಾಗಿ ಮಾಡಿಕೊಂಡಿವೆ. ಇಲ್ಲಿಯೇ ಸಂತಾನೋತ್ಪತ್ತಿ ಮಾಡುತ್ತಿರುವುದರಿಂದ ಚಿರತೆಗಳ ಸಂಖ್ಯೆ ಜನವಸತಿ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಜೊತೆಗೆ ಮಾನವ–ವನ್ಯಜೀವಿ ಸಂಘರ್ಷಕ್ಕೂ ಕಾರಣವಾಗುತ್ತಿದೆ’ ಎನ್ನುತ್ತಾರೆ ಅರಣ್ಯ ಅಧಿಕಾರಿಗಳು.
ಚಿರತೆ ಹಾವಳಿಯಿಂದ ಬೆಚ್ಚಿ ಬಿದ್ದಿರುವ ರೈತರು, ರಾತ್ರಿ ವೇಳೆ ಹೊಲ, ಗದ್ದೆಗಳಿಗೆ ನೀರು ಹಾಯಿಸುವುದಕ್ಕೆ ಹೋಗಲು ಹೆದರುತ್ತಿದ್ದಾರೆ. ಕಬ್ಬಿನ ಗದ್ದೆಗಳಲ್ಲೇ ಚಿರತೆಗಳು ಮರಿ ಹಾಕಿರುವ ಹಲವಾರು ಉದಾಹರಣೆಗಳಿವೆ. ಹಸು, ಮೇಕೆ, ನಾಯಿಗಳೇ ಚಿರತೆಗಳ ಟಾರ್ಗೆಟ್. ಜಿಲ್ಲೆಯಲ್ಲಿ ರೈತರು ಹೈನುಗಾರಿಕೆಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ರೈತರಿಗೆ ಆಧಾರ ಸ್ತಂಭವಾಗಿರುವ ಸಾಕು ಪ್ರಾಣಿಗಳನ್ನು ಚಿರತೆಗಳು ಬಲಿ ಪಡೆಯುತ್ತಿರುವುದರಿಂದ ಅನ್ನದಾತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಶಾಶ್ವತ ಪರಿಹಾರಕ್ಕೆ ಆಗ್ರಹ
‘ಮೇಲುಕೋಟೆ ಸುತ್ತಮುತ್ತಲ ಅರಣ್ಯದಂಚಿನ ಗ್ರಾಮಗಳಲ್ಲಿ ಸಾಕುಪ್ರಾಣಿಗಳ ಮೇಲೆ ಚಿರತೆಗಳು ನಿರಂತರ ದಾಳಿ ಮಾಡುತ್ತಿದ್ದು ರೈತರು ಸಂಕಷ್ಟ ಸಿಲುಕಿದ್ದಾರೆ. ಅರಣ್ಯ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ. ನಮಗೆ ಶಾಶ್ವತ ಪರಿಹಾರ ಬೇಕು’ ಎಂಬುದು ರೈತರ ಆಗ್ರಹ.
‘ರೈತರು ಕಾಡಂಚಿನ ಜಮೀನಿನಲ್ಲಿ ಬೇಸಾಯ ಮಾಡಲು ಭಯದ ವಾತಾವರಣ ನಿರ್ಮಾಣವಾಗಿದೆ. ಚಿರತೆಗಳ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು’ ಎಂದು ಮೇಲುಕೋಟೆಯ ರೈತ ಮುಖಂಡ ವಿಜಯಕುಮಾರ್ ಒತ್ತಾಯಿಸಿದ್ದಾರೆ.
ರಾತ್ರಿ ವೇಳೆ ಮನೆಯ ಹೊರಗಡೆ ಜಾನುವಾರು ಕಟ್ಟಬಾರದು ಮತ್ತು ಮನೆಯ ಸುತ್ತ ಮಾಂಸದ ತ್ಯಾಜ್ಯ ಎಸೆಯಬಾರದು. ಚಿರತೆ ಸುಳಿವು ಸಿಕ್ಕ ತಕ್ಷಣ ಇಲಾಖೆಗೆ ಮಾಹಿತಿ ನೀಡಬೇಕು
– ರಘು ಡಿ. ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಡ್ಯ
ಮನುಷ್ಯರ ಮೇಲೂ ಚಿರತೆ ದಾಳಿ
ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟ ಗ್ರಾಮದ ಬಳಿ 2025ರ ಡಿಸೆಂಬರ್ 9ರಂದು ಬೈಕ್‌ನಲ್ಲಿ ತೆರಳುತ್ತಿದ್ದ ಯುವಕ ಕಿರಣ್ ಮೇಲೆ ಚಿರತೆಯೊಂದು ದಾಳಿ ನಡೆಸಿತ್ತು. ಮುಖ ಕೈಕಾಲು ಭಾಗದಲ್ಲಿ ಗಾಯಗಳಾಗಿದ್ದವು. ಅಕ್ಟೋಬರ್ 8ರಂದು ಮಂಡ್ಯ ತಾಲ್ಲೂಕಿನ ಗೊರವಾಲೆ ಗ್ರಾಮದ ಸಮೀಪ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತಿರುಮಲೆ (60) ಅವರ ಮೇಲೆ ಚಿರತೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿತ್ತು. 2025ರ ಜುಲೈ 25ರಂದು ಸಂತೇಬಾಚಹಳ್ಳಿ ಸಮೀಪದ ಮಾಳಗೂರು ಗ್ರಾಮದಲ್ಲಿ ಸಂತೇಬಾಚಹಳ್ಳಿ ಹೋಬಳಿಯ ಮಾಳಗೂರು ಗ್ರಾಮದ ರೈತ ಶಿವರಾಮೇಗೌಡ ಅವರ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿತ್ತು. ಜನವರಿ 21ರಂದು ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಲೆಮಹದೇಶ್ವರ ಅರಣ್ಯವಲಯದ ತಾಳುಬೆಟ್ಟದ ಬಳಿ ನಡೆದ ಚಿರತೆ ದಾಳಿಯಿಂದ ಮಂಡ್ಯ ತಾಲ್ಲೂಕಿನ ಚೀರನಹಳ್ಳಿ ಗ್ರಾಮದ ನಿವಾಸಿ ಪ್ರವೀಣ್ (33) ಮೃತಪಟ್ಟಿದ್ದರು.
ಪ್ರಸಕ್ತ ವರ್ಷದ ಚಿರತೆ ದಾಳಿ ವಿವರ
ಜ.2: ಮಳವಳ್ಳಿ ತಾಲ್ಲೂಕಿನ ಗಾಜನೂರು ಗ್ರಾಮದಲ್ಲಿ ಗುರುವಾರ ಚಿರತೆ ದಾಳಿ ಮಾಡಿ ಮೇಕೆಯನ್ನು ಕೊಂದು ಹಾಕಿದೆ ಜ.15: ಭಾರತೀನಗರ ಸಮೀಪದ ಬಿದರಹೊಸಹಳ್ಳಿಯಲ್ಲಿ ಚಿರತೆ ದಾಳಿಗೆ ಮೇಕೆಯೊಂದು ಬಲಿಯಾಗಿದೆ ಜ.16: ಮದ್ದೂರು ತಾಲ್ಲೂಕಿನ ಕೆ. ಹೊನ್ನಲಗೆರೆಯ ಎಲೆದೊಡ್ಡಿ ಗ್ರಾಮದಲ್ಲಿ ಚಿರತೆ ದಾಳಿ ಮಾಡಿ ಕರುವನ್ನು ತಿಂದು ಹಾಕಿದೆ ಜ.23: ಭಾರತೀನಗರ ಸಮೀಪದ ಮೆಣಸಗೆರೆ ಬಳಿ ಚಿರತೆ ದಾಳಿ ನಡೆಸಿ ಮೇಕೆಯೊಂದು ಮೃತಪಟ್ಟಿದೆ ಜ.28: ಬೆಳಕವಾಡಿ ಸಮೀಪದ ದಾಸನದೊಡ್ಡಿ ಗ್ರಾಮದಲ್ಲಿ ಸಾಕುನಾಯಿ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ ಜ.29: ಬೆಳಕವಾಡಿ ಸಮೀಪದ ಸೂರ್ಕಳ್ಳಿ ಗ್ರಾಮದಲ್ಲಿ ಎರಡು ಚಿರತೆಗಳು ದಾಳಿ ಮಾಡಿ ಎರಡು ಮೇಕೆಗಳನ್ನು ಕೊಂದು ಎಳೆದುಕೊಂಡು ಹೋಗಿವೆ
10 ಬೋನುಗಳಿಗೆ ಬೇಡಿಕೆ
ಮಂಡ್ಯ ಜಿಲ್ಲೆಯ ಅರಣ್ಯ ಇಲಾಖೆಯಲ್ಲಿ ಪ್ರಸ್ತುತ 42 ಬೋನುಗಳಿದ್ದು ಅವುಗಳಲ್ಲಿ 35 ಸುಸ್ಥಿತಿಯಲ್ಲಿದ್ದು 7 ಬೋನುಗಳನ್ನು ರಿಪೇರಿ ಮಾಡಿಸಬೇಕಿದೆ. ಚಿರತೆ ಹಾವಳಿ ಮಿತಿ ಮೀರಿರುವ ಕಾರಣ ಅವುಗಳನ್ನು ಸೆರೆ ಹಿಡಿಯಲು ಹೆಚ್ಚುವರಿಯಾಗಿ 10 ಬೋನುಗಳಿಗೆ ಕೇಂದ್ರ ಕಚೇರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಚಿರತೆ ಹಾವಳಿ ತಡೆಗಟ್ಟಲು ಮೈಸೂರು ವೃತ್ತದಲ್ಲಿ ‘ಚಿರತೆ ಕಾರ್ಯಪಡೆ ಘಟಕ’ವಿದೆ. ಮಂಡ್ಯ ಜಿಲ್ಲೆಗೆ ಪ್ರತ್ಯೇಕ ಕಾರ್ಯಪಡೆ ಅಗತ್ಯವಿದೆ. ಮಂಡ್ಯ ಜಿಲ್ಲೆಗೆ ಮಂಜೂರಾಗಿರುವ 168 ಹುದ್ದೆಗಳಲ್ಲಿ 69 ಹುದ್ದೆಗಳು ಖಾಲಿಯಿವೆ. ಕಾರ್ಯಪಡೆ ಮಂಜೂರಾದರೆ ಹೆಚ್ಚುವರಿ ಸಿಬ್ಬಂದಿ ದೊರೆತು ತ್ವರಿತಗತಿಯಲ್ಲಿ ಕಾರ್ಯಾಚರಣೆ ನಡೆಸಲು ಅನುಕೂಲವಾಗುತ್ತದೆ ಎನ್ನುತ್ತಾರೆ ವಲಯ ಅರಣ್ಯ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.