
ಮೇಲುಕೋಟೆ ಸಮೀಪದ ಗುಜ್ಜಗೋನಹಳ್ಳಿಗೆ ಭೇಟಿ ನೀಡಿದ ತಹಶೀಲ್ದಾರ್ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು
ಮೇಲುಕೋಟೆ: ಅರಣ್ಯಪ್ರದೇಶದ ಅಂಚಿನ ಗ್ರಾಮಗಳಲ್ಲಿ ಸಾಕುಪ್ರಾಣಿಗಳ ಮೇಲೆ ಚಿರತೆ ನಿರಂತರ ದಾಳಿ ಮಾಡುತ್ತಿದ್ದು, ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಮೀಪದ ವಿವಿಧ ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಹೋಬಳಿಯ ಗುಜ್ಜಗೊನಹಳ್ಳಿ, ಪಗಡೆಕಲ್ಲಹಳ್ಳಿ, ತಾಳೆಕೆರೆ, ಅಂದನಗೋಡನಕೊಪ್ಪಲು, ರಾಮಪುರ, ಬಳ್ಳಿಘಟ್ಟ, ಮದೇನಹಳ್ಳಿ, ನಾಣಾಪುರ, ಕೊಡಗಹಳ್ಳಿ, ಮೇಲುಕೋಟೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನಿತ್ಯ ಚಿರತೆ ದಾಳಿಗಳಿಗೆ ಸಾಕು ಪ್ರಾಣಿಗಳು ಬಲಿಯಾಗುತ್ತಿವೆ. ರೈತರು ಕಾಡಂಚಿನ ಜಮೀನಿನಲ್ಲಿ ಬೇಸಾಯ ಮಾಡಲು ಭಯದ ವಾತಾವರಣ ನಿರ್ಮಾಣವಾಗಿದೆ. ಚಿರತೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಬಂದ ಪಾಂಡವಪುರ ತಹಶೀಲ್ದಾರ್ ಬಸವರಡ್ಡೆಪ್ಪ ರೋಣ, ಕಾಡಂಚಿನ ಗ್ರಾಮಗಳಲ್ಲಿ ಚಿರತೆ ದಾಳಿಯಿಂದ ಸಾಕುಪ್ರಾಣಿಗಳನ್ನು ಕಳೆದುಕೊಂಡ ರೈತರು ಸರ್ಕಾರದಿಂದ ಹೇಗೆ ಪರಿಹಾರ ಪಡೆಯಬಹುದು ಎಂಬ ಮಾಹಿತಿ ನೀಡಿದರು. ಪರಿಹಾರ ವಿಳಂಬದ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿ ಪ್ರಶಾಂತ್‌ಗೆ ತಹಶೀಲ್ದಾರ್ ಸೂಚಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ವಿಜಯಕುಮಾರ್, ರೈತ ಕೃಷ್ಣೇಗೌಡ, ವಿಎ ರಮೇಶ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.