ADVERTISEMENT

ಕೆಆರ್‌ಎಸ್ ಬೃಂದಾವನದಲ್ಲಿ ಚಿರತೆ ಪ್ರತ್ಯಕ್ಷ: ಭಯಭೀತರಾದ ಪ್ರವಾಸಿಗರು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 8:33 IST
Last Updated 7 ನವೆಂಬರ್ 2022, 8:33 IST
ಕೆಆರ್‌ಎಸ್ ಬೃಂದಾವನ
ಕೆಆರ್‌ಎಸ್ ಬೃಂದಾವನ   

ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ ಎಸ್ ಬೃಂದಾವನದಲ್ಲಿ ಭಾನುವಾರ ಸಂಜೆ ಚಿರತೆ ಕಾಣಿಸಿಕೊಂಡ ಕಾರಣ ಪ್ರವಾಸಿಗರು ಕೆಲಕಾಲ ಭಯಭೀತರಾದರು.

ಸಂಜೆ 6 ಗಂಟೆ ಸಮಯದಲ್ಲಿ ಬೃಂದಾವನ ಉದ್ಯಾನದಲ್ಲಿ ಸಾವಿರಾರು ಪ್ರವಾಸಿಗರು ಇದ್ದರು. ಮೀನುಗಾರಿಕಾ ಇಲಾಖೆಯ ಅಕ್ವೇರಿಯಂ ಬಳಿಯ ರಾಯಲ್ ಆರ್ಕಿಡ್ ಹೋಟೆಲ್ ಕಡೆ ಚಿರತೆ ಹೋಗುತ್ತಿರುವುದು ಭದ್ರತಾ ಸಿಬ್ಬಂಂದಿಯ ಕಣ್ಣಿಗೆ ಬಿದ್ದಿದೆ.

ತಕ್ಷಣ ಜಾಗೃತರಾದ ಭದ್ರತಾ ಸಿಬ್ಬಂದಿ ಪ್ರವಾಸಿಗರನ್ನು ಬೃಂದಾವನದಿಂದ‌ ಹೊರಗೆ ಕಳುಹಿಸಿದ್ದಾರೆ.

ADVERTISEMENT

ಸದ್ಯ ಬೃಂದಾವನಕ್ಕೆ ಪ್ರವಾಸಿಗರ ಪ್ರವೇಶವನ್ನು‌ ನಿರ್ಬಂಧಿಸಲಾಗಿದೆ.

15 ದಿನಗಳ ಅಂತರದಲ್ಲಿ ಕೆ ಆರ್ ಎಸ್ ಬೃಂದಾವನದಲ್ಲಿ ಮೂರು‌ ಬಾರಿ ಚಿರತೆ ಕಾಣಿಸಿಕೊಂಡಿದೆ. ಎರಡು ಕಡೆ ಬೋನು ಇರಿಸಿದ್ದರೂ ಅದು ಬೋನಿಗೆ ಬೀಳುತ್ತಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಓಡಿದ ಪ್ರವಾಸಿಗರು: ಚಿರತೆ ಇರುವುದು ಗೊತ್ತಾದ ಹಿನ್ನೆಲೆಯಲ್ಲಿ ಕೆಲ ಪ್ರವಾಸಿಗರು ಭಯದಿಂದ ಬೃಂದಾವನದಿಂದ ಹೊರಗೆ ಓಡಿ ಹೋಗಿದ್ದಾರೆ. ಮಕ್ಕಳು, ಮಹಿಳೆಯರು ಚೀರುತ್ತಾ ಓಡಿ ಹೋಗುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಅಧಿಕಾರಿಗಳ ವಿರುದ್ಧ ಆಕ್ರೋಶ; 15 ದಿನಗಳ ಹಿಂದೆಯೇ ಬೃಂದಾವನದಲ್ಲಿ ಚಿರತೆ ಇರುವುದು ಗೊತ್ತಿದ್ದರೂ ಬೃಂದಾವನ ಬಂದ್ ಮಾಡದಿರುವುದಕ್ಕೆ ಪ್ರವಾಸಿಗರಿಂದ ಆಕ್ರೋಶ ವ್ಯಕ್ತವಾಗಿದೆ.

'ಹೊರಜಿಲ್ಲೆ, ಹೊರರಾಜ್ಯಗಳ ಲಕ್ಷಾಂತರ ಪ್ರವಾಸಿಗರು ಕೆಆರ್ ಎಸ್ ಗೆ ಭೇಟಿ ನೀಡುತ್ತಾರೆ. ಹಿಂದೆಯೇ ಚಿರತೆ ಕಾಣಿಸಿಕೊಂಡಿದ್ದರೂ ಅದನ್ನು ಮುಚ್ಚಿಟ್ಟು ಪ್ರವಾಸಿಗರಿಗೆ ಪ್ರವೇಶ ನೀಡಲಾಗಿದೆ' ಎಂದು ಪ್ರವಾಸಿಗರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.