ಭಾರತೀನಗರ: ಸಮೀಪದ ಅಣ್ಣೂರು ಗ್ರಾಮದ ಹೊರವಲಯದ ಗದ್ದೆ ಬಯಲು ಪ್ರದೇಶಗಳಲ್ಲಿ ಎರಡು ಕಡೆಗಳಲ್ಲಿ ಚಿರತೆಗಳು ಪ್ರತ್ಯಕ್ಷವಾಗಿದ್ದು, ಗ್ರಾಮದ ಜನತೆ ಭಯಭೀತರಾಗಿದ್ದಾರೆ.
ಗ್ರಾಮದ ಮೂಡಚೆರಿ ರಸ್ತೆಯಲ್ಲಿ ತಾಯಿ ಚಿರತೆ, ಎರಡು ಮರಿ ಚಿರತೆಗಳು, ವಿ.ಸಿ.ನಾಲಾ ಬಯಲು ಪ್ರದೇಶ ಸಮೀಪದ ಬಾವಿ ಅಗ್ಗಿನ ರಸ್ತೆಯಲ್ಲಿ ಮತ್ತೊಂದು ಚಿರತೆ ಜನರ ಕಣ್ಣಿಗೆ ಕಾಣಿಸಿಕೊಂಡಿದೆ. ಎರಡೂ ಕಡೆಗಳಲ್ಲಿಯೂ ಚಿರತೆಗಳು ಮೇಕೆಗಳು, ನಾಯಿಗಳನ್ನು ಹಿಡಿದು ತಿಂದಿವೆ.
ಬಾವಿ ಅಗ್ಗು ರಸ್ತೆಯಲ್ಲಿ ಗುಡ್ಡಪ್ಪ ಪ್ರಕಾಶ್ ಅವರಿಗೆ ಸೇರಿದ ಎರಡು ನಾಯಿಗಳನ್ನು ಚಿರತೆ ಹೊತ್ತೊಯ್ದು ಬೋಳೇಗೌಡರ ರಾಮಕೃಷ್ಣ ಎಂಬುವವರ ಜಮೀನಿನಲ್ಲಿ ತಿಂದು ಹಾಕಿವೆ. ಮೂಡಚೆರಿ ರಸ್ತೆಯಲ್ಲಿ ಮಿಲ್ಲಿನ ಮನೆ ಪುಟ್ಟರಾಜು ಎಂಬುವರ ಜಮೀನಿನಲ್ಲಿ ನಾಯಿಯನ್ನು ಕೊಂದು ತಿಂದು ಹಾಕಿವೆ. ಇಲ್ಲಿ ಪುಟ್ಟೇಗೌಡರ ತಮ್ಮೇಗೌಡ ಎಂಬುವವರ ಮಾವಿನ ಮರದ ಮೇಲೆ ಚಿರತೆ ಮರಿಗಳ ಸಮೇತ ಹಲವರಿಗೆ ಕಾಣಿಸಿಕೊಂಡಿದೆ.
ಈ ವಿಚಾರ ತಿಳಿದ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮುರುಳಿ ಅವರು ಸಿಬ್ಬಂದಿಯೊಡನೆ ಬಂದು ಸ್ಥಳ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು, ರೈತರು ಬೆಳಿಗಿನ ಸಮಯ, ಸಾಯಂಕಾಲದ ನಂತರ ಜಮೀನುಗಳಿಗೆ ಹೋಗುವುದನ್ನು ನಿಲ್ಲಿಸಬೇಕು. ಮರಿಗಳಿರುವುದರಿಂದ ತಾಯಿ ಚಿರತೆ ಸಾಕಷ್ಟು ಉದ್ರಿಕ್ತವಾಗಿರುತ್ತದೆ. ಒಂದು ವೇಳೆ ಹೋಗಲೇಬೇಕಾದ ಅನಿವಾರ್ಯ ಸಂದರ್ಭವಿದ್ದಲ್ಲಿ ಪಟಾಕಿಗಳನ್ನು ಸಿಡಿಸಿ ಹೋಗಬಹುದು.
‘ಸದ್ಯಕ್ಕೆ ಮಳೆ ಬಿದ್ದಿರುವುದರಿಂದ ಬೋನನ್ನು ತಂದು ಇಡಲು ಸಾಧ್ಯವಾಗುತ್ತಿಲ್ಲ. ಮಳೆ ಒಂದು ದಿನ ಇಲ್ಲದಿದ್ದಲ್ಲಿ ಬೋನನ್ನು ತಂದು ಗ್ರಾಮಸ್ಥರು ಹೇಳಿದ ಕಡೆಗೆ ಇಡಲಾಗುತ್ತದೆ. ಅಲ್ಲಿಯವರೆಗೆ ಗ್ರಾಮಸ್ಥರು ಸಹಕರಿಸಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.