ADVERTISEMENT

ಲೈಬ್ರರಿ ಸೋಮಣ್ಣನ ಬಣ್ಣದ ಗೀಳು!

ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕಗಳಲ್ಲಿ ಅಭಿನಯ

ಗಣಂಗೂರು ನಂಜೇಗೌಡ
Published 6 ಮಾರ್ಚ್ 2021, 19:45 IST
Last Updated 6 ಮಾರ್ಚ್ 2021, 19:45 IST
‘ಹರಹಂತ’ ನಾಟಕದಲ್ಲಿ ಸಾಗರಸೇನ ಪಾತ್ರಧಾರಿ ಸೋಮಶೇಖರ್‌ (ಬಲದಿಂದ ಮೊದಲನೆಯವರು)
‘ಹರಹಂತ’ ನಾಟಕದಲ್ಲಿ ಸಾಗರಸೇನ ಪಾತ್ರಧಾರಿ ಸೋಮಶೇಖರ್‌ (ಬಲದಿಂದ ಮೊದಲನೆಯವರು)   

ಶ್ರೀರಂಗಪಟ್ಟಣ: ತಾಲ್ಲೂಕಿನ ಕೂಡಲಕುಪ್ಪೆ ಗ್ರಾಮದ ಸೋಮಶೇಖರ್‌ (ಸೋಮಣ್ಣ) ರಂಗಕಲೆ ಬಗ್ಗೆ ಅತೀವ ಒಲವು ಹೊಂದಿದ್ದು, ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕಗಳಿಗೆ ಬಣ್ಣ ಹಚ್ಚಿದ್ದಾರೆ.

ಸ್ವಗ್ರಾಮ ಕೂಡಲಕುಪ್ಪೆ ಮಾತ್ರವಲ್ಲದೆ ಮೈಸೂರು, ಮಂಡ್ಯ, ಬೆಂಗಳೂರು ನಗರಗಳಲ್ಲಿ ಪ್ರದರ್ಶನ ಕಂಡಿರುವ ಹತ್ತಾರು ನಾಟಕಗಳಲ್ಲಿ ಸೋಮಶೇಖರ್‌ ಅಭಿನಯಿಸಿದ್ದಾರೆ. ಒಂದೂವರೆ ದಶಕದಿಂದ ನಾಟಕ ಅಭಿನಯದಲ್ಲಿ ತೊಡಗಿಕೊಂಡಿರುವ ಸೋಮಶೇಖರ್‌ ತಿಂಗಳು, ಎರಡು ತಿಂಗಳಿಗೊಮ್ಮೆ ಬಣ್ಣ ಹಚ್ಚುವುದುಂಟು. ತಮ್ಮೂರಿನ ಆಸುಪಾಸಿನ ಯಾವುದೇ ಹಳ್ಳಿಯಲ್ಲಿ ನಾಟಕ ಪ್ರದರ್ಶನ ಇದ್ದರೂ ಅಲ್ಲಿ ಸೋಮಶೇಖರ್ ಹಾಜರಿರುತ್ತಾರೆ.

ತಾಲ್ಲೂಕಿನ ಬಲ್ಲೇನಹಳ್ಳಿ ಗ್ರಾ.ಪಂ. ಗ್ರಂಥಾಲಯದ ಮೇಲ್ವಿಚಾರಕರಾಗಿರುವ ಸೋಮಶೇಖರ್‌, ‘ಲೈಬ್ರರಿ ಸೋಮಶೇಖರ್‌’ ಎಂದೇ ಪ್ರಸಿದ್ಧರು. ಶ್ರೀಕೃಷ್ಣ ರಾಯಭಾರ ನಾಟಕದಲ್ಲಿ ದುಶ್ಯಾಸನ, ಅಹಿರಾವಣ– ಮಹಿರಾವಣದಲ್ಲಿ ಅಂಗದ, ಕುರುಕ್ಷೇತ್ರದಲ್ಲಿ ಶ್ರೀ ಕೃಷ್ಣ, ರಾಮಾಯಣದಲ್ಲಿ ಜಾಂಬವಂತ– ಹೀಗೆ ವಿಭಿನ್ನ ಪಾತ್ರ ಮಾಡುತ್ತಾ ತಮ್ಮ ಪ್ರತಿಭೆಯನ್ನು ಪ್ರಕಾಶಪಡಿಸಿದ್ದಾರೆ. ವಿದುರ, ವಿದೂಷಕ ಪಾತ್ರವಾದರೂ ಅದಕ್ಕೆ ಜೀವ ತುಂಬಿ, ಪರಾಕಾಯ ಪ್ರವೇಶ ಮಾಡಿ ಅಭಿನಯಿಸುವ ಕಲೆ ಇವರಿಗೆ ಕರಗತವಾಗಿದೆ.

ADVERTISEMENT

ಗಣಪತಿಗೌಡ ನಿರ್ದೇಶನದ ‘ಹುಲಿಯ ನೆರಳು’ ನಾಟಕದಲ್ಲಿ ಕರಿಯಜ್ಜ, ತಿಪಟೂರು ನಟರಾಜ ನಿರ್ದೇಶನದ ‘ತಲೆದಂಡ‘ ನಾಟಕದಲ್ಲಿ ಪೂಜಾರಿ, ಕ್ಯಾತನಹಳ್ಳಿ ರಂಗನಾಥ್‌ ನಿರ್ದೇಶನದ ‘ಮೂರ್‌ ಕಾ‘ ನಾಟಕದಲ್ಲಿ ಬ್ಯಾಂಕ್‌ ಮ್ಯಾನೇಜರ್‌, ಗೌಡಸಾನಿ ನಾಟಕದಲ್ಲಿ ‘ಗೌಡ’, ಗಣಪತಿಗೌಡ ಹೊನ್ನಾವರ ನಿರ್ದೇಶನದ ‘ಕುದುರೆ ಮೊಟ್ಟೆ’ ನಾಟಕದಲ್ಲಿ ಸೀನ, ‘ಮಲೆ ಮಹದೇಶ್ವರ’ ನಾಟಕದಲ್ಲಿ ಡಂಗೂರಗಾರ ಇತರ ಪಾತ್ರಗಳಲ್ಲಿ ಯಶಸ್ವಿಯಾಗಿ ಅಭಿನಯಿಸಿ ಬೆನ್ನು ತಟ್ಟಿಸಿಕೊಂಡಿದ್ದಾರೆ.

ಬೆಳ್ಳಿತೆರೆಯ ನಂಟು

ಚಂದನ ವಾಹಿನಿಯಲ್ಲಿ ಬಿತ್ತರಗೊಂಡ ‘ಕೊಳವೆ ಬಾವಿ’ ಸಾಕ್ಷ್ಯಚಿತ್ರದಲ್ಲಿ ಮೂಗನ ಪಾತ್ರ ನಿರ್ವಹಿಸಿದ್ದಾರೆ. ಈಚೆಗೆ ತೆರೆಕಂಡ ‘ಸೈನೆಡ್‌ ಮಲ್ಲಿಕಾ’ ಚಲನಚಿತ್ರದಲ್ಲಿ ವಕೀಲನ ಪಾತ್ರ ಮಾಡಿದ್ದಾರೆ. ‘ನನಗಿಷ್ಟ’ ಚಿತ್ರದಲ್ಲೂ ಕಾವಲುಗಾರ ಪಾತ್ರ ಮಾಡಿದ್ದಾರೆ. ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸಲು ವಿವಿಧ ಇಲಾಖೆಗಳ ಸಹಯೋಗದಲ್ಲಿ ರಾಜ್ಯದಾದ್ಯಂತ ಬೀದಿ ನಾಟಕಗಳಲ್ಲಿ ಬಗೆ ಬಗೆಯ ಪಾತ್ರ ನಿರ್ವಹಿಸಿದ್ದಾರೆ. ಅಂದಹಾಗೆ, ಇವರು ಮಿಮಿಕ್ರಿ ಕಲಾವಿದರೂ ಹೌದು!

‘ಶಾಲೆಯಲ್ಲಿದ್ದಾಗ ಮೇಷ್ಟ್ರು ಕಲಿಸುತ್ತಿದ್ದ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಕಾಲೇಜು ಹತ್ತಿದ ನಂತರ ನಾಟಕದ ಗೀಳು ಹೆಚ್ಚಾಯಿತು. ಹಾರ್ಮೋನಿಯಂ, ತಬಲ, ಕೊಳಲು ಸದ್ದು ಕೇಳಿದರೆ ಮೈ ನವಿರೇಳುತ್ತದೆ. ಎದೆಯಾಳದಿಂದ ಮಟ್ಟುಗಳು ನುಗ್ಗಿ ಬರುತ್ತವೆ. ಅನ್ನವಿಲ್ಲದೆ ಇರಬಲ್ಲೆ; ಬಣ್ಣ ಹಚ್ಚದೆ ಇರಲಾರೆ’ ಎಂದು ರಂಗ ಕಲೆಯ ಬಗ್ಗೆ ತಮಗಿರುವ ಅದಮ್ಯ ಪ್ರೀತಿಯನ್ನು ಸೋಮಶೇಖರ್‌ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.