ADVERTISEMENT

ಶ್ರೀರಂಗಪಟ್ಟಣ: ದಿನದ ಊಟಕ್ಕೆ ಪರಿತಪಿಸುತ್ತಿರುವ ಕೂಲಿ ನಂಬಿದ ಕುಟುಂಬಗಳು

ಲಾಕ್‌ಡೌನ್ ಪರಿಣಾಮ

ಗಣಂಗೂರು ನಂಜೇಗೌಡ
Published 13 ಏಪ್ರಿಲ್ 2020, 19:30 IST
Last Updated 13 ಏಪ್ರಿಲ್ 2020, 19:30 IST
ಶ್ರೀರಂಗಪಟ್ಟಣ ತಾಲ್ಲೂಕು ಬೊಮ್ಮೂರು ಅಗ್ರಹಾರ ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ವಾಸವಿರುವ ಹಿಂದುಳಿದ ಯಳವರು
ಶ್ರೀರಂಗಪಟ್ಟಣ ತಾಲ್ಲೂಕು ಬೊಮ್ಮೂರು ಅಗ್ರಹಾರ ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ವಾಸವಿರುವ ಹಿಂದುಳಿದ ಯಳವರು   

ಶ್ರೀರಂಗಪಟ್ಟಣ: ಕೊರೊನಾ ವೈರಸ್‌ ಭೀತಿ ಕೂಲಿಕಾರರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತಹ ಸ್ಥಿತಿಯನ್ನು ತಂದೊಡ್ಡಿದೆ.

ತಾಲ್ಲೂಕಿನ ಬೊಮ್ಮೂರು ಅಗ್ರಹಾರಕ್ಕೆ ಕೂಲಿ ನಾಲಿ ಅರಸಿಕೊಂಡು ಮೂರು ದಶಕಗಳ ಹಿಂದೆ ಬಂದ ಯಳವರು ಮತ್ತು ಉಪ್ಪಾರರು ಸದ್ಯ ದಿನಗೂಲಿ ಹುಟ್ಟದೆ ಕಡು ಕಷ್ಟಕ್ಕೆ ಸಿಲುಕಿದ್ದಾರೆ. ಕಟ್ಟಡ ನಿರ್ಮಾಣ, ಸಣ್ಣ ವ್ಯಾಪಾರ, ಕೃಷಿ ಕೂಲಿಯನ್ನು ನೆಚ್ಚಿಕೊಂಡಿದ್ದ ಇವರು ಊರೊಳಗೆ ಬಂಧಿಯಾಗಿದ್ದಾರೆ; ಕಿರು ಮನೆಗಳಲ್ಲಿ ದಿನದೂಡುತ್ತಿದ್ದಾರೆ.

ಈ ಊರಿನಲ್ಲಿ ಯಳವರು ಮತ್ತು ಉಪ್ಪಾರರ 50ಕ್ಕೂ ಹೆಚ್ಚು ಕುಟುಂಬಗಳಿವೆ. ಕೃಷಿ ಭೂಮಿ ಇಲ್ಲದ ಇವರು ನಿತ್ಯದ ದುಡಿಮೆಯನ್ನೇ ನೆಚ್ಚಿ ಬದುಕುವವರು. ಸದ್ಯ ಯಾರೂ ಇವರನ್ನು ಕೆಲಸಕ್ಕೆ ಕರೆಯುತ್ತಿಲ್ಲ. ಊರಿನಿಂದ ಹೊರಗೆ ಹೋಗಲು ಅವಕಾಶವೂ ಇಲ್ಲ. ಈ ಪುಟ್ಟ ಗ್ರಾಮದಲ್ಲಿ ದಿನ ಬಳಕೆಯ ವಸ್ತುಗಳು ಕೂಡ ಸಿಗದೆ ಪರದಾಟ ಶುರುವಾಗಿದೆ. ಆಸ್ಪತ್ರೆ, ಊಟ, ಬಟ್ಟೆ, ಮಕ್ಕಳ ಶಾಲೆ, ಮದುವೆಗೆ ಮಾಡಿದ ಸಾಲದ ಕಂತು ದಿನದಿಂದ ದಿನಕ್ಕೆ ದಪ್ಪವಾಗುತ್ತಿದೆ.

ADVERTISEMENT

‘ನಾವು ನಂಜನಗೂಡು ತಾಲ್ಲೂಕು ಅರಗನಪುರ ಕಡೆಯಿಂದ 35 ವರ್ಷಗಳ ಹಿಂದೆ ಕೂಲಿ ಹುಡುಕಿಕೊಂಡು ಇತ್ತ ಬಂದವರು. ದುಡಿದ ದುಡ್ಡಿನಲ್ಲಿ ಸಣ್ಣ ಸಣ್ಣ ಮನೆ ಕಟ್ಟಿಕೊಂಡು ಮಕ್ಕಳು, ಮರಿಯೊಡನೆ ವಾಸ ಮಾಡುತ್ತಿದ್ದೇವೆ. ನಾವಿರುವ ಮನೆ ಕೂಡ ನಮ್ಮ ಹೆಸರಿನಲ್ಲಿ ಇಲ್ಲ. ಖಾತೆ, ಕಿರ್ದಿ ಮಾಡಿಕೊಟ್ಟಿಲ್ಲ. ಉಳಲು ಭೂಮಿಯೂ ಇಲ್ಲ. ಒಬ್ಬಿಬ್ಬರು ಪರವಾಯಿಲ್ಲವಾದರೂ ಉಳಿದ 40 ಕುಟುಂಬಕ್ಕೆ ಕೂಲಿಯೇ ಗತಿ’ ಎಂದು ಯಳವರ ಗುಂಪಿನ ಹಿರಿಯ ಮಾದು ಸಮಸ್ಯೆ ಬಿಚ್ಚಿಡುತ್ತಾರೆ.

‘ಇಪ್ಪತ್ತು ದಿನಗಳಿಂದ ಕೂಲಿ ಹುಟ್ಟದೆ ಹಿಟ್ಟು– ಬಟ್ಟೆಗೆ ಹೆಂಗೆ ಅನ್ನುವಂಗಾಗದೆ. ಯಾರೂ ನಮ್ಮ ಕಷ್ಟ ಕೇಳುತ್ತಿಲ್ಲ’ ಎಂದು ಉಪ್ಪಾರರ ಸುಬ್ಬಮ್ಮ ದುಃಖ ತೋಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.