ಮದ್ದೂರು: ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಶಿಕ್ಷಣ ಅಗತ್ಯ ಎಂದು ಕರ್ನಾಟಕ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಗುರುವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದೆ ಬರುತ್ತಿದ್ದು, ಹೆಣ್ಣು ಸಂಸಾರದ ಕಣ್ಣಂತೆಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಮಹಿಳೆಯರ ಹಕ್ಕಿನ ಉಲ್ಲಂಘನೆಯಾಗಬಾರದು, ವೃತ್ತಿ ಸೇರಿದಂತೆ ಯಾವುದರಲ್ಲೂ ತಾರತಮ್ಯ ಇರಬಾರದು’ ಎಂದರು.
‘ಜಿಲ್ಲೆಯಲ್ಲಿ ಕಳೆದ ವರ್ಷ ಆಲೆಮನೆಯಲ್ಲಿ ತಲೆತಗ್ಗಿಸುವಂತಹ ಹೆಣ್ಣುಭ್ರೂಣ ಹತ್ಯೆ ಪ್ರಕರಣ ನಡೆದಿತ್ತು, ಈ ಪ್ರಕರಣಗಳು ನಡೆಯದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು, ಇದರಿಂದ ಹೆಣ್ಣಿನ ಅನುಪಾತ ಕಡಿಮೆಯಾಗಿರುವುದರಿಂದ ಪುರುಷರಿಗೆ ಮದುವೆಯಾಗಲು ಹೆಣ್ಣು ಸಿಗದೇ ಸಮಸ್ಯೆಯಾಗುತ್ತಿದೆ’ ಎಂದು ಬೇಸರವ್ಯಕ್ತಪಡಿಸಿದರು.
ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷೆ ಡಾ.ಮೀರಾಶಿವಲಿಂಗಯ್ಯ ಮಾತನಾಡಿ, ‘ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ಯಶಸ್ವಿಯಾಗುತ್ತಿದ್ದಾರೆ. ಉನ್ನತ ಸ್ಥಾನಗಳಲ್ಲಿ ಮಹಿಳೆ ಅದ್ವಿತೀಯ ಸಾಧನೆ ಮಾಡುತ್ತಿರುವುದು ಪ್ರಶಂಸನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಪಣ್ಣೆದೊಡ್ಡಿ ಹರ್ಷ ಮಾತನಾಡಿ, ‘ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡು ಯಶಸ್ವಿಯಾಗಿ ನಾಡಿಗೆ ಮತ್ತು ದೇಶಕ್ಕೆ ಕೀರ್ತಿ ತರುತ್ತಿರುವುದು ಹರ್ಷದ ವಿಷಯ’ ಎಂದರು.
ವಿವಿಧ ಕ್ಷೇತ್ರಗಳ ಸಾಧಕ ಮಹಿಳೆಯರನ್ನು ಅಭಿನಂದಿಸಲಾಯಿತು. ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಬಿ.ನಾರಾಯಣ, ಕಸಾಪ ಜಿಲ್ಲಾಧ್ಯಕ್ಷ ವಿ.ಹರ್ಷ, ನಿವೃತ್ತ ಉಪನ್ಯಾಸಕಿಯರಾದ ಶ್ರೀಲತಾ, ಸರ್ವಮಂಗಳ, ಕಸಾಪ ಗೌರವ ಕಾರ್ಯದರ್ಶಿ ಮಹದೇವಸ್ವಾಮಿ ಗಾಮನಹಳ್ಳಿ, ಗೌರವ ಕೋಶಾಧ್ಯಕ್ಷ ಬಿ.ಎಂ. ಅಪ್ಪಾಜಯ್ಯ, ಪದಾಧಿಕಾರಿಗಳಾದ ಸಿದ್ದಲಿಂಗ, ಈರಯ್ಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.