ADVERTISEMENT

ಕೇಂದ್ರ ಸಚಿವರಾಗಿ ಎಚ್‌ಡಿಕೆ ಸಾಧನೆಯೇನು: ಶಾಸಕ ಕೆ.ಎಂ.ಉದಯ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 5:47 IST
Last Updated 3 ಮಾರ್ಚ್ 2026, 5:47 IST
ಮದ್ದೂರು ನಗರದಲ್ಲಿ 4 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಂ. ಉದಯ್ ಸೋಮವಾರ ಭೂಮಿ ಪೂಜೆ ನೆರವೇರಿಸಿದರು. ಮಾಜಿ ಪುರಸಭಾ ಸದಸ್ಯರಾದ ಸರ್ವಮಂಗಳ, ತನುಜಾ, ವನಿತಾ ಪಾಲ್ಗೊಂಡಿದ್ದರು
ಮದ್ದೂರು ನಗರದಲ್ಲಿ 4 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಂ. ಉದಯ್ ಸೋಮವಾರ ಭೂಮಿ ಪೂಜೆ ನೆರವೇರಿಸಿದರು. ಮಾಜಿ ಪುರಸಭಾ ಸದಸ್ಯರಾದ ಸರ್ವಮಂಗಳ, ತನುಜಾ, ವನಿತಾ ಪಾಲ್ಗೊಂಡಿದ್ದರು   

ಮದ್ದೂರು: ‘ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ. ಜನರ ಒತ್ತಾಸೆಯಂತೆಯೇ ನಗರಸಭೆ ವ್ಯಾಪ್ತಿಗೆ ಗ್ರಾಮಗಳನ್ನು ಸೇರ್ಪಡೆ ಮಾಡಲಾಗಿದೆ. ಆದರೆ, ವಿರೋಧ ಪಕ್ಷಗಳ ಮುಖಂಡರು ಹಿಂದೆ ನಿಂತು ಪ್ರತಿಭಟನೆ ಮಾಡಿಸುತ್ತಿದ್ದಾರೆ’ ಎಂದು ಶಾಸಕ ಕೆ.ಎಂ. ಉದಯ ಹೇಳಿದರು. 

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ನನಗೆ ಸಚಿವನಾಗುವ ಆಸೆಯಿಲ್ಲ, ಶಾಸಕನಾಗಿ ಮುಂದುವರಿಯಬೇಕು ಎನ್ನುವುದಿಲ್ಲ. ಅಭಿವೃದ್ಧಿಯಷ್ಟೇ ಮುಖ್ಯ’ ಎಂದು ಹೇಳಿದರು. 

ಕೇಂದ್ರ ಸಚಿವರಾಗಿ ನಿಮ್ಮ ಸಾಧನೆ ಶೂನ್ಯವೆಂದ ಅವರು, ಎರಡು ವರ್ಷಗಳ ಅವಧಿಯಲ್ಲಿ ಸಿಎಸ್ಆರ್, ಎಂಪಿ ಅನುದಾನದಲ್ಲಿ ಬಸ್ ನಿಲ್ದಾಣ, ಆಟೊ ನಿಲ್ದಾಣ ಮಾಡಿರೋದೆ ಕೇಂದ್ರ ಸಚಿವರ ಸಾಧನೆಯೇ ಎಂದು ಪ್ರಶ್ನಿಸಿದ ಅವರು, ಲೋಕಸಭಾ ಸದಸ್ಯನಾದ 5 ನಿಮಿಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಚರ್ಚಿಸಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ ಎಂದು ಜಿಲ್ಲೆಯ ಜನತೆಗೆ ವಾಗ್ದಾನ ಕೊಟ್ಟಿದ್ದರು. ಇವರು ಮಾತಿಗೆ ನಿಲ್ಲುವವರೇ ಎಂದು ಪ್ರಶ್ನಿಸಿದರು.

ADVERTISEMENT

ಮಾತೆತ್ತಿದರೆ ಮಣ್ಣಿನ ಮಗ ಅಂತಾರೆ, ಎರಡು ಬಾರಿ ಸಿಎಂ ಆಗಿ ಜಿಲ್ಲೆಯ ಕೊನೆ ಭಾಗಕ್ಕೆ ಕೆಆರ್‌ಎಸ್‌ನಿಂದ ನೀರು ಹರಿಸಲು ಆಗಲಿಲ್ಲ. ನಾಲೆಗಳ ಆಧುನೀಕರಣ ಮಾಡಿದ್ರಾ, ರೈತರ ಸಮಸ್ಯೆಗಳಿಗೆ ಏನಾದ್ರೂ ಶಾಶ್ವತ ಕೊಡುಗೆ ಕೊಟ್ಟಿದ್ದೀರ? ಕೇವಲ ಭಾವನಾತ್ಮಕ ಮಾತುಗಳನ್ನಾಡಿ ಜನರನ್ನು ಮರಳು ಮಾಡುತ್ತಾ ಓಡಾಡುತ್ತಿದ್ದಾರೆ. ನಿಮ್ಮ ಬೂಟಾಟಿಕೆಯನ್ನು ಜನರು ನೋಡುತ್ತಿದ್ದಾರೆ ಎಂದರು.

ಈ ಹಿಂದೆ ಪಕ್ಷದ ನಿಷ್ಠಾವಂತ, ಮದ್ದೂರಿನ ದಿವಂಗತ ಎಂ.ಎಸ್. ಸಿದ್ದರಾಜು ಅವರಿಗೆ ಡಬಲ್ ಬಿ.ಫಾರಂ ನೀಡಿ ಸೋಲಿಸಿ ಮ್ಯಾಚ್ ಫಿಕ್ಸಿಂಗ್ ಮೂಲಕ ನಿಮ್ಮ ಬೀಗರನ್ನು ಗೆಲ್ಲಿಸಿಕೊಂಡಿರಿ ಎಂದ ಅವರು, ನಿಮ್ಮ ದೊಂಬರಾಟವನ್ನು ಕ್ಷೇತ್ರದ ಜನತೆ ಮರೆತಿಲ್ಲ ಎಂದು ಹೇಳಿದರು.

ಸಾವಿರಾರು ಕೋಟಿ ಹೇಗೆ ಬಂತು: ಮಾಜಿ ಶಾಸಕ ಹಾಗೂ ಸಚಿವರು ಮೊದಲು ಮದ್ದೂರು ನಗರದಲ್ಲಿ ಪಾದಯಾತ್ರೆ ಮಾಡಲಿ. ನಿಮ್ಮ ಆಡಳಿತದಲ್ಲಿ ನಡೆದಿರುವ ಕುಡಿಯುವ ನೀರು, ಒಳಚರಂಡಿ ಅವ್ಯವಸ್ಥೆ ಅವ್ಯವಹಾರಗಳ ಬಗ್ಗೆ ಜನರೇ ಹೇಳ್ತಾರೆ, ಈ ಬಗ್ಗೆ ನನ್ನ ಬಳಿ ಮಾಹಿತಿ ಇದ್ದು, ಅದನ್ನು ಜನರ ಬಳಿ ಇಡಬೇಕಾಗುತ್ತದೆ ಎಂದರು. ಹಳೇ ಪೈಪ್‌ಗೆ ಸಂಪರ್ಕ ನೀಡಿ ಕೋಟ್ಯಂತರ ರೂಪಾಯಿ ಬಿಲ್ ತೆಗೆದುಕೊಂಡಿರುವುದರಲ್ಲಿ ಇವರು ಪಾಲುದಾರರಾಗಿದ್ದಾರೆ ಎಂದು ಮಾಜಿ ಶಾಸಕ ಡಿ.ಸಿ. ತಮ್ಮಣ್ಣರ ವಿರುದ್ಧ ವಾಗ್ದಾಳಿ ನಡೆಸಿದರು. 

‘ಮದ್ದೂರು ತಾಲ್ಲೂಕಿನಲ್ಲಿ 70 ಎಕರೆ ಜಮೀನನ್ನು ಕೈಗಾರಿಕಾ ಪ್ರದೇಶಕ್ಕೆ ನೀಡುತ್ತೇನೆ, ತಾಕತ್ತಿದ್ದರೆ ಯಾವ ಕೈಗಾರಿಕೆ ತರುತ್ತಾರೆ ಎಂಬುದನ್ನು ಕುಮಾರಸ್ವಾಮಿ ಅವರು ಹೇಳಲಿ. ಅಭಿವೃದ್ಧಿ ಮಾಡೋಕು ಆಸಕ್ತಿ, ಛಲ, ರೈತರ ಕಷ್ಟ ಗೊತ್ತಿರಬೇಕು. ಬರೀ ಭಾಷಣ ಮಾಡೋದಲ್ಲ. ಜಿಲ್ಲೆಯ ಜನತೆಗೆ ಪ್ರಮಾಣಿಕವಾಗಿ ಕೆಲಸ ಮಾಡಲಿ’ ಎಂದು ಸಲಹೆ ನೀಡಿದರು.

ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಶಂಕರೇಗೌಡ, ಮುಖಂಡರಾದ ಕೆ.ಎಂ. ರವಿ, ಮಹಾಲಿಂಗಯ್ಯ, ವಿಜಯ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.