ADVERTISEMENT

ಮದ್ದೂರು ಗಲಭೆ ಬಳಿಕ ಸಭೆ| ಶಾಂತಿ ಕದಡಿದರೆ ನಿರ್ದಾಕ್ಷಿಣ್ಯ ಕ್ರಮ: ಚಲುವರಾಯಸ್ವಾಮಿ

ಶಾಂತಿ ಸಭೆ: ಮಂಡ್ಯ ಜಿಲ್ಲೆಗೆ ಕಳಂಕ ತಂದ ಕೋಮುಗಲಭೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 6:28 IST
Last Updated 10 ಸೆಪ್ಟೆಂಬರ್ 2025, 6:28 IST
ಮದ್ದೂರು ಪಟ್ಟಣದಲ್ಲಿ ಮಂಗಳವಾರ ನಡೆದ ಶಾಂತಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಮಾತನಾಡಿದರು  ಪ್ರಜಾವಾಣಿ ಚಿತ್ರ 
ಮದ್ದೂರು ಪಟ್ಟಣದಲ್ಲಿ ಮಂಗಳವಾರ ನಡೆದ ಶಾಂತಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಮಾತನಾಡಿದರು  ಪ್ರಜಾವಾಣಿ ಚಿತ್ರ    

ಮದ್ದೂರು: ‘ಕೋಮು ಗಲಭೆ ಚಿಕ್ಕದಾಗಿರಲಿ ದೊಡ್ಡದಾಗಿರಲಿ ಅದು ಜಿಲ್ಲೆಗೆ ಕಳಂಕ. ಮಂಡ್ಯ ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದ ಹಾಳು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಪೊಲೀಸರಿಗೆ ಸೂಚಿಸಿದ್ದೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದರು. 

ಮದ್ದೂರು ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸೆ.10ರಂದು ಮದ್ದೂರು ಪಟ್ಟಣದಲ್ಲಿ ನಡೆಯಲಿರುವ ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಶಾಂತಿಯುತವಾಗಿ ಭಾಗವಹಿಸಬೇಕು ಹಾಗೂ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಮಾಡಲಾಗಿದೆ ಎಂದರು.

ADVERTISEMENT

ಪೊಲೀಸ್ ಇಲಾಖೆ ವತಿಯಿಂದ ದೊಡ್ಡ, ದೊಡ್ಡ ಗಲಭೆಗಳನ್ನು ನಿಯಂತ್ರಿಸಲಾಗಿದೆ ಹಾಗೂ ಪಾರದರ್ಶಕವಾಗಿ ತನಿಖೆ ನಡೆಸಲಾಗಿದೆ. ಮದ್ದೂರು ತಾಲ್ಲೂಕಿನ ನಡೆದಿರುವ ಗಲಭೆಗೆ ಕಾರಣವಾಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಶಾಂತಿ ಕದಡುವ ಕಿಡಿಗೇಡಿಗಳು ನಿಮ್ಮ ಸುತ್ತಮುತ್ತಲೇ ಇರುತ್ತಾರೆ. ಸಾರ್ವಜನಿಕರು ಹಾಗೂ ಮುಖಂಡರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಎಂದು ಕಿವಿಮಾತು ಹೇಳಿದರು.

ಹಿಂದೂ, ಮುಸ್ಲಿಂ ಸಮುದಾಯದವರು ಸಮಾಜದಲ್ಲಿ ಒಟ್ಟಿಗೆ ಬಾಳಬೇಕು. ಕೆಲವು ಕಿಡಿಗೇಡಿಗಳು ನಡೆಸುವ ಕೃತ್ಯಕ್ಕೆ ಜೀವನ ನಡೆಸುವುದು ಕಷ್ಟಕರವಾಗಿರುತ್ತದೆ. ವಿವಿಧ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ನಡೆಯುವ ಮೆರವಣಿಗೆಗಳಲ್ಲಿ ತಾಳ್ಮೆಯಿಂದ ವರ್ತಿಸಿ ಎಂದರು.

ಸಭೆಯಲ್ಲಿ ಆಕ್ರೋಶ:

ಶಾಂತಿ ಸಭೆಯಲ್ಲಿ ಸ್ಥಳೀಯ ನಿವಾಸಿ ರಮೇಶ್ ಮಾತನಾಡಿ, ‘ಈ ಶಾಂತಿ ಸಭೆಗೆ ಸ್ಥಳೀಯರನ್ನೇ ಕರೆದಿಲ್ಲ. ಇಲ್ಲಿ ಬಂದಿರುವವರಿಗೆ ಅಲ್ಲಿ ನಡೆದಿರುವ ವಿಚಾರವೇ ಗೊತ್ತಿಲ್ಲ. ನಾವು ಸಹೋದರರ ರೀತಿಯಲ್ಲಿ ಬದುಕುತ್ತಿದ್ದೇವೆ. ತಪ್ಪಿತಸ್ಥರಿಗೆ ಸೂಕ್ತ ಕ್ರಮವಾಗಲಿ. ತಪ್ಪು ಮಾಡದವರ ವಿರುದ್ಧವೂ ಎಫ್‌ಐಆರ್‌ ಮಾಡಲಾಗಿದೆ. ತಪ್ಪು ಮಾಡಿದವರು ತಪ್ಪಿಸಿಕೊಂಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಮುಸ್ಲಿಂ ಮುಖಂಡ ಆಸೀಪ್ ಪಾಷ ಮಾತನಾಡಿ, ‘ಯಾರು ಕಿಡಿಗೇಡಿತನ ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಬೇಕು. ಘಟನೆಯ ಹಿಂದೆ ಯಾರಿದ್ದಾರೆ ಎಂಬುದನ್ನು ತನಿಖೆ ಮಾಡಬೇಕು. ಮದ್ದೂರು ಪಟ್ಟಣದಲ್ಲಿ ಗಾಂಜಾ ಮಾರಾಟ ಹೆಚ್ಚಾಗಿದೆ. ಇದರಿಂದಾಗಿಯೇ ಘಟನೆ ನಡೆದಿದೆ. ಈ ಬಗ್ಗೆ ತನಿಖೆ ಮಾಡಬೇಕು’ ಎಂದು ಒತ್ತಾಯಿಸಿದರು. 

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ.ಆರ್, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಿಡಿಗೇಡಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಸಾಮೂಹಿಕ ಗಣೇಶ ಮೂರ್ತಿ ವಿಸರ್ಜನೆ ಇಂದು  ಬಿಜೆಪಿ ನಿಯೋಗ ಮದ್ದೂರು ಪಟ್ಟಣಕ್ಕೆ ಭೇಟಿ ಇಂದು 

ಸ್ವಾತಂತ್ರ್ಯ ಹೋರಾಟಕ್ಕೆ ಹೆಸರುವಾಸಿಯಾಗಿರುವ ಮದ್ದೂರು ತಾಲ್ಲೂಕಿನಲ್ಲಿ ಕೋಮುಗಲಭೆ ಬೇಡ. ಸರ್ಕಾರ ಜಿಲ್ಲೆಗೆ ಸಕ್ಕರೆ ಕಾರ್ಖಾನೆ ಅಭಿವೃದ್ಧಿ ಸೇರಿದಂತೆ ನಾಲೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ
ಪಿ.ಎಂ.ನರೇಂದ್ರಸ್ವಾಮಿ ಮಳವಳ್ಳಿ ಶಾಸಕ
ರಾಜ್ಯದಲ್ಲಿ 77 ಸಾವಿರ ಹಾಗೂ ಮಂಡ್ಯದಲ್ಲಿ 3700 ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯಾಗಿದೆ. ಕಿಡಿಗೇಡಿಗಳು ಎಸಗಿರುವ ಅಹಿತಕರ ಘಟನೆಯನ್ನು ದೊಡ್ಡದಾಗಿ ಬಿಂಬಿಸಿ ಶಾಂತಿ ಕದಡುವುದು ಬೇಡ
ದಿನೇಶ್ ಗೂಳಿಗೌಡ ವಿಧಾನಪರಿಷತ್‌ ಸದಸ್ಯ

‘ವಿವಿಧತೆಯಲ್ಲಿ ಏಕತೆ ಮಾತಿಗೆ ಸೀಮಿತವಾಗದಿರಲಿ’

ಜಿಲ್ಲಾಧಿಕಾರಿ ಕುಮಾರ ಮಾತನಾಡಿ ‘ಮದ್ದೂರಿನಲ್ಲಿ ನಡೆದ ಘಟನೆಯಿಂದಾಗಿ ಬೇಸರವಾಗಿದೆ. ಗಣೇಶ ಹಬ್ಬದ ಮುಂಚಿತವಾಗಿಯೇ ಎಲ್ಲಾ ಧರ್ಮದ ಮುಖಂಡರುಗಳೊಂದಿಗೆ ಸಭೆ ಕರೆದು ವ್ಯವಸ್ಥಿತವಾಗಿ ಹಬ್ಬವನ್ನು ಆಚರಿಸಲು ಸೂಚಿಸಲಾಗಿತ್ತು. ವಿವಿಧತೆಯಲ್ಲಿ ಏಕತೆ ಎಂದು ಕೇವಲ ಮಾತಿನಲ್ಲಿ ಹೇಳಿದರೆ ಸಾಲದು ಅದನ್ನು ಅನುಸರಿಸಬೇಕು. ನಾವೆಲ್ಲರೂ ಸೌಹಾರ್ದದಿಂದ ಬದುಕಬೇಕು. ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಕೆಲಸ ಯಾರು ಮಾಡಬಾರದು’ ಹೇಳಿದರು.

ಸುಳ್ಳು ಸುದ್ದಿ ಹರಡಿದರೆ ಕ್ರಮ: ಎಸ್ಪಿ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ ‘ಸಿ‌ಸಿಟಿವಿ ಕ್ಯಾಮೆರಾ ಹಾಗೂ ತಂತ್ರಜ್ಞಾನದ ಸಹಾಯದಿಂದ ಘಟನೆಗೆ ಕಾರಣರಾದವರನ್ನು ಬಂಧಿಸಲಾಗಿದೆ. ಘಟನೆ ಆಕಸ್ಮಿಕವೋ ಅಥವಾ ಪೂರ್ವನಿಯೋಜಿತವೂ ಎಂದು ತನಿಖೆ ನಡೆಸಲಾಗುವುದು. ಸಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಪಸರಿಸುವ ಮೂಲಕ ಸಮಾಜದ ಶಾಂತಿಯನ್ನು ಕದಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜಾರಿಗೊಳಿಸಲಾಗುವುದು’ ಎಂದು ಎಚ್ಚರಿಸಿದರು. ‘ಸೆ.10ರಂದು ಸಾಮೂಹಿಕ ಗಣೇಶ ವಿಗ್ರಹ ವಿಸರ್ಜನೆ ಆಯೋಜಿಸಲಾಗಿದೆ ಪೊಲೀಸ್ ಇಲಾಖೆ ಇದಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಿಶೇಷ ಟಾಸ್ಕ್ ಫೋರ್ಸ್ ತಂಡಗಳನ್ನು ರಚಿಸಲಾಗಿದೆ. ಮದ್ದೂರು ನಗರದಲ್ಲಿ ಶಾಂತಿ ಕಾಪಾಡಲು ಸಿದ್ದರಿದ್ದೇವೆ ಪೊಲೀಸ್ ಇಲಾಖೆ ನಿಮ್ಮ ಜತೆ ಇದೆ’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.