
ಮದ್ದೂರು: ಗ್ರಾಮೀಣ ಭಾಗದ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ತಾಲ್ಲೂಕಿನ ಕೊಪ್ಪ ಹೋಬಳಿಯ ತಗ್ಗಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಗಿನಮೆಳೆ ಗ್ರಾಮದಲ್ಲಿ ಗ್ರಾ.ಪಂ ಅಧ್ಯಕ್ಷ ವಿಜಯ್ ಗೌಡ ನೇತೃತ್ವದಲ್ಲಿ ಶನಿವಾರ ನಡೆದ ಅರಗಿನಮೆಳೆ ಉತ್ಸವದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಹಾಗೂ ರಕ್ತ ದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮದ ಸಂಸ್ಕೃತಿಯನ್ನು ಸಾರುವ ಹಬ್ಬವನ್ನು ತನ್ನ ಹುಟ್ಟೂರಿನಲ್ಲಿ ಗ್ರಾ.ಪಂ. ಅಧ್ಯಕ್ಷ ವಿಜಯ್ ಗೌಡ ಹಮ್ಮಿಕೊಳ್ಳುವ ಮೂಲಕ ತನ್ನೂರಿನ ಜನರ ಸೇವೆಗೆ ಹಾಗೂ ಗ್ರಾ.ಪಂ.ನ ಅಭಿವೃದ್ಧಿಗಾಗಿ ಶ್ರಮವಹಿಸಿ ದುಡಿಯುತ್ತಿದ್ದಾರೆ, ಅವರ ಜನಸೇವೆ ಹೀಗೆಯೇ ಮುಂದುವರೆಯಲಿ ಎಂದರು.
ಶಾಸಕನಾಗಿ ಗ್ರಾಮೀಣ ಭಾಗದ ರಸ್ತೆ ಸೇರಿದಂತೆ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಗಮನಕೊಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಕೊಪ್ಪ ಹೋಬಳಿಯ ಎಲ್ಲಾ ಗ್ರಾಮಗಳ ಮನೆಗಳಿಗೆ ಸುಮಾರು ₹35 ಕೋಟಿ ವೆಚ್ಚದಲ್ಲಿ ಜಲಜೀವನ್ ಮಿಷನ್‌ನಿಂದ ಕಾವೇರಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದರು.
ಕೊಪ್ಪ ಹೋಬಳಿಯಲ್ಲಿ ಈಗಾಗಲೇ 3 ಬಾರಿ ಜನಸ್ಪಂದನ ಕಾರ್ಯಕ್ರಮವನ್ನು ಮಾಡಿದ್ದೇನೆ, ರಾಜ್ಯ ಸರ್ಕಾರದ ಜನಪರ ಗ್ಯಾರಂಟಿ ಯೋಜನೆಗಳಿಂದ ಮಧ್ಯಮ, ಬಡವರ್ಗದ ಜನರು ಸೇರಿದಂತೆ ಮಹಿಳೆಯರಿಗೆ ಸಾಕಷ್ಟು ಅನುಕೂಲಗಳಾಗುತ್ತಿದ್ದು ನೆಮ್ಮದಿಯ ಜೀವನ ಮಾಡುತ್ತಿದ್ದಾರೆ ಎಂದರು.
ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಇದೇ ವೇಳೆ ಸಚಿವರು ಭೂಮಿ ಪೂಜೆಯನ್ನು ನೆರವೇರಿಸಿದರು. ಸಂಜೆ ಸರಿಗಮಪ ತಂಡದ ವತಿಯಿಂದ ಮನರಂಜನಾ ಕಾರ್ಯಕ್ರಮಗಳು ನಡೆದವು.
ಗ್ರಾ.ಪಂ ಅಧ್ಯಕ್ಷ ವಿಜಯ್ ಗೌಡ, ಮನ್‌ಮುಲ್ ನಿರ್ದೇಶಕ ಹರೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಜೋಗಿಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಘು, ಮುಖಂಡರಾದ ಎ.ಎಂ. ರಾಮಕೃಷ್ಣಯ್ಯ, ರವಿ, ಸೋಮಶಂಕರ್, ಮಹೇಶ್, ಸಚ್ಚಿದಾನಂದ, ಮುಡ್ಯಾ ಮಂಜು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.