ಮಂಡ್ಯ: ಮದ್ದೂರಿನಲ್ಲಿ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಹಿಂದೂ ಹಾಗೂ ಮುಸ್ಲಿಂ ಯುವಕರ ಗುಂಪುಗಳ ನಡುವೆ ಭಾನುವಾರ ರಾತ್ರಿ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಸಚಿವ ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ.
'ಮೆರವಣಿಗೆ ಸಂದರ್ಭದಲ್ಲಿ ಮಸೀದಿ ಕಡೆಯಿಂದ ಕಲ್ಲುಗಳನ್ನು ತೂರಿರುವ ಬಗ್ಗೆ ಮಾಹಿತಿ ಇದೆ. ಇದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ 21 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಯಾವ ಹಿಂದೂಗಳ ಮೇಲೂ ಪ್ರಕರಣ ದಾಖಲಾಗಿಲ್ಲ. ಗಲಭೆ ನಡೆದ ಕೆಲವೇ ಗಂಟೆಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಇಷ್ಟು ಬೇಗ ಕ್ರಮ ತೆಗೆದುಕೊಂಡ ಮತ್ತೊಂದು ಪ್ರಕರಣ ಇಲ್ಲ' ಎಂದು ಹೇಳಿದ್ದಾರೆ.
'ಗಲಭೆಗೆ ಬಿಜೆಪಿ, ಜೆಡಿಎಸ್ ಪ್ರಚೋದನೆ'
ಮುಂದುವರಿದು, 'ಬಿಜೆಪಿಯ ಹಾಗೂ ಜೆಡಿಎಸ್‌ನ ಕೆಲವು ನಾಯಕರು ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳಲು ಹೇಳಬಹುದಿತ್ತು. ಅದನ್ನು ಬಿಟ್ಟು, ಕೋಮುಗಲಭೆಗೆ ಪ್ರಚೋದನೆ ನೀಡಬಾರದಿತ್ತು' ಎಂದು ಟೀಕಿಸಿದ್ದಾರೆ.
'ಮದ್ದೂರಿನಲ್ಲಿ ಹಿಂದೆ ಎಂದೂ ಈ ರೀತಿಯ ಘಟನೆ ನಡೆದಿಲ್ಲ, ಹೊರಗಿನಿಂದ ಬಂದು ಯಾರೋ ಗಲಭೆ ಮಾಡಿರಬಹುದು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇದರ ಹಿಂದೆ ಯಾವುದೇ ಸಮಾಜದವರು ಇದ್ದರೂ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ರಾಜಕೀಯವಾಗಿ ನಮ್ಮನ್ನು ಎದುರಿಸಲಾಗದ ಬಿಜೆಪಿ, ಜೆಡಿಎಸ್‌ನವರು ಪ್ರಚೋದನೆ ನೀಡುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.
'ನಾವು ಯಾರನ್ನೂ ಓಲೈಸುವ ಕೆಲಸ ಮಾಡುತ್ತಿಲ್ಲ. ಹಾಗೇನಾದರೂ ಇದ್ದಿದ್ದರೆ, 21 ಜನರನ್ನೇಕೆ ಬಂಧಿಸುತ್ತಿದ್ದವು' ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಸಹಿಸಲು ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಆಗುತ್ತಿಲ್ಲ. ಸದನದಲ್ಲಿ ನಮನ್ನು ಎದುರಿಸಲು ಆಗದು ಎಂಬ ಕಾರಣಕ್ಕೆ, ಇಂತಹ ಘಟನೆಗಳನ್ನು ಪ್ರಚೋದಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.