
ಮದ್ದೂರು: ನಗರದ ತಾಲ್ಲೂಕು ಕಚೇರಿಯ ಬಳಿಯ ತಾಲ್ಲೂಕು ಪಂಚಾಯತಿಗೆ ಸೇರಿದ ಮಳಿಗೆಗಳನ್ನು ಒಂದು ವಾರದೊಳಗೆ ಖಾಲಿ ಮಾಡುವಂತೆ ತಾಲ್ಲೂಕು ಪಂಚಾಯಿತಿ ಇಒ ರಾಮಲಿಂಗಯ್ಯ ಸಂಬಂಧಪಟ್ಟ ಅಂಗಡಿಯ ಮಾಲೀಕರಿಗೆ ಗುರುವಾರ ನೋಟಿಸ್ ಜಾರಿ ಮಾಡಿದರು.
ಬಳಿಕ ಮಾತನಾಡಿ, ‘7 ವರ್ಷಗಳಿಂದ ತಾಲ್ಲೂಕು ಪಂಚಾಯಿತಿಯ 20 ಅಂಗಡಿಗಳಿಗೆ ಮರು ಟೆಂಡರ್ ನಡೆಸಿಲ್ಲ, ಇದರಿಂದಾಗಿ ಸರ್ಕಾರಕ್ಕೆ ಸಾಕಷ್ಟು ನಷ್ಟವಾಗಿದ್ದು, ಮಾಲೀಕರಿಗೆ ನೀಡಿದ್ದ ಅವಧಿಯೂ ಈಗಾಗಲೇ ಮುಕ್ತಾಯವಾಗಿದೆ. ಮಳಿಗೆ ಖಾಲಿ ಮಾಡುವಂತೆ ಮಳಿಗೆ ಮಾಲೀಕರಿಗೆ ಈಗಾಗಲೇ ನಾಲ್ಕೈದು ಬಾರಿ ನೋಟಿಸ್ ಜಾರಿ ಮಾಡಿ ತಿಳಿಸಲಾಗಿತ್ತು. ಆದರೆ ಈ ವಿಚಾರವಾಗಿ ಮಾಲೀಕರು ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆದ ಬಳಿಕ ಮಳಿಗೆಗಳನ್ನು ಖಾಲಿ ಮಾಡಿಸಿ ಮರು ಟೆಂಡರ್ ಟೆಂಡರ್ ನಡೆಸುವಂತೆ ನ್ಯಾಯಾಲಯವು ಕೂಡ ಆದೇಶ ಹೊರಡಿಸಿದ್ದು, ಹೀಗಾಗಿ ಅಂತಿಮವಾಗಿ ಇಂದು ನೋಟಿಸ್ ಜಾರಿ ಮಾಡಲಾಗುತ್ತಿದೆ’ ಎಂದರು.
‘ಈಗಿರುವ ಹಳೆಯ ಅಂಗಡಿಗಳನ್ನು ನೆಲಸಮಗೊಳಿಸಿದ ಬಳಿಕ ನೂತನ ಮಳಿಗೆಗಳನ್ನು ನಿರ್ಮಿಸಿ ಬಳಿಕ ಮರು ಟೆಂಡರ್ ಕರೆಯಲಿದ್ದು, ಅಲ್ಲಿ ಅಂಗಡಿಗಳನ್ನು ಪಡೆಯಬಹುದಾಗಿದೆ’ ಎಂದರು.
‘ಅವಧಿ ನೀಡಿರುವ ದಿನಾಂಕದೊಳಗೆ ಅಂಗಡಿಗಳನ್ನು ಸ್ವಯಂಪ್ರೇರಿತರಾಗಿ ಖಾಲಿ ಮಾಡಬೇಕು. ಇಲ್ಲದಿದ್ದರೆ ಮೂಲ ಸೌಕರ್ಯಗಳನ್ನು ಕಡಿತಗೊಳಿಸಲಾಗುವುದು. ಪೊಲೀಸ್ ಇಲಾಖೆಯ ರಕ್ಷಣೆಯೊಂದಿಗೆ ಮಳಿಗೆಗಳನ್ನು ತಾಲ್ಲೂಕು ಪಂಚಾಯತಿಯ ಸುಪರ್ದಿಗೆ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ತಾ.ಪಂ. ಯೋಜನಾಧಿಕಾರಿ ಸುರೇಶ್, ಅಧಿಕಾರಿಗಳಾದ ಸೀತಾರಾಂ, ಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.