
ಶ್ರೀರಂಗಪಟ್ಟಣ: ಮಾಘ ಹುಣ್ಣಿಮೆ ಅಂಗವಾಗಿ ಇಲ್ಲಿಗೆ ಸಮೀಪದ ಗಂಜಾಂ ನಿಮಿಷಾಂಬ ದೇವಾಲಯದ ಬಳಿ, ಕಾವೇರಿ ನದಿಯಲ್ಲಿ ಸಹಸ್ರಾರು ಭಕ್ತರು ಭಾನುವಾರ ಮಾಘ ಸ್ನಾನ ಮಾಡಿದರು.
ಮುಂಜಾನೆ ಎರಡು ಗಂಟೆಯಿಂದಲೇ ಮಾಘ ಸ್ನಾನಕ್ಕಾಗಿ ಜನರು ಇತ್ತ ಬರಲಾರಂಭಿಸಿದರು. ಬೆಳಿಗ್ಗೆ 6 ಗಂಟೆ ವೇಳೆಗೆ ನದಿ ತೀರದಲ್ಲಿ ಜನ ಜಾತ್ರೆಯೇ ಸೇರಿತ್ತು. ಶಾಸಕ ರಮೇಶ ಬಂಡಿಸಿದ್ದೇಗೌಡ ನಸುಕಿನಲ್ಲೇ ಕಾವೇರಿ ನದಿಯಲ್ಲಿ ಮಾಘ ಸ್ನಾನ ಮಾಡಿ ದೇವಿಗೆ ಪೂಜೆ ಸಲ್ಲಿಸಿದರು. ನದಿಯಲ್ಲಿ ಸ್ನಾನ ಮಾಡಿದ ಭಕ್ತರು ನಾರುಮಡಿಯಲ್ಲಿ ನಿಮಿಷಾಂಬೆಯ ದರ್ಶನ ಪಡೆದರು. ಸೂರ್ಯನಿಗೆ ಅರ್ಘ್ಯ ಅರ್ಪಿಸಿದರು. ಮಹಿಳಾ ಭಕ್ತರು ಕಾವೇರಿ ನದಿಗೆ ಬೆಲ್ಲ ಮತ್ತು ತುಪ್ಪದ ಆರತಿ ಬೆಳಗಿದರು.
ದೇವಾಲಯದಲ್ಲಿ ಮುಂಜಾನೆ ಒಂದು ಗಂಟೆಗೆ ದೇವಿಗೆ ಪಂಚಾಮೃತ ಮಹಾಭಿಷೇಕ ನಡೆಯಿತು. ಬಳಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ರಾಜ್ಯ, ಹೊರ ರಾಜ್ಯಗಳಿಂದ ಬಂದಿದ್ದ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ತೆರಳಿ ದೇವಿಯ ದರ್ಶನ ಪಡೆದರು. ದೇವಾಲಯದ ರಾಯಗೋಪುರದ ಮುಂದೆ ದೀಪದ ಸೇವೆ ಸಲ್ಲಿಸಿದರು. ಹರಕೆ ಹೊತ್ತವರು ಉರುಳುಸೇವೆಯನ್ನೂ ನಡೆಸಿದರು.
ಶ್ರೀಚಕ್ರ ಸಹಿತ ನಿಮಿಷಾಂಬ ದೇವಿಗೆ ನಿರಂತರವಾಗಿ ಪೂಜಾ ಕೈಂಕರ್ಯಗಳು ನಡೆದವು. ಲೋಕ ಕಲ್ಯಾಣಾರ್ಥವಾಗಿ ಗಣಹೋಮ, ನಕ್ಷತ್ರ ಹೋಮ, ಸತ್ಯನಾರಾಯಣಸ್ವಾಮಿ ಪೂಜೆ ಇತರ ವಿಧಿ, ವಿಧಾನಗಳು ನಡೆದವು. ಮೈಸೂರು ಇತರೆಡೆಗಳಿಂದ ಆಗಮಿಸಿದ್ದ ಗಾಯಕರು ದೇವಾಲಯದ ಆವರಣದಲ್ಲಿ ಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು. ಬೆಂಗಳೂರಿನ ಶ್ರೀಸಾಯಿ ಅನ್ನಪೂರ್ಣೇಶ್ವರಿ ಟ್ರಸ್ಟ್ ವತಿಯಿಂದ ಪ್ರಸಾದ ವಿತರಣೆ ನಡೆಯಿತು.
ಭಕ್ತರ ಅನುಕೂಲಕ್ಕಾಗಿ ನದಿ ತೀರದಲ್ಲಿ ವಿದ್ಯುತ್ ದೀಪಗಳು, ಬಟ್ಟೆ ಬದಲಿಸುವ ಮನೆ, ತಾತ್ಕಾಲಿಕ ಶೌಚಾಲಯ, ಸಿಸಿ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿತ್ತು. ಗಂಜಾಂ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಕಂಡು ಬಂತು. ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
‘ಈ ಬಾರಿ ಮಾಘ ಮಾಸದ ಜತೆಗೆ ಹುಣ್ಣಿಮೆ ಮತ್ತು ಭಾನುವಾರ ಜತೆಯಾಗಿ ಬಂದಿವೆ. ಇಂತಹ ವಿಶೇಷ ದಿನವನ್ನು ರವಿ ಪುಷ್ಯ ಯೋಗ ಎಂದು ಕರೆಯಲಾಗುತ್ತದೆ. ರವಿ ಪುಷ್ಯ ಯೋಗದಲ್ಲಿ ನದಿಯಲ್ಲಿ ಮಾಘ ಸ್ನಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಪಾಪಗಳು ಕ್ಷಯವಾಗುತ್ತವೆ. ದೈವದ ಕೃಪೆ ದೊರೆಯುತ್ತದೆ’ ಎಂದು ಬೆಂಗಳೂರಿನ ಜಯದೇವ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಶ್ರೀಧರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.